ಜನಸಾಮಾನ್ಯರ ಭವಿಷ್ಯದ ಬದುಕಿಗೆ ಭದ್ರತೆ ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಜೀವನಜ್ಯೋತಿ ನವೀಕರಿಸಬಹುದಾದ ವಿಮಾ ಯೋಜನೆಯಡಿ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಜನರನ್ನು ಅದರಲ್ಲೂ ವಿಶೇಷವಾಗಿ ಕೂಲಿ-ಕಾರ್ಮಿಕ ಸಮುದಾಯದವರನ್ನು ವಿಮಾ ವ್ಯಾಪ್ತಿಗೊಳಪಡಿಸಲು ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು ಕೂಡಲೇ ಕ್ರಮಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌ಅವರು ಹೇಳಿದರು.
ಅವರು ಜಿಲ್ಲಾ ಮಾರ್ಗದರ್ಶಿ ಬ್ಯಾಂಕು ಜಿಲ್ಲಾ ಪಂಚಾಯಿತಿಯ ಅಬ್ದುಲ್‌ನಜೀರ್‌ಸಾಬ್‌ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಸಕ್ತ ಸಾಲಿನ ಮಾರ್ಚ್‌ಮಾಸಾಂತ್ಯದವರೆಗಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪಿ.ಎಂ.ಜೆ.ಜೆ.ಬಿ.ವೈ. ಯೋಜನೆಯಡಿ ಜಿಲ್ಲೆಯ ಪ್ರಗತಿ ಆಶಾದಾಯಕವಾಗಿಲ್ಲ. ಅತ್ಯಂತ ಪ್ರಯೋಜನಕಾರಿಯಾಗಿರುವ ಈ ಯೋಜನೆಯಡಿ ನಿರೀಕ್ಷಿತ ಪ್ರಮಾಣದಲ್ಲಿ ಜನರು ಹೆಸರು ನೋಂದಾಯಿಸಿಕೊಳ್ಳದಿರುವುದು ವಿಷಾದದ ಸಂಗತಿಯಾಗಿದೆ. ಜಿಲ್ಲೆಯ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಗೊಳಪಡುವ ಗ್ರಾಮಗಳಲ್ಲಿ ಸಮುದಾಯ ಸಂಘಟಕರ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಿ, ಜನರಿಗೆ ಪ್ರೇರೇಪಿಸಿ, ಜಾಗೃತಿ ಮೂಡಿಸಬೇಕು ಎಂದವರು ನುಡಿದರು.
ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಾಗಿರುವ ಎಲ್ಲರನ್ನೂ ಈ ಯೋಜನೆಯ ವ್ಯಾಪ್ತಿಗೊಳಪಡಿಸಬೇಕು ಎಂದ ಅವರು, ನಿಗಧಿಪಡಿಸಿದ ಅವಧಿಯೊಳಗಾಗಿ ನವೀಕರಿಸಲು ಹಾಗೂ ನೂತನವಾಗಿ ವಿಮೆ ಮಾಡಿಸಲು ಕ್ರಮ ಕೈಗೊಳ್ಳುವಂತೆ ಅವರು ಸಲಹೆ ನೀಡಿದರು.
ಆಭರಣದ ಮೇಲಿನ ಸಾಲ, ಸ್ವಸಹಾಯ ಗುಂಪುಗಳ ಪ್ರತಿನಿಧಿಗಳಿಗೆ ನೀಡುವ ಸಾಲ ಮತ್ತಿತರ ವಲಯಗಳ ಸಾಲವನ್ನು ಆದ್ಯತಾ ವಲಯ ಕೃಷಿ ಕ್ಷೇತ್ರದ ವ್ಯಾಪ್ತಿಗೊಳಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳನ್ನು ಬೇರ್ಪಡಿಸಿ, ಕೃಷಿ, ಆಹಾರ ಸಂಸ್ಕರಣೆ, ಕೃಷಿ ಉತ್ಪಾದಕ ಚಟುವಟಿಕೆಗಳು, ಪಶುಸಂಗೋಪನೆ ಮತ್ತಿತರ ವಿಷಯಗಳನ್ನು ಬೇರ್ಪಡಿಸಿ, ಆಯಾ ಕ್ಷೇತ್ರಗಳಲ್ಲಿ ಬ್ಯಾಂಕುಗಳು ಸಾಧಿಸಿರುವ ಪ್ರಗತಿಯನ್ನು ಗುರುತಿಸಬೇಕೆಂದವರು ನುಡಿದರು.
