ಶ್ರೀ ಕೃಷ್ಣಮೂರ್ತಿ ಪೋಲಿಸ್ ಉಪಾಧೀಕ್ಷಕರು, ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ ಶಿವಮೊಗ್ಗ ರವರು ಕೋಣಂದೂರಿನ ಪದವಿ ಕಾಲೇಜಿನಲ್ಲಿ ಸೈಬರ್ ಕ್ರೈಂ ಮತ್ತು ಮಾದಕ ದ್ರವ್ಯದ ದುಷ್ಪರಿಣಾಮಗಳು ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು, ಕಾಲೇಜಿನ ವಿಧ್ಯಾರ್ಥಿಗಳಿಗೆ ಈ ಕೆಳಕಂಡ ಮಾಹಿತಿ ನೀಡಿರುತ್ತಾರೆ.

1) ವಿಧ್ಯಾರ್ಥಿಗಳು ಹಾಗೂ ಯುವಕರು ಸುಲಭವಾಗಿ ಸೈಬರ್ ವಂಚಕರ ಜಾಲಕ್ಕೆ ತುತ್ತಾಗುತ್ತಿದ್ದು, ಸಾಮಾಜಿಕ ಜಾಲತಾಣ ಹಾಗೂ ಆನ್ ಲೈನ್ ನ ಬಳಕೆಯ ಬಗ್ಗೆ ಇರುವ ಮಾಹಿತಿಯ ಕೊರತೆಯಿಂದ ಸೈಬರ್ ವಂಚಕರು ನಮ್ಮನ್ನು ಮೋಸದ ಜಾಲಕ್ಕೆ ತಳ್ಳುತ್ತಾರೆ. ಆದ್ದರಿಂದ ಸಾಮಾಜಿಕ ಜಾಲತಾಣ & ಆನ್ ಲೈನ್ ಬಳಕೆ ಮಾಡುವಾಗ ಎಚ್ಚರದಿಂದಿರಿ.

2) ಸೈಬರ್ ವಂಚಕರು ತಮ್ಮನ್ನು ಸರ್ಕಾರಿ ಅಧಿಕಾರಿಗಳೆಂದು ಮತ್ತು ಬ್ಯಾಂಕ್ ನ ಮ್ಯಾನೇಜರ್ ಗಳೆಂದು ಪರಿಚಯಿಸಿಕೊಂಡು, ನಿಮ್ಮ ATM, CVV, Adhar Card ನಂಬರ್ ಹಾಗೂ ಮೊಬೈಲ್ ನ ಓಟಿಪಿ ಪಡೆದುಕೊಂಡು ನಿಮ್ಮ ಖಾತೆಯಿಂದ ಹಣವನ್ನು ಬೇರೆ ನಖಲಿ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡುತ್ತಾರೆ, ಆದ್ದರಿಂದ ಅಪರಿಚಿತ ಕರೆಗಳನ್ನು ಏಕಾಏಕಿ ನಂಬಿ ನಿಮ್ಮ ಖಾಸಗೀ ಮಾಹಿತಿ ನೀಡಬೇಡಿ. ಯಾವುದೇ ಬ್ಯಾಂಕ್ ನವರು ನಿಮ್ಮ ಖಾತೆ, ATM, OTP ಹಾಗೂ ಇತ್ಯಾ ಮಾಹಿತಿಯನ್ನು ಕೇಳುವುದಿಲ್ಲ.

3) ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಖಾಸಗೀ ಮಾಹಿತಿಯನ್ನು ನೀವು ಹಂಚಿಕೊಂಡಲ್ಲಿ, ಸೈಬರ್ ವಂಚಕರು ಸದರಿ ಮಾಹಿತಿಯನ್ನು ನಿಮ್ಮ ವಿರುದ್ಧವೇ ಬಳಕೆ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕುತ್ತಾರೆ. ಹಣ ನೀಡದೇ ಇದ್ದಲ್ಲಿ ನಿಮ್ಮ ಫೋಟೋ ಮಾರ್ಫಿಂಗ್ ಮಾಡಿ ಮಾನ ಹರಣ ಮಾಡುವುದಾಗಿ ನಿಮ್ಮಿಂದ ಹಣ ಕೀಳುತ್ತಾರೆ. ಆದ್ದರಿಂದ ನಿಮ್ಮ ವಿಡಿಯೋ, ಫೋಟೋ, ಇತರೆ ದಾಖಲಾತಿಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ.

4) ಒಂದು ವೇಳೆ ಸೈಬರ್ ಕ್ರೈಂ ಗೆ ಒಳಗಾದರೆ ಭಯ ಪಡ ಬೇಡಿ, ಕೂಡಲೇ ಹತ್ತಿರದ ಪೊಲೀಸ್ ಠಾಣೆ / ಸಿಇಎನ್ ಪೊಲೀಸ್ ಠಾಣೆ / 112 ಸಹಾಯವಾಣಿ / 1930 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ. ನಿಮ್ಮ ಖಾತೆಯಿಂದ ವರ್ಗಾವಣೆಗೊಂಡ ಹಣವನ್ನು ಗೋಲ್ಡನ್ ಅವರ್ ನಲ್ಲಿ ಫ್ರೀಸ್ ಮಾಡಲು ಸಾಧ್ಯವಿರುತ್ತದೆ.

5) ಮಾದಕ ದ್ರವ್ಯ ಎಂಬುದು ಜಾಗತಿಕ ಪಿಡುಗಾಗಿದ್ದು, ಮಾದಕ ದ್ರವ್ಯ ಸೇವನೆಯಿಂದ ವ್ಯಸನಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಹಾಗೂ ಸಾಮಾಜಿಕ ಹಾಗೂ ಶೈಕ್ಷಣಿಕ ಜೀವನದ ಮೇಲೂ ಸಹಾ ದುಷ್ಪರಿಣಾಮವನ್ನು ಬೀರುತ್ತವೆ. ಆದ್ದರಿಂದ ಮಾದಕ ದ್ರವ್ಯದ ವ್ಯಸನಕ್ಕೆ ಒಳಗಾಗ ಬೇಡಿ.

6) ಮಾದಕ ದ್ರವ್ಯ ಮಾರಾಟ, ಸಾಗಾಟ, ಸಂಗ್ರಹಣೆ ಹಾಗೂ ಸೇವನೆ ಮಾಡುವುದು ಕಾನೂನಿನ ರೀತ್ಯಾ ಶಿಕ್ಷಾರ್ಹ ಅಪರಾಧವಾಗಿದ್ದು, ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರೂ ಒಟ್ಟಾಗಿ ಕೈ ಜೋಡಿಸೋಣ. ಮಾದಕ ವಸ್ತುಗಳನ್ನು ಮಾರಾಟ / ಸಂಗ್ರಹಣೆ ಬಗ್ಗೆ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿ, ಅಂತಹರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿಧ್ಯಾರ್ಥಿಗಳು, ಹಾಗೂ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.