ಭಾರತ ಮಾತೆಯ ಸಿಂಧೂರವನ್ನು ಮುಟ್ಟಲು ಬಂದರೆ ಪಾಕಿಸ್ತಾನ ಭೂಪಟದಿಂದಲೇ ಮಾಯವಾಗಲಿದೆ ಎಂಬ ಸಂದೇಶವನ್ನು ನಮ್ಮ ಭಾರತೀಯ ಸೇನೆ ಈಗಾಗಲೇ ನೀಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಅವರು ಶಿವಮೊಗ್ಗ ನಾಗರೀಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ವಿಜಯ ತಿರಂಗಾಯಾತ್ರೆ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ತಿರಂಗಾಯಾತ್ರೆ ಹುತಾತ್ಮ ಸೈನಿಕರಿಗೆ ಮತ್ತು ವಿಜಯ ತಂದುಕೊಟ್ಟ ವೀರ ಸೈನಿಕರಿಗೆ ಮತ್ತು 26 ಪ್ರವಾಸಿಗರನ್ನು ಕಳೆದುಕೊಂಡ ಅವರ ಕುಟುಂಬಕ್ಕೆ ವಿಶ್ವಾಸ ತುಂಬಲು ಈ ವಿಜಯ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.
ಸುರಿಯುತ್ತಿರುವ ಭಾರೀ ಮಳೆಯನ್ನು ಲೆಕ್ಕಿಸದೆ ಸಹಸ್ರಾರು ಯುವಕ-ಯುವತಿಯರು ಮತ್ತು ನಾಗರೀಕರು ತಿರಂಗಾ ಧ್ವಜವನ್ನು ಹಿಡಿದು, ಭಾರತ ಮಾತೆಗೆ ಜೈಕಾರ ಹಾಕುತ್ತಾ, ವೀರ ಯೋಧರಿಗಾಗಿ ಹೆಜ್ಜೆಯನ್ನು ಇಟ್ಟಿದ್ದೇವೆ. ನಮ್ಮ ತಾಯಂದಿರು ಸಿಂಧೂರಕ್ಕಾಗಿ ಮತ್ತು ನಮ್ಮ ದೇಶದ ಮುಂದಿನ ಭವಿಷ್ಯಕ್ಕಾಗಿ ಚಳಿ, ಮಳೆ. ಗಾಳಿ, ಬಿಸಿಲು ಲೆಕ್ಕಿಸದೆ ಗಡಿ ಕಾಯುತ್ತಿರುವ ಸೈನಿಕರಿಗೆ ಧೈರ್ಯ ತುಂಬಲು ದೇಶಾದ್ಯಂತ ಈ ಯಾತ್ರೆ ಹಮ್ಮಿಕೊಂಡಿದ್ದು, ದೇಶದ ಜನರಲ್ಲಿ ಇಮ್ಮಡಿ ಉತ್ಸಾಹ ತುಂಬಿ ದೇಶಸೇವೆ ಬಗ್ಗೆ ಅರಿವು ಮೂಡಿಸಿದಂತಾಗಿದೆ ಎಂದರು.
ಮೋದಿ ಹೆಡ್‍ಲೈನ್ ಮಾತ್ರ ಎಂದವರಿಗೆ ಡೆಡ್‍ಲೈನ್ ಗೊತ್ತಿದೆ ಎಂದು ತೋರಿಸಿದ್ದಾರೆ. ನಮ್ಮ ದೇಶದ ನೀರು ಕುಡಿದು, ವಿಷ ಕಕ್ಕುವ ಎಲ್ಲಾ ದೇಶದ್ರೋಹಿಗಳಿಗೆ ಮತ್ತು ಒಳಗಿನ ಉಗ್ರಗಾಮಿಗಳಿಗೆ ಎಚ್ಚರಿಕೆ ನೀಡಲಾಗಿದೆ.
