ಶಿವಮೊಗ್ಗ ನಗರದ ಶಾಸಕ ಎಸ್.ಎನ್. ಚನ್ನಬಸಪ್ಪನವರು ಇನ್ನಾದರೂ ಕಿಡಿಗೇಡಿತನದ ಹೇಳಿಕೆಗಳನ್ನು ಕೈಬಿಡಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಕ್ಫ್ ವಿವಾದ ರಾಜ್ಯದೆಲ್ಲೆಡೆ ಹಬ್ಬುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದಕ್ಕೆ ಸ್ಪಷ್ಟನೆಕೊಟ್ಟಿದ್ದಾರೆ. ರೈತರ ಹೆಸರಿನಲ್ಲಿ ಇರುವ ಜಮೀನಿನಲ್ಲಿ ಆಕಸ್ಮಾತ್ ವಕ್ಫ್ ಹೆಸರಿನಲ್ಲಿ ಪಹಣಿ ಇದ್ದರೆ ಅದನ್ನು ತೆಗೆದು ಹಾಕಲು ಹೇಳಿದ್ದೇನೆ. ರೈತರು ಆತಂಕ ಪಡುವುದು ಬೇಡ ಎಂದಿದ್ದಾರೆ. ಆದರೂ ಕೂಡ ಬಿಜೆಪಿಯವರು ಈ ವಿಷಯವನ್ನು ಉಪಚುನಾವಣೆಗಳ ಹಿನ್ನಲೆಯಲ್ಲಿ ರಾಜಕಾರಣಗೊಳಿಸಲು ಯತ್ನಿಸುತ್ತಿದ್ದಾರೆ ಎಂದರು.

ಅದರಲ್ಲೂ ಶಾಸಕ ಎಸ್.ಎನ್. ಚನ್ನಬಸಪ್ಪನವರು ಜಮೀರ್ ಅಹಮ್ಮದ್ ಅವರು ಶಿವಮೊಗ್ಗಕ್ಕೆ ಬರುವುದು ಬೇಡ, ಇಲ್ಲಿಯೂ ಕೂಡ ಅವರು ವಕ್ಫ್ ಆಸ್ತಿಯನ್ನು ಉಳಿಸಲು ಬರುತ್ತಾರೆ. ಇದು ಹಿಂದೂ ಸಮಾಜಕ್ಕೆ ಗೊತ್ತಾಗುತ್ತದೆ. ಆಗಲು ಕೂಡ ಜನರು ಅವರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದು ಪ್ರಚೋದನಕಾರಿ ಹೇಳಿಕೆಯಾಗಿದೆ ಎಂದರು.

ಈಗಾಗಲೇ ಈ ಹಿಂದೆ ಎಸ್.ಎನ್. ಚನ್ನಬಸಪ್ಪನವರು ಹೊಡಿಬಡಿಕಡಿ ಮಾತಿಗೆ ಪ್ರಸಿದ್ಧರಾದವರು ಮುಖ್ಯಮಂತ್ರಿಗಳ ಚಂಡನ್ನೇ ರುಂಡಾಡುತ್ತೇವೆ ಎಂದವರು ಇವರದು ಬರೀ ಬೆಂಕಿ ಹಚ್ಚುವ ಕೆಲಸವಾಗಿದೆ. ಇವರಿಗೆ ಶಿವಮೊಗ್ಗ ಶಾಂತಿಯಿಂದ ಇರುವುದು ಬೇಕಾಗಲ್ಲ. ಯಾವಾಗಲೂ ೧೪೪ ಸೆಕ್ಷನ್ ಜರಿಯಲ್ಲಿ ಇರಬೇಕು. ಇದು ಇವರ ಆಸ್ತಿಯಾಗಿದೆ. ವಕ್ಫ್ ಬೋರ್ಡ್‌ನಲ್ಲಿ ಸುಮಾರು ೧೫ಕ್ಕೂ ಹೆಚ್ಚು ಬಿಜೆಪಿಯ ಸದಸ್ಯರು ಇದ್ದಾರೆ ಅಲ್ಲವೇ ಎಂದರು.

ಸಚಿವ ಜಮೀರ್ ಅಹಮ್ಮದ್ ಖಾನ್‌ರವರು ಶಿವಮೊಗ್ಗಕ್ಕೆ ಬರುವುದು ಇಲ್ಲಿನ ಆಶ್ರಯ ಮನೆಗಳ ವಿಚಾರಕ್ಕಾಗಿ. ಅಲ್ಪಸಂಖ್ಯಾತರಿಗೆ ಮನೆ ಕೊಡಲು ಅವರು ಬರುತ್ತಿಲ್ಲ, ಮನೆಗಾಗಿ ಕಾಯುತ್ತ ಇರುತ್ತಾರೆ. ಅಲ್ಲದೇ ಶಿವಮೊಗ್ಗಕ್ಕಾಗಿಯೇ ೧೨೫ ಕೋಟಿ ರೂ.ಗಳ ಅನುದಾನವನ್ನು ಕೂಡ ಸರ್ಕಾರವೇ ಬಿಡುಗಡೆ ಮಾಡಿ ಫಲಾನುಭವಿಗಳ ಹಣವನ್ನು ಕಟ್ಟಬೇಕಾಗಿದೆ. ಹೀಗಿದ್ದು ಶಾಸಕರ ಈ ಮಾತು ಸರಿಯಲ್ಲ ಎಂದರು.

ಉಪಚುನಾವಣೆ ಮುಗಿದ ನಂತರ ಸಚಿವರು ಬಂದೇ ಬರುತ್ತಾರೆ. ನಾವು ಅವರಿಗೆ ಅದ್ಧೂರಿ ಸ್ವಾಗತ ಕೋರುತ್ತೇವೆ. ಅವರು ಬಂದರೆ ಆಶ್ರಯ ಮನೆಗಳ ಹಂಚಿಕೆಗೆ ಅನುಕೂಲವಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರವಿಕುಮಾರ್, ದೇವೇಂದ್ರಪ್ಪ, ಖಲೀಂ ಪಾಶಾ, ಎಸ್.ಟಿ. ಚಂದ್ರಶೇಖರ್, ಮಧು, ಬಾಲಾಜಿ, ಯಮುನಾರಂಗೇಗೌಡ  ಇದ್ದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *