E-ಸ್ವತ್ತು ಸಮಸ್ಯೆಗಳ ಪರಿಹಾರದ ಸಭೆ…

ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ, ಛೇಂಬರ್ ಆಫ್ ಕಾಮರ್ಸ್, ಸಾಗರ ರಸ್ತೆ ಕೈಗಾರಿಕಾ ಘಟಕಗಳು ಸೇರಿ ಶಿವಮೊಗ್ಗ ಶಾಸಕರ ಕಛೇರಿಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಇ-ಸ್ವತ್ತು ಸಮಸ್ಯೆಗಳ ಪರಿಹಾರ ಕುರಿತಾದ ಸಭೆಯು ಶಿವಮೊಗ್ಗ ನಗರದ ಶಾಸಕರಾದ ಶ್ರೀ ಎಸ್. ಎನ್. ಚನ್ನಬಸಪ್ಪ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ನಾಗರಿಕ ಹಿತ ರಕ್ಷಣಾ ವೇದಿಕೆ ಪ್ರಮುಖರು ಕರ್ನಾಟಕ ಸರ್ಕಾರ ನಗರಾಡಳಿತ ಇಲಾಖೆಯಿಂದ ಮಹಾನಗರ ಪಾಲಿಕೆಗೆ ಇತ್ತೀಚಿಗೆ ನೀಡಿರುವ ಸುತ್ತೋಲೆಯಂತೆ ತೆರಿಗೆದಾರರು ಇ ಸ್ವತ್ತು ಪಡೆಯುವ ಮೊದಲು ತೆರಿಗೆದಾರರಿಗೆ ಸಂಬಂಧಿಸಿದ ಆಸ್ತಿ ವಿವರಗಳನ್ನು KMDS ತಂತ್ರಾಂಶಕ್ಕೆ ಗಣಕೀಕರಣ ಗೊಳಿಸಿ ಯಾವುದಾದರೂ ಲೋಪದೋಷಗಳಿದ್ದಲ್ಲಿ ಅದನ್ನು ಸರಿಪಡಿಸಿಕೊಂಡು ವಾರ್ಡ್ ಗಳಲ್ಲಿ, ಅಪಾರ್ಟ್ಮೆಂಟ್ ಗಳಲ್ಲಿ, ಕೈಗಾರಿಕಾ ಘಟಕಗಳ ಪ್ರದೇಶಗಳಲ್ಲಿ ತೆರಿಗೆದಾರರ ಸಭೆಗಳನ್ನು ನಡೆಸಬೇಕು.
ಇಂತಹ ಸಭೆಗಳಲ್ಲಿ ತೆರಿಗೆದಾರರಿಗೆ ಅವರ ಆಸ್ತಿಯ ವಿವರದ ಪ್ರತಿಯನ್ನು ( Citizens Copy ) ನೀಡಿ ಆಕ್ಷೇಪಣೆಗಳನ್ನು ದಾಖಲಿಸಿಕೊಂಡು, ಆಕ್ಷೇಪಣೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದು ಇ – ಸ್ವತ್ತು ಪ್ರಮಾಣ ಪತ್ರವನ್ನು ಕೊಡುವ ವ್ಯವಸ್ಥೆಯನ್ನು ಮಾಡಬೇಕು ಎಂದರು.

ಇದೇ ಫೆಬ್ರವರಿ ತಿಂಗಳ 25ನೇ ತಾರೀಖಿನ ನಂತರ ಸರ್ಕಾರದಿಂದ ಒಪ್ಪಿಗೆಯನ್ನು ಪಡೆದು ಕೆಎಂಡಿಎಸ್ ತಂತ್ರಾಂಶದಲ್ಲಿ ತೆರಿಗೆದಾರರ ದಾಖಲೆಗಳನ್ನು ಅಳವಡಿಸಿಕೊಂಡು ವಾರ್ಡ್ ವಾರು ಸಭೆಗಳನ್ನು ನಡೆಸುವುದಾಗಿ ಮಹಾನಗರ ಪಾಲಿಕೆ ಆಯುಕ್ತರು ಮತ್ತು ರೆವಿನ್ಯೂ ಅಧಿಕಾರಿಗಳು ಭರವಸೆ ನೀಡಿರುತ್ತಾರೆ.
ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ ಫೆಬ್ರವರಿ 25ರ ನಂತರ ಮಹಾನಗರ ಪಾಲಿಕೆಯ ಪ್ರಕಟಣೆಯನ್ನು ಗಮನಿಸಿ ವಾರ್ಡಿನಲ್ಲಿಯೇ ತಮ್ಮ ಇ ಸ್ವತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಭೆಯಲ್ಲಿ ಸರ್ವಸಮತ ತೀರ್ಮಾನಕ್ಕೆ ಬರಲಾಯಿತು.

ತುರ್ತು ಸಂದರ್ಭಗಳಲ್ಲಿ ಮಾತ್ರ ಇ ಸ್ವತ್ತು ಪಡೆಯಲು ನಗರ ಪಾಲಿಕೆಗೆ ಹೋಗಬಹುದು, ಇಲ್ಲವಾದಲ್ಲಿ ಫೆಬ್ರವರಿ 25 ರ ನಂತರ ಈ ವ್ಯವಸ್ಥೆಯನ್ನು ಸರಳೀಕೃತಗೊಳಿಸಿ ಪ್ರತಿಯೊಬ್ಬರಿಗೂ ಇ – ಸ್ವತ್ತು ದೊರಕುವಂತೆ ಮಾಡಲಾಗುವುದು ಎಂದು ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಯಿತು.

ಸಭೆಯಲ್ಲಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಅಧ್ಯಕ್ಷ ಎಸ್ ಆರ್.ಗೋಪಾಲ್, ಪ್ರಧಾನ ಕಾರ್ಯದರ್ಶಿ ಕೆವಿ ವಸಂತ ಕುಮಾರ್ ಸಂಘಟನಾ ಕಾರ್ಯದರ್ಶಿ ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ಸೀತಾರಾಮ್, ರಾಜು, ಸುಬ್ಬಣ್ಣ, ವಿನೋದ್ ಪೈ, ನಾಗರಾಜ್, ಜನ್ಮೇಜಿರಾವ್, ಚನ್ನವೀರಪ್ಪ ಗಾಮನಗಟ್ಟಿ, ಛೇಂಬರ್ ಆಫ್ ಕಾಮರ್ಸ್ ನ ಸುಕುಮಾರ್, ಉದಯ್ ಕುಮಾರ್, ಕೈಗಾರಿಕಾ ವಲಯದ ವಿಶ್ವೇಶ್ವರಯ್ಯ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಕಂದಾಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *