ಏನೇ ಕಷ್ಟ ಬಂದರೂ ನಾನು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುವುದಿಲ್ಲ. ಹಾಗೂ ಒಳಗಾದವರನ್ನು ದೂರ ಇಡದೇ ಮುಖ್ಯ ವಾಹಿನಿಗೆ ತರುತ್ತೇನೆಂಬ ಉದ್ದೇಶದಿಂದ ಯುವಜನತೆ ಒಗ್ಗೂಡಿ ಸೈನಿಕರಂತೆ ಮಾದಕ ವಸ್ತುಗಳ ವ್ಯಸನದ ವಿರುದ್ದ ಹೋರಾಡಬೇಕೆಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ ನೀಡಿದರು.


ಕರ್ನಾಟಕ ರಾಜ್ಯ ಪೊಲೀಸ್ ಶಿವಮೊಗ್ಗ, ಶಿವಮೊಗ್ಗ ಜಿಲ್ಲಾ ಪೊಲೀಸ್ ಇವರ ವತಿಯಿಂದ ಅಶೋಕನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆ ಮತ್ತು ನಿಷೇಧ ಕುರಿತು ಅನೇಕ ಕಾಯ್ದೆ ಕಾನೂನುಗಳು ಇದ್ದು ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಆದರೆ ಯುವಜನತೆ ನಾವು ಮಾದಕ ವಸ್ತುಗಳಿಗೆ ದಾಸರಾಗುವುದಿಲ್ಲವೆಂಬ ಉದ್ದೇಶದಿಂದ ಒಗ್ಗೂಡಬೇಕಿದೆ.
ವೈಯಕ್ತಿಕ, ಕೌಟುಂಬಿಕ, ಮಾನಸಿಕ, ಕೆಲವೊಮ್ಮೆ ಫ್ಯಾಷನ್ ಹೀಗೆ ಇತರೆ ಕಾರಣಗಳಿಂದ ಯುವಜನರಲ್ಲಿ ಮಾದಕ ವಸ್ತುಗಳ ಬಳಕೆ ಶುರುವಾಗಿ ಚಟವಾಗಿ, ಖಾಯಿಲೆಯಾಗುತ್ತದೆ. ಆದರೆ ನಾವು ವ್ಯಸನಿಗಳನ್ನು ಸಮಾಜದಿಂದ ದೂರ ಇಡಬಾರದು. ಬದಲಾಗಿ ಅವರನ್ನು ಮುಖ್ಯವಾಹಿನಿಗೆ ತರಲು ಸಹಾಯ ಮಾಡಬೇಕು. ಬೆಂಬಲಿಸಬೇಕು.

ಆಪ್ತಸಮಾಲೋಚನೆಗೆ ಒಳಪಡಿಸಬೇಕು. ವ್ಯಸನದಿಂದ ಹೊರತರಲು ಡಿ-ಅಡಿಕ್ಷನ್ ಕೇಂದ್ರಗಳನ್ನು ಆರಂಭಿಸಬೇಕು. ಆಗ ಇವರನ್ನು ಮುಖ್ಯವಾಹಿನಿಗೆ ತರಲು ಅನುಕೂಲವಾಗುತ್ತದೆ ಎಂದರು.
ರಾಜ್ಯದಲ್ಲೆ ಅತಿ ಹೆಚ್ಚು ಮಾದಕ ವಸ್ತುಗಳನ್ನು ಜಿಲ್ಲೆಯಲ್ಲಿ ಸೀಜ್ ಮಾಡಲಾಗಿದೆ. ಹೆಚ್ಚು ಪ್ರಕರಣಗಳು ಜಿಲ್ಲೆಯಲ್ಲಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಜನರಲ್ಲಿ ಮುಖ್ಯವಾಗಿ ಯುವಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಜೀವನ ಒಂದಲ್ಲ, ಎರಡಲ್ಲ ಹಲವಾರು ಅವಕಾಶಗಳನ್ನು ನೀಡುತ್ತದೆ. ಆದರೆ ಚಟಕ್ಕೆ ಒಳಗಾದರೆ ಅವಕಾಶ ವಂಚಿತರಾದAತೆ ಆಗುತ್ತದೆ. ಆದ್ದರಿಂದ ಯುವಜನತೆ ಕಾರ್ಯಪಡೆಯಾಗಿ ಸೈನಿಕರಂತೆ ಮಾದಕ ವಸ್ತುಗಳ ವಿರುದ್ದ ಹೋರಾಡಬೇಕು ಎಂದು ಅವರು ಕರೆ ನೀಡಿದರು.


ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ ಎಸ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮವಾದ ವಿಷಯಗಳನ್ನು ಗ್ರಹಿಸಿ ಅನುಪಾಲನೆ ಮಾಡಬೇಕು. ಹಾಗೂ ಕೆಟ್ಟದ್ದರ ಕುರಿತು ಮಾಹಿತಿ ಇರಬೇಕು. ಆದರೆ ಇತ್ತೀಚೆಗೆ ಇದು ಉಲ್ಟಾ ಆಗುತ್ತಿದೆ. ಇದು ಆಗಬಾರದು. ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳು ಮಾದಕ ವಸ್ತು ಸೇವನೆ ಮಾಡಲು ಉತ್ತೇಜಿಸುವ ಹಾಗೂ ಒತ್ತಡ ಪಡಿಸುವುದಕ್ಕೆ ಒಳಗಾಗಬಾರದು.
ಮಾದಕ ವಸ್ತುಗಳಿಂದಾಗಿ ಊರು, ಜಿಲ್ಲೆ, ರಾಜ್ಯ ಮತ್ತು ದೇಶವೇ ಅಧೋಗತಿಗೆ ಹೋಗಬಹುದು. ಯುವಜನತೆ ಕೆಟ್ಟದ್ದಕ್ಕೇ ಬೇಗ ಆಕರ್ಷಿತರಾಗುವ ಸಂಭವ ಹೆಚ್ಚಿದೆ. ಆದ್ದರಿಂದ ಮಾದಕ ವಸ್ತುಗಳ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳು ಮತ್ತು ಇದನ್ನು ತಡೆಯುವ ಕಠಿಣ ಕಾಯ್ದೆಗಳ ಕುರಿತು ತಿಳಿದುಕೊಳ್ಳಬೇಕು. ಎನ್‌ಡಿಪಿಎಸ್ ಕಾಯ್ದೆ ಪ್ರಕಾರ ಮಾದಕ ವ್ಯಸನ ವಸ್ತುಗಳ ಬಳಕೆ, ಸಾಗಾಣೆ ಮಾಡುತ್ತಿರುವುದು ಗೊತ್ತಿದ್ದೂ ಸುಮ್ಮನಿದ್ದರೆ ಆ ಕ್ರಿಯೆಗೆ ಕುಮ್ಮಕ್ಕು ನೀಡಿದಂತೆ, ಇದು ಸಾಬೀತಾದಲ್ಲಿ ಅಂತಹವರಿಗೆ 10 ವರ್ಷ ಶಿಕ್ಷೆ ಮತ್ತು ದಂಡ ವಿಧಿಸಬಹುದು.

