ನಮ್ಮ ಭಾರತ ದೇಶವು 1947 ಆಗಸ್ಟ್ 15 ರಂದು ಸ್ವಾತಂತ್ರ್ಯ ಪಡೆಯಿತು.ಬ್ರಿಟಿಷರ ದಬ್ಬಾಳಿಕೆಯ ಕಪಿಮುಷ್ಟಿಯಲ್ಲಿ ಸುಮಾರು 300 ವರ್ಷಗಳ ಕಾಲ ನಲುಗಿಹೋಗಿತ್ತು. ನಮಗೆ ಸಿಕ್ಕ 47 ರ ಸ್ವಾತಂತ್ಯ ಹಲವು ದೇಶಭಕ್ತರ, ಜನಸಾಮಾನ್ಯರ, ರಾಷ್ಟ್ರನಾಯಕರ ತ್ಯಾಗ ಬಲಿದಾನದಿಂದ ಪಡೆದುದಾಗಿದೆ.ನಾವು ಇಂದು ಎಪ್ಪತೈದನೇ ವರ್ಷದ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ.ಭಗತ್ ಸಿಂಗ್,ಚಂದ್ರಶೇಖರ್ ಆಜಾದ್,ಸಂಗೊಳ್ಳಿ ರಾಯಣ್ಣ ರಂತಹ ಅಪ್ಪಟ ದೇಶಭಕ್ತರು ಭಾರತಾಂಬೆಯ ಬಿಡುಗಡೆಗಾಗಿ ನೇಣುಹಗ್ಗಕ್ಕೆ ಕೊರಳೊಡ್ಡಿ ವೀರ ಮರಣದಿಂದ ಪಡೆದ ಸ್ವಾತಂತ್ರ್ಯವಾಗಿದೆ. ದಾದಾಬಾಯಿ ನವರೋಜಿ,ಲಾಲಾ ಲಜಪತ್ ರಾಯ್,ಬಾಲಗಂಗಾಧರ ತಿಲಕ್,ಬಿಪಿನ್ ಚಂದ್ರಪಾಲ್,ಮೋತಿಲಾಲ ನೆಹರು,ಸುಭಾಷ್ ಚಂದ್ರಬೋಸ್,ಜವಾಹರಲಾಲ್ ನೆಹರು,ಲಾಲ್ ಬಹಾದ್ದೂರ್ ಶಾಸ್ತ್ರಿ..ಬಿ.ಆರ್.ಅಂಬೇಡ್ಕರ್,ಕಿತ್ತೂರು ರಾಣಿ ಚೆನ್ನಮ್ಮ..ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಇನ್ನು ಮುಂತಾದವರ ಹೋರಾಟದ ಪರಿಶ್ರಮ ಅಡಗಿದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಚಳುವಳಿಗಳು,ಹೋರಾಟ ಗಳನ್ನು ದೇಶಾದ್ಯಂತ ಜನರನ್ನು ಒಗ್ಗೂಡಿಸಿ..ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಮಹಾತ್ಮ ಗಾಂಧೀಜಿ ಯವರಂತಹ ರಾಷ್ಟ್ರಪಿತನ ಅಗತ್ಯತೆಯಿತ್ತು.ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಹಲವಾರು ಚಳುವಳಿಗಳು, ಉಪವಾಸ ಸತ್ಯಾಗ್ರಹ ಗಳು ನಡೆದವು.ದೇಶದ ಉತ್ತರದಿಂದ ದಕ್ಷಿಣದ ವರೆಗೆ ,ಪೂರ್ವದಿಂದ ಪಶ್ಚಿಮದವರೆಗೆ ಸಾಗರೋಪಾದಿಯಲಿ ಚಳುವಳಿಯಲ್ಲಿ ಧುಮುಕಿದ ಜನಸಾಗರವ ನೋಡಿ ಬ್ರಿಟಿಷ್ ಸರ್ಕಾರ ಕೊನೆಗೂ ಮಂಡಿಯೂರಲೇ ಬೇಕಾಯಿತು.ಸುಭಾಷ್ ಚಂದ್ರಬೋಸರ ಇಂಡಿಯನ್ ನ್ಯಾಷನಲ್ ಆರ್ಮಿ ಯ ಹೋರಾಟವನ್ನು ನಾವಿಲ್ಲಿ ಸ್ಮರಿಸಲೇಬೇಕು.
