ಶ್ರೀಮತಿ ಸ್ವಪ್ನ, ಪಿಎಸ್ಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ, ಚೆನ್ನಮ್ಮ ಪಡೆ ಉಸ್ತುವಾರಿ ಅಧಿಕಾರಿ ರವರು ಶಿವಮೊಗ್ಗ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿರುವ ರಿಲಯನ್ಸ್ ಮಾರ್ಟ್ ನಲ್ಲಿ ಮಹಿಳಾ ಸಿಬ್ಬಂಧಿಗಳಿಗೆ ಮಹಿಳಾ ಸುರಕ್ಷತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕೆಳಕಂಡ ಮಾಹಿತಿ ನೀಡಿರುತ್ತಾರೆ.
1) ಸಾಮಾಜಿಕ ಜಾಲತಾಣ / ಆನ್ ಲೈನ್ ನಲ್ಲಿ ಚಾಟಿಂಗ್ / ಫೇಸ್ ಬುಕ್, ಇನ್ಸ್ಟಾಗ್ರಾಮ್ ಬಳಕೆ ಮಾಡುವಾಗ ಎಚ್ಚರಿಕೆವಹಿಸಿ. ನಿಮ್ಮ ಖಾಸಗಿ ಮಾಹಿತಿ / ಫೋಟೋಗಳನ್ನು ಹಂಚಿಕೊಳ್ಳಬೇಡಿ, ಅವುಗಳನ್ನು ನಿಮ್ಮ ವಿರುದ್ಧವೇ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.
2) ಯಾರೇ ಆಗಲಿ ತಮ್ಮನ್ನು ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ನಿಮಗೆ ಕರೆ ಮಾಡಿ, ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್, ಎಟಿಎಂ ನಂಬರ್, ಎಟಿಎಂ ಪಿನ್ ನಂಬರ್ ಕೊಡಿ ಎಂದು ಕೇಳಿದಾಗ ಯಾವುದೇ ಕಾರಣಕ್ಕೂ ಕೊಡಬೇಡಿ. ಒಂದು ವೇಳೆ ಮಾಹಿತಿ ನೀಡಿದ್ದೇ ಆದಲ್ಲಿ, ನಿಮ್ಮ ಖಾತೆಯಲ್ಲಿರುವ ಹಣವನ್ನು ವರ್ಗಾವಣೆ ಮಾಡಿಕೊಂಡು ನಿಮಗೆ ಮೋಸ ಮಾಡುತ್ತಾರೆ. ಯಾವುದೇ ಬ್ಯಾಂಕ್ ಅಧಿಕಾರಿಗಳು ನಿಮ್ಮ ಖಾಸಗೀ / ವೈಯಕ್ತಿಕ ಮಾಹಿತಿಗಳನ್ನು ಕೇಳುವುದಿಲ್ಲ.
3) ಸಾರ್ವಜನಿಕ ಸ್ಥಳದಲ್ಲಿ ನಿಮಗೆ ಯಾವುದೇ ಸಮಸ್ಯೆ, ಉಪಟಳ, ಕಿರಿಕಿರಿ ನೀಡುವವರಿದ್ದರೆ ಕೂಡಲೇ 112 ಸಹಾಯವಾಣಿ / ಚೆನ್ನಮ್ಮ ಪಡೆಗೆ ಮಾಹಿತಿ ನೀಡಿ ತೊಂದರೆ ನೀಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
4) ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುವಾಗ ಹಾಗೂ ಸಂತೆ, ಜಾತ್ರೆ, ಮಾರುಕಟ್ಟೆ, ಬಸ್ಸು ಹಾಗೂ ರೈಲ್ವೇ ನಿಲ್ದಾಣದಂತಹ ಜನ ಹೆಚ್ಚು ಸೇರಿರುವ ಕಡೆಗಳಲ್ಲಿ, ನಿಮ್ಮ ಬೆಲೆ ಬಾಳುವ ಆಭರಣ ಹಾಗೂ ನಿಮ್ಮ ವಸ್ತುಗಳ ಮೇಲೆ ಗಮನ ಇರಲಿ, ಕಳ್ಳರು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳ್ಳತನ ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ವಸ್ತುಗಳ ಮೇಲೆ ಗಮನ ಇರಲಿ.
5) ಕಾನೂನಿನಲ್ಲಿ ಮಹಿಳೆ ಹಾಗೂ ಮಕ್ಕಳಿಗಿರುವ ವಿಶೇಷ ಹಕ್ಕುಗಳ ಬಗ್ಗೆ ಮತ್ತು ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನೀಷೇಧ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು.
ಕಾನೂನನ್ನು ಪಾಲಿಸಿ, ಕಾನೂನನ್ನು ಗೌರವಿಸಿ ಆಗ ಕಾನೂನು ನಿಮ್ಮನ್ನು ರಕ್ಷಿಸುತ್ತದೆ. ನಿಮ್ಮ ಸುರಕ್ಷತೆ ನಮ್ಮ ಹೊಣೆ.ಈ ಸಂದರ್ಭದಲ್ಲಿ ಚೆನ್ನಮ್ಮ ಪಡೆಯ ಪೊಲೀಸ್ ಅಧಿಕಾರಿ, ಸಿಬ್ಬಂಧಿಗಳು ಹಾಗೂ ರಿಲಯನ್ಸ್ ಮಾರ್ಟ್ ನ ಅಧಿಕಾರಿ, ಸಿಬ್ಬಂಧಿಗಳು ಉಪಸ್ಥಿತರಿದ್ದರು.