ಪತ್ರಕರ್ತರ ಕಣ್ಣಿನ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಶಿಬಿರ ಸಹಕಾರಿ ಎಂದು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಹೇಳಿದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ಪತ್ರಿಕಾಭವನದಲ್ಲಿ ಪ್ರಸಾದ್ ನೇತ್ರಾಲಯದ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ಸಹೋದ್ಯೋಗಿಗಳು, ನಮ್ಮ ಪತ್ರಕರ್ತರು, ಕಚೇರಿ ಸಿಬ್ಬಂಧಿಗಳು ಹಾಗೂ ಅವರ ಕುಟುಂಬ ಸದಸ್ಯರು ಕಣ್ಣುಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಲು ಶಿಬಿರ ಸಹಕಾರಿಯಾಗಿದೆ ಎಂದರು.
ಪ್ರತಿದಿನ ನಿರಂತರ ಮೊಬೈಲ್ ಹಾಗೂ ಕಂಪ್ಯೂಟರ್ ಬಳಕೆಯಿಂದಾಗಿ, ಕಣ್ಣುಗಳಿಗೆ ಅಲ್ಪ ಮಟ್ಟಿಗೆ ಹಾನಿಯಾಗಿರುತ್ತದೆ. ಇದು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಶಿಬಿರ ಅಗತ್ಯವಾಗಿದೆ ಎಂದರು. ಹುಟ್ಟಿನಿಂದಲೇ ಕೆಲವರು, ದೃಷ್ಟಿಯನ್ನು ಕಳೆದುಕೊಂಡವರು ಪ್ರಪಂಚವನ್ನು ನೋಡುವ ಭಾಗ್ಯವನ್ನು ಕಳೆದುಕೊಂಡಿರುತ್ತಾರೆ. ಆದರೆ, ಬಹಳಷ್ಟು ಮಂದಿ ತಮ್ಮ ನಿರ್ಲಕ್ಷ್ಯತನದಿಂದ ಕಂಡು ಕಳೆದುಕೊಂಡವರಿದ್ದಾರೆ. ಹೀಗಾಗಿ ದೃಷ್ಟಿ ಇದ್ದವರು ಕಣ್ಣಿನ ರಕ್ಷಣೆಗೆ ಒತ್ತು ನೀಡುವುದು ಅವಶ್ಯಕ ಎಂದರು.
ಈ ಸಂದರ್ಭದಲ್ಲಿ ಪ್ರೆಸ್ ಟ್ರಸ್ಟ್ ನ ನಿರ್ದೇಶಕರಾದ ಹೊನ್ನಾಳಿ ಚಂದ್ರಶೇಖರ್, ಸ್ಪಂದನ ಚಂದ್ರು, ಜಿ. ಪದ್ಮನಾಭ್, ಸಂತೋಷ್ ಕಾಚಿನಕಟ್ಟೆ, ಗಜೇಂದ್ರಸ್ವಾಮಿ, ಕಿರಣ್ ಕಂಕಾರಿ, ಪ್ರಸನ್ನ, ಪ್ರಸಾದ್ ನೇತ್ರಾಲಯದ ವೈದ್ಯ ಡಾ. ವಿಷ್ಣು, ವಿನಯ್, ಹರೀಶ್, ಪುಷ್ಪಾವತಿ, ಅನು ಸೇರಿದಂತೆ ಹಲವರಿದ್ದರು.