ಕರ್ನಾಟಕ ಪ್ರಸಿದ್ಧ ಕಾಪು ಶ್ರೀ ಹೊಸ ಮಾರಿಗುಡಿ ದೇವಾಲಯ…
ಕರ್ನಾಟಕದ ಪ್ರಸಿದ್ಧ ಕ್ಷೇತ್ರವಾಗುತ್ತಿರುವ ಕಾಪು ಶ್ರೀ ಹೊಸ ಮಾರಿಕಾಂಬ ದೇವಾಲಯದಲ್ಲಿ ಬ್ರಹಕಲಶೋತ್ಸವ ಸಕಲ ಸಿದ್ಧತೆಗಳು ಪ್ರತಿದಿನ ಆದ್ದೂರಿಯಾಗಿ ನಡೆಯುತ್ತಿದೆ.ಫೆಬ್ರವರಿ 25 ರಿಂದ ಮಾರ್ಚ್ 5 ರವರೆಗೆ ನಡೆಯಲಿದ್ದು, ಬ್ರಹ್ಮಕಲಶೋತ್ಸವಕ್ಕಾಗಿ ಹರಿದ್ವಾರದಿಂದ ವಿಮಾನದ ಮೂಲಕ ತರಲಾದ ಪವಿತ್ರ ಗಂಗಾಜಲವನ್ನು ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಅವರು ಗಣ್ಯರ ಮೂಲಕ ಸ್ವಾಗತ ಕೋರಿದರು.
ಹರಿದ್ವಾರದಲ್ಲಿ ಫೆಬ್ರವರಿ 12ರ ಕುಂಭ ಸಂಕ್ರಮಣದ ಹುಣ್ಣಿಮೆಯ ಪರ್ವಕಾಲದಲ್ಲಿ ಬೃಹತ್ ನವಕುಂಭಗಳಲ್ಲಿ ಗಂಗಾಜಲವನ್ನು ತುಂಬಿಸಿ, ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಮತ್ತು ಸಮಸ್ತ ಸಮಿತಿಯೊಂದಿಗೆ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಲಾಯಿತು.
ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಜೀರ್ಣೀದ್ಧಾರ ಸಮಿತಿಯ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಮತ್ತು ಆಶಾ ಶೆಟ್ಟಿ ದಂಪತಿಗಳು, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ದಂಪತಿಗಳು, ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ದಂಪತಿಗಳು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಉದಯ ಸುಂದರ್ ಶೆಟ್ಟಿ ದಂಪತಿಗಳು, ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಮತ್ತು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಸಹಿತ ಒಂಬತ್ತು ಜನ ನವಕುಂಭದೊಂದಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷವಾಗಿ ಆಗಮಿಸಿದರು.
ಮಂಗಳೂರು ವಿಮಾನ ನಿಲ್ದಾಣದಿಂದ ನೂರಾರು ವಾಹನದಲ್ಲಿ ಶೋಭಾಯಾತ್ರೆಯ ಮೂಲಕ ರಾಷ್ಟ್ರೀ ಹೆದ್ದಾರಿಯಲ್ಲಿ ಆಗಮಿಸಿ, ಕಾಪು ಸಾವಿರ ಸೀಮೆಯ ಒಡೆಯ ಶ್ರೀ ಲಕ್ಷ್ಮಿ ಜನಾರ್ಧನ ದೇವರ ಸನ್ನಿಧಾನಕ್ಕೆ ತಂದು ಪೂಜೆ ಸಲ್ಲಿಸಿದರು.9 ದಿನಗಳ ಕಾಲ ನವಕುಂಬಗಳಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಕಾಪು ಹೊಸ ಮಾರಿ ಗುಡಿಯ ಅಮ್ಮನ ಸನ್ನಿಧಾನಕ್ಕೆ ತರಲಾಗುವುದು.
ಸಂದರ್ಭದಲ್ಲಿ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷರು, ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಅಭಿವೃದ್ಧಿ ಸಮಿತಿಯ ಸದಸ್ಯರು ಮತ್ತು ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.