ಹಾಗೂ ಬಾಲ ಗಂಗಾಧರ ತಿಲಕರ ಸ್ವರಾಜ್ಯ ನನ್ನ ಆಜನ್ಮ ಸಿದ್ದ ಹಕ್ಕು ಅದನ್ನು ಪಡೆದೇ ತೀರುತ್ತೇನೆ ಎನ್ನುವ ಘೋಷಣೆ ಹೋರಾಟದ ತೀವ್ರತೆಯನ್ನು ಹೆಚ್ಚಿಸಿತು.ಗಾಂಧೀಜಿಯವರ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ತೀವ್ರ ಸ್ವರೂಪ ಪಡೆಯಿತು.
ಅರೆನಗ್ನ ಫಕೀರನೆಂದು ಗಾಂಧೀಜಿಯನ್ನು ಹೀಯಾಳಿಸಿದ ಬ್ರಿಟಿಷ್ ಸರ್ಕಾರ ಗಾಂಧೀಜಿ ಯವರ ಶಾಂತಿ, ಅಹಿಂಸಾ ಮಂತ್ರಕ್ಕೆ ಶಿರಬಾಗಿ 1947 ಆಗಸ್ಟ್ 14 ರ ಮಧ್ಯರಾತ್ರಿ 12 ಗಂಟೆಗೆ ದೇಶದ ಸ್ವಾತಂತ್ರ್ಯ ವನ್ನು ಭಾರತೀಯರ ಕೈಗಿಟ್ಟು ಹೊರಟಿತು.ನಂತರದ ದಿನಗಳಲ್ಲಿ ತನ್ನದೇ ಆದ ಸಂವಿಧಾನ ರಚನೆಗೊಂಡು, ಸರ್ವಸ್ವತಂತ್ರ, ಸಾರ್ವಬೌಮ, ಸಮಾನತೆ,ಭ್ರಾತೃತ್ವದ,ವಿವಿಧತೆಯಲ್ಲಿ ಏಕತೆಯನ್ನು ಸಾರುವ, ತತ್ವ ಆದರ್ಶಗಳನ್ನೊಳಗೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದೇವೆ.ಹಲವು ಮಹನೀಯರು ತಂದಿತ್ತ ಈ ಸ್ವಾತಂತ್ರ್ಯ ಸ್ವೇಚ್ಚಾಚಾರವಾಗದಿರಲಿ.ದೇಶದ ಪ್ರಗತಿ, ಭದ್ರತೆ,ಏಕತೆಯಲ್ಲಿ ಎಲ್ಲರ ಪಾತ್ರ ಬಹುಮುಖ್ಯವಾಗಿದೆ.ದೇಶಪ್ರೇಮ,ಸಹೋದರತೆ,ಸಮಾನತೆ,ಸರ್ವಧರ್ಮ ಸಹಿಷ್ಣುತೆ,ರಾಷ್ಟ್ರೀಯ ಭಾವೈಕ್ಯತೆ ಎಂಬ ಮೂಲಮಂತ್ರ ನಮ್ಮದಾಗಿರಲಿ.ಆಗ ಮಾತ್ರ ಅನೇಕ ಮಹನೀಯರು ಸುಮಾರು ಒಂದು ಶತಮಾನಕಾಲ ಹೋರಾಡಿ ಪಡೆದ ಸ್ವಾತಂತ್ರ್ಯ ವು ಸಾರ್ಥಕವಾಗುವುದು.ನಮ್ಮ ದೇಶ ಇಂದು ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಾ ಅಭಿವೃದ್ಧಿ ಹೊಂದಿದ ದೇಶದ ಸಾಲಿಗೆ ಸೇರಿದೆ..ಪರಂಪರೆ,ಸಂಸ್ಕೃತಿ , ತತ್ವ ಆದರ್ಶಗಳಿಂದ ಇತರೆ ದೇಶಕ್ಕೆ ಮಾದರಿಯಾಗಿದೆ.ದೇಶದ ಪ್ರಗತಿ, ಆಂತರಿಕ ಶಾಂತಿ ಯನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.ಈ ದೇಶದಲ್ಲಿ ಹುಟ್ಟಿದ ನಾವೇ ಧನ್ಯರು.ಮುಂದಿನ ಯುವ ಪೀಳಿಗೆಗಾಗಿ ಸದೃಢ ಭಾರತದ ನಿರ್ಮಾಣದಲ್ಲಿ ಕೈಜೋಡಿಸೋಣ. *ಜೈಹಿಂದ್* *
ಲೇಖನ : ಶ್ರೀಮತಿ ಅನಿತಕೃಷ್ಣ, ಶಿಕ್ಷಕಿ ತೀರ್ಥಹಳ್ಳಿ