ಆದ್ಯತಾ ವಲಯಗಳಿಗೆ ಈವರೆಗೆ ಬ್ಯಾಂಕುಗಳು ನೀಡಿರುವ ಸಾಲಸೌಲಭ್ಯಗಳಿಂದಾಗಿ ಜಿಲ್ಲೆಯ ಜನರಲ್ಲಿ ಸೃಜಿಸಲಾಗಿರಬಹುದಾದ ಉದ್ಯೋಗಾವಕಾಶಗಳ ಬಗ್ಗೆಯೂ ಮಾಹಿತಿ ನೀಡುವಂತೆ ಸೂಚಿಸಿದ ಅವರು, ಕೆಲವು ಆಯ್ದ ಬ್ಯಾಂಕುಗಳು ಈಗಾಗಲೇ ನೀಡಲಾಗಿರುವ ಗುರಿ ಪ್ರಮಾಣದ ಸಾಲ ನೀಡುವಲ್ಲಿಯೂ ಹಿಂದುಳಿದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಅಂತಹ ಬ್ಯಾಂಕುಗಳ ವ್ಯವಸ್ಥಾಪಕರು ತಮ್ಮ ಅಧೀನ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಿ, ನಿರೀಕ್ಷಿತ ಗುರಿ ಸಾಧಿಸಲು ಸೂಚಿಸಿ, ನಿಗಧಿತ ಕಾಲಮಿತಿಯಲ್ಲಿ ಪ್ರಗತಿ ಸಾಧಿಸಿ, ವರದಿ ನೀಡುವಂತೆ ಅವರು ಸೂಚಿಸಿದರು.
ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿನ ಜನರು ಸರ್ಕಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ ತಮ್ಮ ಕನಸಿನ ಮನೆಯನ್ನು ಕಟ್ಟಿಕೊಳ್ಳಲು ಸಾಲಸೌಲಭ್ಯಕ್ಕಾಗಿ ಇಂದಿಗೂ ಖಾಸಗಿ ವ್ಯಕ್ತಿಗಳನ್ನು ಅವಲಂಬಿಸಿರುವುದು ಕಂಡುಬರುತ್ತಿದೆ. ಇಷ್ಟೆಲ್ಲಾ ಬ್ಯಾಂಕುಗಳು ನಿರಂತರವಾಗಿ ಸೇವೆ ಸಲ್ಲಿಸುತ್ತಿರುವಾಗ ಜನರು ತಮ್ಮ ಸೌಲಬ್ಯಗಳಿಗಾಗಿ ಬ್ಯಾಂಕುಗಳಿಗೆ ಬರುವಂತೆ ಮಾಡಲು ಬ್ಯಾಂಕುಗಳ ವ್ಯವಸ್ಥಾಪಕರು ಕಾರ್ಯಕ್ರಮಗಳನ್ನು ರೂಪಿಸಿ, ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವಂತೆ ಅವರು ಕಿವಿಮಾತು ಹೇಳಿದರು.
ಮುಂದಿನ ದಿನಗಳಲ್ಲಿ ಪ್ರತಿ ಬುಧವಾರ ದಿನ ನಿಗಧಿಗೊಳಿಸಿ, ಬ್ಯಾಂಕಿನ ಸಿಬ್ಬಂಧಿಗಳು ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ತೆರಳಿ, ಜನರಲ್ಲಿ ಅರಿವು ಮೂಡಿಸಿ, ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಸಾಲಸೌಲಭ್ಯಕ್ಕಾಗಿ ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಸ್ಥಾಪಕರನ್ನೇ ಸಂಪರ್ಕಿಸುವಂತೆ ಸೂಚಿಸಿದ ಅವರು, ಅಸಂಘಟಿತ ವಲಯದಲ್ಲಿನ ರೈತರು, ಉದ್ಯಮಿಗಳನ್ನು ಸಂಘಟಿತ ವಲಯಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಹಾಗೂ ಪ್ರಗತಿಪರ ರೈತರು ಉದ್ದಿಮೆದಾರರನ್ನು ಉದಯೋನ್ಮುಖ ಉದ್ದಿಮೆದಾರರನ್ನಾಗಿ ಪರಿವರ್ತಿಸುವ ಆತ್ಮನಿರ್ಬರ ಯೋಜನೆಯಡಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ಅತ್ಯಂತ ಹೆಚ್ಚಿನ ಮೊತ್ತದ ಸಹಾಯಧನದೊಂದಿಗೆ ಆರ್ಥಿಕ ನೆರವು ನೀಡುವ ಯೋಜನೆಯ ಲಾಭ ಪಡೆದುಕೊಳ್ಳಲು ರೈತರು, ಉದ್ಯಮಿಗಳು, ರೈತರ ಉತ್ಪಾದಕ ಸಂಸ್ಥೆಗಳು, ಸ್ವ-ಸಹಾಯ ಸಂಘಗಳು ಹೆಸರು ನೋಂದಾಯಿಸಿಕೊಳ್ಳುವಂತೆ ಬ್ಯಾಂಕುಗಳ ವ್ಯವಸ್ಥಾಪಕರು ಗಮನಹರಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಲೀಡ್‌ಬ್ಯಾಂಕ್‌ನ ಉಪಮಹಾಪ್ರಬಂಧಕ ದೇವರಾಜ್‌ಆರ್., ನಬಾರ್ಡ್‌ನ ಶರತ್, ಆರ್.ಬಿ.ಐ.ನ ವ್ಯವಸ್ಥಾಪಕರ ಬಾಬುಲ್‌ಬಾರ್ಡೋಲಿ ಹಾಗೂ ಲೀಡ್‌ಬ್ಯಾಂಕ್‌ವ್ಯವಸ್ಥಾಪಕ ಪಿ.ಹನುಮಂತಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಸ್ಥಾಪಕರು ಉಪಸ್ಥಿತರಿದ್ದರು.