ದೂರುದಾರರಾದ ಚಿದಾನಂದ, ಹದಿಕೆರೆ, ತರಿಕೆರೆ ತಾ. ಚಿಕ್ಕಮಗಳೂರು ಜಿಲ್ಲೆ ಇವರು ಚೋಳ ಎಂ.ಎಸ್.ಜನರಲ್ ಇನ್ಶೂರೆನ್ಸ್ ಕಂಪೆನಿ ಲಿ., ಶೇಷಾದ್ರಿಪುರಂ ಎಕ್ಸಟೆನ್ಷನ್, ಶಿವಮೊಗ್ಗ ಹಾಗೂ ಚೋಳ ಎಂ.ಎಸ್.ಜನರಲ್ ಇನ್ಶೂರೆನ್ಸ್ ಕಂಪೆನಿ ಲಿ., ತಂಬುಚೆಟ್ಟಿ ಸ್ಟ್ರೀಟ್ , ಚೆನೈ ಇವರುಗಳ ವಿರುದ್ದ ವಿಮಾ ಸೌಲಭ್ಯ ನೀಡುವಲ್ಲಿನ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪೆನಿಯು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರ ಚಿದಾನಂದ ಇವರ ಮಗ 2022ರಲ್ಲಿ ದ್ವಿಚಕ್ರ ವಾಹನದ ಅಪಘಾತದಿಂದ ಮರಣ ಹೊಂದಿದ್ದು, ಇನ್ಷೂರೆನ್ಸ್ ಕಂಪನಿಗೆ ಓ.ಡಿ ಕ್ಲೇಮ್ ಮತ್ತು ವೈಯಕ್ತಿಕ ಅಪಘಾತದ ಕ್ಲೇಮ್ ಮೊತ್ತವನ್ನು ನೀಡಲು ಕೋರಿರುತ್ತಾರೆ. ಆದರೆ ಎದುರುದಾರ ಇನ್ಷೂರನ್ಸ್ ಕಂಪನಿಯು ಅಪಘಾತದ ವಿಷಯವನ್ನು ತಿಳಿಸಲು 424 ದಿನಗಳ ವಿಳಂಬವಾಗಿದೆ ಎಂಬ ಕಾರಣ ನೀಡಿ ವಿಮಾ ಹಣವನ್ನು ನೀಡಲು ನಿರಾಕರಿಸಿರುತ್ತಾರೆ ಎಂದು ದೂರು ಸಲ್ಲಿರುತ್ತಾರೆ.
ಆಯೋಗವು ನೀಡಿದ ನೋಟಿಸ್‌ಗೆ ಎದುರುದಾರರು ವಕೀಲರ ಮೂಲಕ ಹಾಜರಾಗಿ ಅಪಘಾತದ ವಿಷಯವನ್ನು ವಿಳಂಬವಾಗಿ ತಿಳಿಸಿರುವುದರಿಂದ ಕ್ಲೇಮ್‌ನ್ನು ತಿರಸ್ಕರಿಸಿರುವುದಾಗಿ ಹಾಗೂ ತಮ್ಮಿಂದ ಯಾವುದೇ ಸೇವಾ ನ್ಯೂನತೆಯಾಗಿರುವುದಿಲ್ಲವಾದ ಕಾರಣ ದೂರನ್ನು ವಜಾ ಮಾಡಬೇಕಾಗಿ ವಿನಂತಿಸಿರುತ್ತಾರೆ.