ಶಿವಮೊಗ್ಗದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಖೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್‌ ಫೋನ್‌ ಪತ್ತೆಯಾಗಿದೆ.ಮೆಗ್ಗಾನ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವಾಗ ಮೊಬೈಲ್‌ ಫೋನ್‌ ಹೊರಗೆ ತೆಗೆದಿದ್ದಾರೆ.

ಖೈದಿ ದೌಲತ್‌ ಅಲಿಯಾಸ್‌ ಗುಂಡ (30) ಎಂಬಾತನ ಹೊಟ್ಟೆಯಲ್ಲಿ ಒಂದು ಇಂಚು ಅಗಲದ, ಮೂರು ಇಂಚು ಉದ್ದದ ಮೊಬೈಲ್‌ ಫೋನ್‌ ಪತ್ತೆಯಾಗಿದೆ. ಹಿಂದೆ ಪ್ರಕರಣವೊಂದರಲ್ಲಿ ದೌಲತ್‌ ಅಲಿಯಾಸ್‌ ಗುಂಡನಿಗೆ ಶಿವಮೊಗ್ಗದ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಜೂನ್‌ 24ರಂದು ಜೈಲಿನ ಆಸ್ಪತ್ರೆಗೆ ಬಂದು, ತಾನು ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದ. ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಿದ್ದರು. ಎಕ್ಸ್‌ರೇ ಮಾಡಿದಾಗ ಖೈದಿ ದೌಲತ್‌ನ ಹೊಟ್ಟೆಯಲ್ಲಿ ಹೊರಗಿನ ವಸ್ತು ಇರುವುದು ಗೊತ್ತಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿದಾಗ ಮೊಬೈಲ್‌ ಫೋನ್‌ ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.‌

ಜೈಲಿನೊಳಗೆ ಮೊಬೈಲ್ ನಿಷೇಧವಿದ್ದರೂ ಮೊಬೈಲ್ ತಲುಪಿರುವ ಕುರಿತು ಸೂಕ್ತ ತನಿಖೆ ನಡೆಸುವಂತೆ ಕೇಂದ್ರ ಕಾರ್ಯಗೃಹದ ಅಧೀಕ್ಷಕ ರಂಗನಾಥ್ ರವರು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪಕರಣ ದಾಖಲಿಸಿದ್ದಾರೆ.