ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದು ಅದನ್ನು ತಮ್ಮ ಶಿಕ್ಷಕರಿಗೆ ಕೊಡುಗೆಯಾಗಿ ನೀಡಬೇಕೆಂದು ಜಿ.ಪಂ. ಸಿಇಓ ಹೇಮಂತ್ ಕರೆ ನೀಡಿದರು.
ನಗರದ ದುರ್ಗಿಗುಡಿ ಪ್ರೌಢಶಾಲೆಯಲ್ಲಿನ ಸಭಾಂಗಣದಲ್ಲಿ ಸೋಮವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಿದ್ದತೆ ಕುರಿತು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಜೀವನದ ಅತಿ ಮುಖ್ಯವಾದ ಘಟ್ಟ. ಯಾಕೆಂದರೆ ಎಸ್‌ಎಸ್‌ಎಲ್‌ಸಿ ಯಲ್ಲಿ ಉತೀರ್ಣರಾದ ಹೆಚ್ಚಿನ ವಿದ್ಯಾಭ್ಯಾಸ ಸಾಧ್ಯವಾಗುತ್ತದೆ. ದೇಶ ಅಭಿವೃದ್ಧಿಯಾದಂತೆ ವಿದ್ಯಾರ್ಹತೆಯು ಹೆಚ್ಚುತ್ತಾ ಹೋಗುತ್ತದೆ ಆ ನಿಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ಎಲ್ಲರೂ ಉತ್ತೀರ್ಣರಾಗಬೇಕು. ಆಗ ಮಾತ್ರ ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು ಸಾಧ್ಯ ಎಂದರು.


ಜೀವನದಲ್ಲಿ ಎಲ್ಲರಿಗೂ ಶಿಕ್ಷಣ ಅತಿ ಮುಖ್ಯ. ಪೋಷಕರು ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಿಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಉನ್ನತ ಮಟ್ಟಕ್ಕೆ ಹೋಗಬೇಕಾದರೆ ಅದಕ್ಕೆ ಶಿಕ್ಷಣ ಮಾನದಂಡವಾಗಿರುತ್ತದೆ. ಹಾಗಾಗಿ ಪೋಷಕರು ಮಕ್ಕಳನ್ನು ಶಾಲೆಯಿಂದ ಬಿಡಿಸುವ ಆಲೋಚನೆಯನ್ನು ತೆಗೆದು ಹಾಕಬೇಕು. ಮಕ್ಕಳಿಗೆ ಸದಾ ಪ್ರೋತ್ಸಾಹಿಸುತ್ತಾ ಅವರ ಸಾಧನೆಗೆ ಬೆನ್ನು ತಟ್ಟಬೇಕು ಎಂದರು.


ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನೂ 30 ದಿನ ಬಾಕಿ ಇದೆ. ವಿದ್ಯಾರ್ಥಿಗಳು ಶಿಕ್ಷಕರು ಹೇಳಿಕೊಟ್ಟಿರುವ ಪಾಠಗಳ ಮನನ ಮಾಡಿಕೊಳ್ಳಬೇಕು. ಪರೀಕ್ಷೆ ಹತ್ತಿರ ಇರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ತಪ್ಪಿಸದೆ ಶಿಕ್ಷಕರ ಬಳಿ ಪರೀಕ್ಷೆಯ ಕುರಿತಾಗಿ ಚರ್ಚೆ ನಡೆಸಬೇಕು. ಈ ನಿಟ್ಟಿನಲ್ಲಿ 30 ದಿನಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಬಾರಿ ಕಟ್ಟನಿಟ್ಟಾಗಿ ಪರೀಕ್ಷೆ ನಡೆಯಲಿದ್ದು, ಕಾಪಿ ಮಾಡಲು ಯಾವುದೇ ರೀತಿಯ ಅವಕಾಶ ಇರುವುದಿಲ್ಲ. ಹಾಗಾಗಿ ಎಲ್ಲರೂ ತಮ್ಮ ಪರಿಶ್ರಮದಿಂದ ಪರೀಕ್ಷೆಯನ್ನು ಎದುರಿಸಲು ಸಿದ್ದರಾಗಬೇಕು ಎಂದರು.


ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿಯಾದ ರಮೇಶ್ ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳೇ ಬಹುತೇಕ ಈ ಸಮಾಜ ಹಾಗೂ ದೇಶವನ್ನು ಆಳುವವರು. ಹಾಗಾಗಿ ಪೋಷಕರು ಮಕ್ಕಳ ಜೊತೆಗೆ ಸದಾ ಗಟ್ಟಿಯಾಗಿ ನಿಲ್ಲಬೇಕು. ಮನೆಯಲ್ಲಿ ಓದುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಮಕ್ಕಳ ವಿದ್ಯಾಭ್ಯಾಸ ಮುಗಿಯುವವರೆಗೂ ನಿಮ್ಮ ಜವಬ್ದಾರಿಯನ್ನು ಮರೆಯಬಾರದು. ಪೋಷಕರು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕು. ನಿಮ್ಮಿಂದ ಅಸಾಧ್ಯವೆಂಬುದು ಇಲ್ಲ ಎಂಬ ವಿಶ್ವಾಸ ಮೂಡಿಸಬೇಕು ಎಂದರು.


ಶಿಕ್ಷಣ, ವಿದ್ಯೆ, ನಡತೆ ಯಾರ ಬಳಿ ಇರುತ್ತದೆಯೋ ಆತ ಉನ್ನತ ಮಟ್ಟಕ್ಕೆ ತಲುಪುತ್ತಾರೆ. ಸೂರ್ಯ ಚಂದ್ರ ಹೇಗೆ ಹಗಲು ಇರುಳು ಎನ್ನದೆ ಕೆಲಸ ಮಾಡುತ್ತಾರೊ ಹಾಗೆ ವಿದ್ಯಾರ್ಥಿಗಳು ಓದಿನಲ್ಲಿ ಸಕ್ರಿಯವಾಗಿರಬೇಕು. ವಿದ್ಯೆ ಕಲಿಯುವ ಅವಕಾಶ ಮನುಷ್ಯ ಮಾತ್ರ ದೊರಕಿರುವುದು ಹಾಗಾಗಿ ನಮ್ಮಲ್ಲಿರುವ ಬುದ್ದಿ ಶಕ್ತಿ ಹಾಗೂ ಜ್ಞಾಪಕ ಶಕ್ತಿ ಬಳಸಿಕೊಂಡು ಮುಂದೆ ಬರಬೇಕು ಎಂದರು.


ಈ ಜಗತ್ತಿನಲ್ಲಿ ಸೋಮಾರಿಗಳೇ ನಿಜವಾದ ಬಡವರು. ಯಾರು ಸಮಯಕ್ಕೆ ಗೌರವ ಕೊಡುವುದಿಲ್ಲವೊ ಅವರು ಜೀವನದಲ್ಲಿ ಹಿಂದೆ ಉಳಿಯುತ್ತಾರೆ. ಸಣ್ಣ ಗುರಿಯನ್ನು ಇಟ್ಟುಕೊಳ್ಳುವುದು ಅಪರಾಧ ಎಂದು ಎಪಿಜಿ ಅಬ್ದುಲ್ ಕಲಾಂ ಹೇಳಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ ಮೇಲೆ ಬರಲು ಸಾಧ್ಯ ಎಂದ ಅವರು ವಿದ್ಯಾರ್ಥಿಗಳು ಸರಿಯಾದ ಉದ್ದೇಶ ಮತ್ತು ಗುರಿಯನ್ನು ಹೊಂದಿರಬೇಕು. ಹಾಗೂ ದೊಡ್ಡದಾದ ಗುರಿಯನ್ನು ಸಾಧಿಸಬೇಕು ಎಂದರು.
ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಮೋಹನ್, ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.

Leave a Reply

Your email address will not be published. Required fields are marked *