ಯಾವುದೇ ವ್ಯಸನಿಗಳನ್ನು ದೂರ ಇಡದೇ ಅವರಿಗೆ, ಆಪ್ತ ಸಮಾಲೋಚನೆ, ಡಿ ಅಡಿಕ್ಷನ್ ಇತರೆ ಮೂಲಕ ಸಹಕಾರ ನೀಡಿ ಮುಖ್ಯ ವಾಹಿನಿಗೆ ತರಲು ಕೈಜೋಡಿಸಬೇಕು. ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಸಹಾಯ ಮಾಡಲು 112 ಕ್ಕೆ ಕರೆ ಮಾಡಬೇಕು ಎಂದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ನಮ್ಮ ಸುತ್ತಮುತ್ತಲಿನಲ್ಲಿ ಜನರು, ಆಪ್ತರು ಯಾವುದೇ ರೀತಿಯ ಆಪತ್ತು, ತುರ್ತು ಪರಿಸ್ಥಿತಿಯಲ್ಲಿದ್ದರೆ 112 ಗೆ ಕರೆ ಮಾಡಿ ತಿಳಿಸಬೇಕು. ಹೀಗೆ ಮಾಹಿತಿ ನೀಡುವವರ ಗುರುತನ್ನು ಗೌಪ್ಯವಾಗಿ ಇಡಲಾಗುತ್ತದೆ. 112 ಎಂದರೆ ಒಬ್ಬರಿಗೆ ಒಬ್ಬರು ಜೊತೆಯಾದರೆ ಶಕ್ತಿ ದುಪ್ಪಟ್ಟಾಗುತ್ತದೆ ಎಂದರ್ಥ. ಸಹಕಾರದ ಸಂಕೇತ ಇದು.

-ಸಂತೋಷ್ ಎಂ ಎಸ್, ಹಿರಿಯ ಸಿವಿಲ್ ನ್ಯಾಯಾಧೀಶರು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಮಾದಕವಸ್ತು ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲು 1987 ರಿಂದ ಪ್ರತಿ ವರ್ಷ ಜೂನ್ 26 ರಂದು ಅಂತರಾಷ್ಟಿçÃಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ ಆಚರಿಸಲಾಗುತ್ತಿದೆ. ಮಾದಕ ವಸ್ತುಗಳು ವ್ಯಕ್ತಿ, ಕುಟುಂಬ ಮತ್ತು ಸಮಾಜಕ್ಕೆ ಹಾನಿ ಮಾಡುವುದರಿಂದ ಇದನ್ನು ತಡೆಗಟ್ಟುವ ಗುರಿಯೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ.


ಶಿವಮೊಗ್ಗದಲ್ಲಿ ಮಾದಕ ವ್ಯಸನದ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಕಳೆದ ಸಾಲಿನಲ್ಲಿ 350 ಕ್ಕೂ ಹೆಚ್ಚು ಮಾದಕವಸ್ತು ಸೇವನೆ ಪ್ರಕರಣಗಳು ಪಾಸಿಟಿವ್ ಬಂದಿವೆ. ಈ ವರ್ಷ ಇಲ್ಲಿಯವರೆಗೆ 200 ಪ್ರಕರಣ ದಾಖಲಾಗಿದೆ. 10 ರಿಂದ 17 ನೇ ವಯಸ್ಸಿನವರು ಶೇ. 6 ಮತ್ತು 18 ದಾಟಿದವರು ಶೇ. 27 ರಷ್ಟು ಯುವಜನತೆಗೆ ಮಾದಕವಸ್ತು ವ್ಯಸನಿಗಳಿದ್ದಾರೆ. ಈ ಮಾದಕ ವಸ್ತುಗಳ ವ್ಯಸನವು ಅವರ ದೇಹದ ಎಲ್ಲ ಅಂಗಾAಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಮುಖ್ಯವಾಗಿ ಅವರ ಕುಟುಂಬ ತುಂಬಾ ಕಷ್ಟಕ್ಕೀಡಾಗುತ್ತದೆ. ಒಂದಲ್ಲ ಒಂದು ಮಾದಕವಸ್ತುವಿನ ಬಳಕೆಯ ಪರಿಣಾಮದಿಂದಲೇ ಅಪರಾಧಗಳು ನಡೆಯುತ್ತಿವೆ.