2008ರಿಂದ 2014ರ ವರೆಗೆ ದೇಶವನ್ನು ಆಳಿದವರು ದೇಶದಲ್ಲಿ ಸಾವಿರಕ್ಕೂ ಹೆಚ್ಚು ನಾಗರೀಕರು ಮತ್ತು ಸೈನಿಕರನ್ನು ಕಳೆದುಕೊಂಡಾಗ ಅವರನ್ನು ಬಲಿಕೊಟ್ಟು ಶಾಂತಿಮಂತ್ರ ಜಪಿಸುತ್ತಿದ್ದರು. ನಮ್ಮ ಮುಖ್ಯಮಂತ್ರಿ ಹಾಗೂ ಕೋಲಾರದ ಶಾಸಕರೊಬ್ಬರು ಕೂಡ ಹಗುರವಾಗಿ ಮಾತನಾಡಿದ್ದಾರೆ. ಅವರ ಬಾಯನ್ನು ಮುಚ್ಚಿಸುವ ಕೆಲಸ ನಾಡಿನ ಜನ ಈ ತಿರಂಗಾಯಾತ್ರೆಯ ಮೂಲಕ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತೆ ಶೋಭಾ ಭಾರತದ ಒಳಗಿರುವ ಉಗ್ರಗಾಮಿಗಳನ್ನು ಹೇಗೆ ಓಡಿಸಬೇಕು ಎಂಬುದನ್ನು ನಾವು ನಿಶ್ಚಯ ಮಾಡುವ ಕಾಲ ಬಂದಿದೆ.
ನಮ್ಮ ಯುದ್ದ ಕೇವಲ ಆಕ್ರಮಣಕಾರಿಗಳ ಮಾತ್ರವಲ್ಲ, ದೇಶದ ಒಳಗಿನ ದೇಶದ್ರೋಹಿಗಳು ಹಾಗೂ ಉಗ್ರಗಾಮಿಗಳನ್ನು ದಮನ ಮಾಡಲು ಕೂಡ ಆಗಿದೆ. ಮಹಿಳೆಯರು ದೇಶಕ್ಕಾಗಿ ನಾವು ದೇಶಕ್ಕಾಗಿ ನಾರಿ ಸೈನ್ಯ ಎಂದು ಯೋಚಿಸಿ ನಮ್ಮ ಮಕ್ಕಳಿಗೆ ದೇಶಭಕ್ತಿಯನ್ನು ಮೂಡಿಸಿ, ಅವರಲ್ಲಿ ದೇಶಭಕ್ತಿಯ ಬೀಜವನ್ನು ಬಿತ್ತುವ ಕಾಲ ಇದಾಗಿದೆ. ಭಾರತದ ಮಹಿಳೆ ಪಾಶ್ಚಿಮಾತ್ಯ ಅನುಕರಣೆ ಮಾಡದೆ, ನಮ್ಮ ಸಂಸ್ಕಾರ ಮತ್ತು ಸಂಸ್ಕøತಿಯನ್ನು ಎತ್ತಿಹಿಡಿದು, ತಮ್ಮಲ್ಲಿನ ಲೋಪಗಳನ್ನು ತಿದ್ದಿಕೊಂಡು ಹದಿಹರೆಯದ ಗುಂಪನ್ನು ದೇಶಕ್ಕಾಗಿ ತಯಾರು ಮಾಡುವ ಸುಸಂದರ್ಭ ತಾಯಂದಿರಿಗೆ ಒದಗಿ ಬಂದಿದೆ ಎಂದರು.
ಪ್ರೊ. ಪುನಿತ್‍ಕುಮಾರ್ ಮಾತನಾಡಿ, ಹಿಂದೆ ನಮ್ಮ ದೇಶದಲ್ಲಿ ಸಿಂಹಸೈನ್ಯ ಇದ್ದರೂ ಕೂಡ ನಾಯಕತ್ವ ಸಿಂಹದ್ದು ಆಗಿರಲಿಲ್ಲ. ಈಗ ಸಿಂಹಸೈನ್ಯಕ್ಕೆ ಸಿಂಹದ ನಾಯಕತ್ವವೇ ಸಿಕ್ಕಿದೆ. ಹಲವಾರು ಭಯೋತ್ಪಾದಕ ದಾಳಿಗೆ ಬಡ್ಡಿ ಸಮೇತ ತಕ್ಕ ಉತ್ತರ ನೀಡಲಾಗಿದೆ. ರೆಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಆದಾಗ, ಚೌಕಿದಾರ್ ಚೋರ್ ಎಂದವರು ಈಗ ಚೌಕಿದಾರನ ತಾಕತ್ತನ್ನು ಕಂಡಿದ್ದಾರೆ. ನಮ್ಮ ರೆಫೇಲ್, ಹ್ಯಾಮರ್, ಸ್ಕಾಲ್, ಕಾಮಿರೇಟ್ ಡ್ರೋಣ್‍ಗಳು ಹಾಗೂ ಬ್ರಹ್ಮೋಸ್ ಕ್ಷಿಪಣಿ ಚೈನಾದ ರಾಡರ್‍ಗಳು ಕೂಡ ಗುರುತಿಸಲಾಗದಂತಹ ಶಬ್ಧಕ್ಕಿಂತ ವೇಗವಾಗಿ ಗರ್ಜಿಸಿ, ಶತ್ರುಪಾಳೆಯವನ್ನು ದೇಶದ ಮೇಲೆ ಕಣ್ಣೆತ್ತಿ ನೋಡದಂತೆ ಮಾಡಿದೆ. ಮೋದಿ ಎಪ್ಪತ್ತೊಂದು ದೇಶಕ್ಕೆ ಹೋಗಿ ಬಂದಿದ್ದು, ಎಲ್ಲಾ ದೇಶಗಳು ಮೋದಿಪರ ನಿಂತಿದೆ. ಇದು ನಾಯಕತ್ವ ಎಷ್ಟು ಅಗತ್ಯ ಎಂಬುದನ್ನು ವಿಶ್ವಕ್ಕೆ ತೋರಿಸಿದೆ.
