ಶಿವಮೊಗ್ಗ: ಅಯ್ಯೋಧ್ಯಾ-ಕಾಶಿ ಯಾತ್ರೆಯಿಂದ ಜನರಲ್ಲಿ ಭಕ್ತಿ ಮತ್ತು ಆಧ್ಯಾತ್ಮದ ಬಗ್ಗೆ ಇನ್ನಷ್ಟು ವಿಶ್ವಾಸ, ನಂಬಿಕೆ ಹೆಚ್ಚಾಯಿತು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಒಂದು ವಾರದ ಅಯ್ಯೋಧ್ಯಾ-ಕಾಶಿ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ ವಾಪಸು ಬಂದ ಸಂದರ್ಭದಲ್ಲಿ ಹಿರಿಯ ವಕೀಲ ಅಶೋಕ ಜಿ.ಭಟ್ಟ ಮತ್ತು ಸ್ನೇಹಿತರು ಅಭಿನಂದಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, 1600ಮಕ್ಕೂ ಹೆಚ್ಚು ಜನರನ್ನು ವಿಶೇಷ ರೈಲಿನಲ್ಲಿ ಕರೆದು ಕೊಂಡು ಹೋಗಿ ಬರುವುದು ಸುಲಭದ ಮಾತಾಗಿರಲಿಲ್ಲ. ಈ ಯಾತ್ರೆ ಯಾವುದೇ ಜಾತಿ ಮತ ಪಂಥವಿಲ್ಲದೆ ಏಕತ್ರ ಭಾವನೆಯಿಂದ ಬಡವರು, ಮಧ್ಯಮ ವರ್ಗದವರು, ಶ್ರೀಮಂತರ ಕುಟುಂಬದವರೆಲ್ಲ ಭಾಗವಹಿಸಿದ್ದು ವಿಶೇಷವಾಗಿತ್ತು ಎಂದರು.
ಪ್ರಯಾಣದಲ್ಲಿ ಯಾರಿಗೂ ಎಲ್ಲಿಯೂ ತೊಂದರೆಯಾಗಲಿಲ್ಲ. ಎಲ್ಲರೂ ಅತ್ಯುತ್ಸಾಹದಿಂದ ಭಗವಂತನ ನಾಮಸ್ಮರಣೆ, ಭಜನೆಗಳನ್ನು ಹಾಡುತ್ತಾ ಭಕ್ತಿ ಲೋಕದಲ್ಲಿ ಮೈಮರೆಯುತ್ತಿದ್ದರು. ಆಧ್ಯಾತ್ಮದ ಪರಾಕಾಷ್ಟೆಯನ್ನು ತಲುಪುತ್ತಿದ್ದರು.
ಅಯ್ಯೋಧ್ಯೆ-ಕಾಶಿಯಲ್ಲಿದ್ದಷ್ಟು ಸಮಯ ಇಲ್ಲಿಂದ ಹೋದ ಯಾತ್ರಾರ್ಥಿಗಳು ಭಕ್ತಿ ಭಾವದಲ್ಲಿ ಮಿಂದೆದ್ದರು ಎಂದು ತಿಳಿಸಿದರು.
ಅಯ್ಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ನಿರ್ಮಾಣದ ಆರಂಭದಿಂದ ಪೂರ್ಣಗೊಳ್ಳುವ ತನಕ ಉಸ್ತುವಾರಿ ವಹಿಸಿದ್ದ ಗೋಪಾಲಜೀ ಅವರು ಈ ಯಾತ್ರಾರ್ಥಿಗಳನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಲ್ಲದೆ ತಮ್ಮ ತಂಡದ ಕಾರ್ಯವನ್ನು ಶ್ಲಾಘಿಸಿದರು ಎಂದರು.
ಕಾಶಿ ಜಂಗಮ ಮಠದ ಶ್ರೀಗಳೂ ಈ ಕಾರ್ಯವನ್ನು ಮುಕ್ತ ಕಂಠದಿಂದ ಪ್ರಶಸಿಸಿ ಆಶೀರ್ವದಿಸಿದರು ಎಂದು ತಿಳಿದರು.
ತಾವು ಯಾತ್ರೆಗೆ ಹೊರಟ ನಂತರ ನೂರಾರು ಜನರು ಫೋನ್ ಮಾಡಿ ತಾವೂ ನಿಮ್ಮೊಂದಿಗೆ ಬರುತ್ತಿದ್ದೆವು ಎಂದು ಹೇಳುತ್ತಿದ್ದುದು ಯಾತ್ರೆಯ ಮಹತ್ವ, ಹಾಗೂ ಜನರು ತಮ್ಮ ಮೇಲೆ ಇಟ್ಟ ವಿಶ್ವಾಸವನ್ನು ತೋರಿಸಿತು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲ ಅಶೋಕ.ಜಿ.ಭಟ್ಟ, ಇದೊಂದು ಘನ ಕಾರ್ಯ. ಎಲ್ಲರಿಂದಲೂ ಇದು ಸಾಧ್ಯವಿಲ್ಲ. ಸಾವಿರದಲ್ಲಿ ಒಬ್ಬರಿಗೆ ಮಾತ್ರ ಇಂಥ ಅವಕಾಶ ಲಭಿಸುತ್ತದೆ. ಇಂಥಹ ಧಾರ್ಮಿಕ, ಆಧ್ಯಾತ್ಮಿಕ ಕೆಲಸಗಳಿಂದ ಸ್ವಾಭಾವಿಕವಾಗಿಯೇ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದರು.
ಯಾತ್ರೆಯ ರೂವಾರಿ ಕೆ.ಇ.ಕಾಂತೇಶ್, ಜಯಲಕ್ಷ್ಮೀ ಈಶ್ವರಪ್ಪ, ಡಾ.ಬಾಲಕೃಷ್ಣ ಹೆಗಡೆ ಮೊದಲಾದವರಿದ್ದರು.