ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಅಧ್ಯಕ್ಷತೆಯಲ್ಲಿ, ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಶಿವಮೊಗ್ಗ-ಬಿ ಉಪ ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮುಖಂಡರ ಸಭೆಯನ್ನು ಹಮ್ಮಿಕೊಂಡಿದ್ದು, ಸಭೆಯಲ್ಲಿ ಸಲಹೆ ಸೂಚನೆಗಳನ್ನು ನೀಡಲಾಯಿತು.
1) ಹೆಚ್ಚಿನ ಸಂಖ್ಯೆಯಲ್ಲಿ ಬೀಟ್ ಜಾರಿ ಮಾಡುವಂತೆ ಕೋರಿದ್ದು, ಬೀಟ್ ವ್ಯವಸ್ಥೆಯನ್ನು ಬಲ ಪಡಿಸುವ ಉದ್ದೇಶದಿಂದ ಗ್ರಾಮಾಂತರ ಗಸ್ತು ಮತ್ತು ನಗರ ವ್ಯಾಪ್ತಿಯ ಗಸ್ತು ಎಂದು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗಿರುತ್ತದೆ ಹಾಗೂ ಬೀಟ್ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಮೇಲ್ವಿಚಾರಣೆ ಮಾಡುವ ಸಂಬಂಧ ಸ್ಮಾರ್ಟ್ ಇ – ಬೀಟ್ ತಂತ್ರಾಂಶವನ್ನು ಅನುಷ್ಠಾನ ಮಾಡಿದ್ದು, ಎಲ್ಲಾ ಹಂತದ ಅಧಿಕಾರಿಗಳು ತಮ್ಮ ತಮ್ಮ ಠಾಣಾ ವ್ಯಾಪ್ತಿಯ ಬೀಟ್ ಅನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.
2) ಮೈಕ್ರೋ ಪೈನಾನ್ಸ್ ಕಂಪನಿಗಳವರು ಸಾಲ ವಸೂಲಿ ಮಾಡುವಾಗ ಯಾವುದೇ ರೀತಿಯ ದೌರ್ಜನ್ಯ / ಕಿರುಕುಳ ನೀಡಿದರೆ ನೊಂದವರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಬಂದು ನೇರವಾಗಿ ದೂರು ನೀಡಬಹುದಾಗಿರುತ್ತದೆ. ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ.
3) ದೂರು ನೀಡಲು ಪೊಲೀಸ್ ಠಾಣೆಗಳಿಗೆ ಹೋದಾಗ ಯಾವುದೇ ಪೊಲೀಸ್ ಅಧಿಕಾರಿಗಳು ದೂರು ತೆಗೆದುಕೊಳ್ಳಲು ತಡಮಾಡಿದರೆ / ನಿರಾಕರಿಸಿದರೆ ನೀವು ಪೊಲೀಸ್ ಇಲಾಖಾ ಮೇಲಾಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಬಹುದಾಗಿರುತ್ತದೆ.
4) ಮಾದಕ ವಸ್ತು ಗಾಂಜಾ ಮಾರಾಟ, ಸಾಗಾಟ, ಸಂಗ್ರಹ, ಬೆಳೆಯುವುದು ಮತ್ತು ಸೇವನೆ ಮಾಡುವುದು ಕಾನೂನು ರೀತ್ಯಾ ಅಪರಾಧವಾಗಿದ್ದು, ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇದ್ದಲ್ಲಿ, ತಮ್ಮ ಹತ್ತಿರದ ಪೊಲೀಸ್ ಠಾಣೆ / 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ, ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುತ್ತದೆ.
5) ಶಿವಮೊಗ್ಗ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಸಂಬಂಧ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿರುತ್ತದೆ ಹಾಗೂ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಿದ್ದು, ಪೊಲೀಸ್ ಸಿಬ್ಬಂಧಿಗಳನ್ನು ಸಹಾ ನೇಮಿಸಲಾಗಿರುತ್ತದೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಐಎಂವಿ ಕಾಯ್ದೆ ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ.
ಈ ಸಂದರ್ಭದಲ್ಲಿ ಶ್ರೀ ಸಂಜೀವ್ ಕುಮಾರ್ ಟಿ, ಡಿ.ವೈ.ಎಸ್.ಪಿ ಶಿವಮೊಗ್ಗ-ಬಿ ಉಪವಿಭಾಗ, ಶ್ರೀ ಸಿದ್ದೇಗೌಡ, ಪಿಐ ಜಯನಗರ ಪೊಲೀಸ್ ಠಾಣೆ, ಶ್ರೀ ಸತ್ಯನಾರಾಯಣ್ ಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ, ಶ್ರೀಮತಿ ಚಂದ್ರಕಲಾ ಪಿಐ ವಿನೋಬನಗರ ಪೊಲೀಸ್ ಠಾಣೆ, ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮುಖಂಡರು ಉಪ ಸ್ಥಿತರಿದ್ದರು.