ದೇಶದಲ್ಲಿ ಭಗವಾಧ್ವಜದ ಕೆಳಗೆ ಕಬಡಿ ಆಡಲು ಹೋಗುವುದಲ್ಲ, ಅಲ್ಲಿ ವೀರಸೈನಿಕರು ಬೆಳೆಯುತ್ತಿದ್ದಾರೆ. ದೇಶಪ್ರೇಮವನ್ನು ಅವರಲ್ಲಿ ಮೂಡಿಸಲಾಗುತ್ತಿದೆ ಎಂಬುದು ಈಗ ಕೆಲವರಿಗೆ ಅರ್ಥವಾಗಿದೆ. ವಿಶ್ವವೇ ಭಾರತಕ್ಕೆ ಕೈಮುಗಿದು ನಿಲ್ಲುತ್ತಿದೆ. ಇದು ಕೇವಲ ಟ್ರೈಲರ್ ಅಷ್ಟೇ. ಐಎನ್‍ಎಸ್. ವಿಕ್ರಾಂತ್ ಏನಾದರೂ ಅಕಾಡಕ್ಕೆ ಧುಮುಕಿದ್ದರೆ ಪಾಕಿಸ್ತಾನದ ಆರ್ಥಿಕ ಮೂಲವಾದ ಕರಾಚಿಯ ವಾಣಿಜ್ಯ ಬಂದರು ಉಡೀಸ್ ಆಗುತ್ತಿತ್ತು. ಭಾರತ ಮಾನವೀಯತೆ ದೃಷ್ಟಿಕೋನದಿಂದ ನೋಡುತ್ತಿದ್ದು, ನಮ್ಮ ಯುದ್ಧ ಇದ್ದದ್ದು ಕೇವಲ ಉಗ್ರಗಾಮಿಗಳ ವಿರುದ್ಧ ಮಾತ್ರ ಎಂದರು.
ಈ ಸಂದರ್ಭದಲ್ಲಿ ದಕ್ಷಿಣಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್, ಪೂರ್ಣ ಭಂಡಾರ್ಕರ್ ಇದ್ದರು.
ವೇದಿಕೆಯ ಮುಂಭಾಗದಲ್ಲಿ ಮಳೆಯಲ್ಲೇ ನೆನೆದು ನೆಲದಲ್ಲೇ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಡಾ|| ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಎಸ್. ದತ್ತಾತ್ರಿ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ವಿರುಪಾಕ್ಷಪ್ಪ, ಸುರೇಖಾ ಮುರಳೀಧರ್, ಸುನೀತಾ ಅಣ್ಣಪ್ಪ, ಸುವರ್ಣಾ ಶಂಕರ್, ಮಾಲ್ತೇಶ್, ಬಳ್ಳೇಕೆರೆ ಸಂತೋಷ್, ಶಾಂತಾ ಸುರೇಂದ್ರ, ರಶ್ಮಿ ಶ್ರೀನಿವಾಸ್, ರಮೇಶ್ ಹಾಗೂ ನಿವೃತ್ತ ಯೋಧರು, ನಿವೃತ್ತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.