ಒಳ್ಳೆಯವರ ಮೌನ ಒಳ್ಳೆಯದಲ್ಲ. ಮಾದಕ ವಸ್ತು ಅಕ್ರಮ ಸಾಗಾಣಿಕೆ, ಬಳಕೆ ನೋಡಿಯೂ ಸುಮ್ಮನೆ ಇರಬಾರದು. ನಮ್ಮೆಲ್ಲರ ಜವಾಬ್ದಾರಿ ಇದ್ದು, ಈ ಬಗ್ಗೆ ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದ ಅವರು ಎಲ್ಲ ಜನ ಮುಖ್ಯವಾಗಿ ಯುವಜನತೆ ದೈಹಿಕ ಫಿಟ್ನೆಸ್ ಬಗ್ಗೆ ಗಮನ ಹರಿಸಬೇಕು. ಪ್ರತಿದಿನ ಕನಿಷ್ಟ 1 ಗಂಟೆ ಕಾಲ ಮಾನಸಿಕ, ದೈಹಿಕ ಚಟುವಟಿಕೆಗೆ ಮೀಸಲಿಡಬೇಕು ಎಂದು ತಿಳಿಸಿದರು.
ಎಎಸ್‌ಪಿ ಅನಿಲ್ ಕುಮಾರ್ ಭೂಮರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಂತರಾಷ್ಟಿçÃಯ ಮಟ್ಟದಲ್ಲಿ ಮಾದಕವಸ್ತು ವ್ಯಸನದ ಪಿಡುಗು ವ್ಯಾಪಕವಾಗಿ ಹರಡಿದೆ. ಡ್ರಗ್ಸ್ ಮಾಫಿಯಾನೇ ಇದೆ. ಬೇಕಾದಷ್ಟು ಬಗೆಯ ಮಾದಕವಸ್ತುಗಳು ಲಭ್ಯವಿದ್ದು ಗಾಂಜಾ ಸಾಮಾನ್ಯವಾಗಿ ಎಲ್ಲೆಡೆ ಸಿಗುತ್ತದೆ. ಆದರೆ ಈ ಮಾದಕ ವಸ್ತುಗಳನ್ನು ನಿಷೇಧಿಸಲು, ವ್ಯಾಪಾರ, ವಹಿವಾಟು ನಿಯಂತ್ರಿಸಲು ಎನ್‌ಡಿಪಿಎಸ್ ಕಾಯ್ದೆ ಸೇರಿದಂತೆ ಅನೇಕ ಕಾನೂನುಗಳಿವೆ.


ಮಾದಕವಸ್ತು ಮುಕ್ತ ಕರ್ನಾಟಕ ಮಾಡಲು ತಂತ್ರಾAಶ ಇದೆ. ಯಾವುದೇ ರೀತಿಯ ಮಾದಕವಸ್ತು ಸಾಗಾಣಿಕೆ, ಬಳಕೆ ಬಗ್ಗೆ ಮಾಹಿತಿ ನೀಡುವವರು ಈ ಆ್ಯಪ್ ನ್ನು ಬಳಸಬಹುದು.
ದೇಶ ಸದೃಢವಾಗಿರಬೇಕಾದರೆ ಯುವಜನತೆ ಆರೋಗ್ಯವಾಗಿರಬೇಕು. ಆದರೆ 35 ವರ್ಷದೊಳಗಿನವರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಕ್ಕೆ ತುತ್ತಾಗಿದ್ದು, ಮಾನಸಿಕ ಕಾಯಿಲೆಗಳಿಂದಲೂ ಬಳಲುತ್ತಿದ್ದಾರೆ. ಮಾನಸಿಕ, ದೈಹಿಕ, ಕೌಟುಂಬಿಕ, ಸಾಮಾಜಿಕ ಜೀವನದ ಮೇಲೆ ದುಷ್ಪರಿಣಾಮ ಬೀರುವ ಈ ವ್ಯಸನದಿಂದ ದೇಶ ಮುಕ್ತವಾಗಲು ಈ ಕುರಿತಾದ ಶಿಕ್ಷಣ ಮತ್ತು ಅರಿವು ಅತ್ಯಗತ್ಯ ಎಂದರು.


ಅಬಕಾರಿ ಡಿಸಿ ಸುನೀತಾ, ಎಎಸ್‌ಪಿ ಕಾರ್ಯಪ್ಪ, ಸಹಾಯಕ ಡ್ರಗ್ ಕಂಟೋಲರ್ ವಿಶಾಲಾಕ್ಷಿ, ಅಧಿಕಾರಿ, ಸಿಬ್ಬಂದಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.