ಜೆ.ಎನ್.ಎನ್.ಸಿ.ಇ : ವಿಟಿಯು ಕ್ರೀಡಾಕೂಟದಲ್ಲಿ ಕುಲಪತಿ ವಿದ್ಯಾಶಂಕರ್

ಯುವ ಸಮೂಹ ಕ್ರಿಯಾಶೀಲ ಕೌಶಲ್ಯತೆಯೊಂದಿಗೆ ಸದೃಡರಾಗಿ

ಶಿವಮೊಗ್ಗ: ಯುವ ಸಮೂಹ ಕ್ರೀಡೆ ಸಾಂಸ್ಕೃತಿಕ ನೆಲಗಟ್ಟಿನಿಂದ ಪ್ರೇರಣೆ ಪಡೆದು ಕ್ರಿಯಾಶೀಲ ಕೌಶಲ್ಯತೆಗಳೊಂದಿಗೆ ಸದೃಡರಾಗಬೇಕಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ.ವಿದ್ಯಾಶಂಕರ್ ಕರೆ ನೀಡಿದರು.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ 26 ನೇ ರಾಜ್ಯಮಟ್ಟದ ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್‌ ಕ್ರೀಡಾಕೂಟ ‘ಸದೃಡ-2.0’ ಉದ್ಘಾಟಿಸಿ ಮಾತನಾಡಿದರು.

ವಿಟಿಯು ಮೌಲ್ಯಾಧಾರಿತ ತಾಂತ್ರಿಕ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿ ಕೇಂದ್ರಿತವಾಗಿ ಕೌಶಲ್ಯತೆ ಮತ್ತು ಕ್ರೀಡಾತ್ಮಕ ಮನೋಭಾವ ಬೆಳೆಸಲು ಪ್ರೇರಣೀಯವಾಗಿ ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದೆ. ಇನ್ಫೋಸಿಸ್ ಕಂಪನಿ ಜೊತೆಗೂಡಿ ಬೂಟ್ ಕ್ಯಾಂಪಸ್ ಡ್ರೈವ್ ನಡೆಸುವಾಗ 4 ಸಾವಿರ ವಿದ್ಯಾರ್ಥಿಗಳಲ್ಲಿ ಕೇವಲ 385 ವಿದ್ಯಾರ್ಥಿಗಳು ಮಾತ್ರ ನೇಮಕಾತಿಯ ಅವಕಾಶ ಪಡೆದಿದ್ದರು. ಅಲ್ಲಿಗೆ ನಮ್ಮ ಬದುಕಿನ ಉನ್ನತಿಗೆ ಶಿಕ್ಷಣದ ಜೊತೆಗೆ ಕ್ರಿಯಾಶೀಲ ಕೌಶಲ್ಯತೆಗಳು ಎಷ್ಟರಮಟ್ಟಿಗೆ ಪ್ರಭಾವ ಬೀರಲಿದೆ ಎಂದು ಅರ್ಥೈಸಿಕೊಳ್ಳಿ.

ಸುದೀರ್ಘ ಬದುಕಿನಲ್ಲಿ ದೇಹವನ್ನು ಸದೃಡವಾಗಿ ಇಟ್ಟುಕೊಳ್ಳಲು ಕ್ರೀಡೆ ಸಹಕಾರಿ. ಇದರಿಂದ ನಮ್ಮ ಮನಸ್ಸು ಸದೃಡವಾಗಿ ವಿಕಸನಗೊಳ್ಳುತ್ತದೆ.‌ ಇಂದಿನ ವಿದ್ಯಾರ್ಥಿಗಳಲ್ಲಿ ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ತಡವಾಗಿ ಏಳುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಸ್ಪರ್ಧೆ ಎಂಬುದು ಬದುಕಿನ ನಿರಂತರ ಪಕ್ರಿಯೆಯಾಗಿದ್ದು, ಅಂತಹ ಸವಾಲುಗಳನ್ನು ಕೌಶಲ್ಯಪೂರ್ಣವಾಗಿ ಎದುರಿಸುವ ಸದೃಡತೆ ನಿಮ್ಮದಾಗಲಿ ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅರ್ಜುನ ಪ್ರಶಸ್ತಿ ಪುರಸ್ಕೃತ ಎಸ್.ಡಿ.ಈಶನ್ ಮಾತನಾಡಿ, ಅಥ್ಲೆಟಿಕ್ ಮೂಲಕ ಪಡೆದ ಕೌಶಲ್ಯತೆಯನ್ನು ಯಾವುದೇ ಆಟಗಳಲ್ಲಿ ಬಳಸಿಕೊಳ್ಳಬಹುದು. ವಿಟಿಯು ಮೂಲಕ ಅದ್ಭುತ ಕ್ರೀಡಾಪಟುಗಳು ರಾಷ್ಟ್ರಕ್ಕೆ ಸಮರ್ಪಿತವಾಗಲಿ ಎಂದು ಹೇಳಿದರು.

ಎನ್ಇಎಸ್ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಕ್ರೀಡೆಯಲ್ಲಿನ ಸೋಲು ಗೆಲುವಿನ ನಿಭಾಯಿಸುವಿಕೆ, ಬದುಕಿನುದ್ದಕ್ಕೂ ಅನ್ವಯಿಸುತ್ತದೆ. ಬದುಜಿನ ಸವಾಲುಗಳಿಗೆ ಕ್ರೀಡಾ ಮನೋಭಾವದಿಂದ ಪ್ರತಿಕ್ರಿಯಿಸಿ. ಪಠ್ಯೇತರ ಚಟುವಟಿಕೆಗಳು ಜೀವನಕ್ಕೆ ಆಂತರಿಕ ಶಕ್ತಿಯನ್ನು ‌ನೀಡುತ್ತದೆ. ಚರಿತ್ರೆಯಲ್ಲಿ ಉಳಿಯುವಂತಹ ಸ್ಪರ್ಧೆ ಮತ್ತು ಭಾಗವಹಿಸುವಿಕೆ ನಿಮ್ಮದಾಗಲಿ ಎಂದು ಹೇಳಿದರು.

ವೇದಿಕೆಯಲ್ಲಿ ಎನ್‌ಇಎಸ್‌ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್‌, ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್‌, ವಿಟಿಯು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪಿ.ವಿ.ಕಡಗದಕೈ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಚೇತನ್.ಎ.ವಿ ಉಪಸ್ಥಿತರಿದ್ದರು. ಇದೇ ವೇಳೆ ಸದೃಡ-2.0 ಸ್ಮರಣ ಸಂಚಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು.


ಆಕರ್ಷಕ ಪಥಸಂಚಲನ

ರಾಜ್ಯದ 150 ವಿವಿಧ ಇಂಜಿನಿಯರಿಂಗ್ ಕಾಲೇಜಿನಿಂದ ಆಗಮಿಸಿದ್ದ ಕ್ರೀಡಾಪಟುಗಳ ತಂಡಗಳು ಕಾಲೇಜಿನ ಕ್ರೀಡಾಂಗಣದಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು. ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಟೆಕ್ನಾಲಜಿ ಕಾಲೇಜು, ಮಂಗಳೂರಿನ ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್, ಪುತ್ತೂರಿನ ವಿವೇಕಾನಂದರ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಅತ್ಯುತ್ತಮ ಪಥಸಂಚಲನ ಪ್ರಶಸ್ತಿಯನ್ನು ಸ್ವೀಕರಿಸಿದರು.