ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜು.೨೬ ರಂದು ಪತ್ರಿಕಾ ದಿನಾಚರಣೆ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಾಧಕ ಪತ್ರಕರ್ತರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಸಂಘದ ಹಿರಿಯ ಉಪಾಧ್ಯಕ್ಷ ವೈದ್ಯನಾಥನ್ ಅವರು ಸುದ್ದಿಗೋಷ್ಟಿಯಲ್ಲಿಂದು ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯು ಪ್ರತಿವರ್ಷದಂತೆ ಈ ವರ್ಷವೂ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರವನ್ನು ಆಯೋಜಿಸಿದ್ದು ಜು.೨೬ ರಂದು ಬೆಳಗ್ಗೆ ೧೦.೩೦ಕ್ಕೆ ಸರ್ಕಾರಿ ನೌಕರರ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭವನ್ನು ಸಂಸದ ಬಿ.ವೈ ರಾಘವೇಂದ್ರ ಅವರು ಉದ್ಘಾಟಿಸಲಿದ್ದಾರೆ.
ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ದಿಕ್ಸೂಚಿ ಉಪನ್ಯಾಸ ನೀಡಲಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಅವರು ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಪತ್ರಕರ್ತರನ್ನು ಗೌರವಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್ , ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್ , ರಾಷ್ಟ್ರೀಯ ಮಂಡಳಿ ಸದಸ್ಯರಾದ ಬಂಡಿಗಡಿ ನಂಜುಂಡಪ್ಪ ಭಾಗವಹಿಸಲಿದ್ದು, ಜಿಲ್ಲಾ ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್ ಅಧ್ಯಕ್ಷತೆ ವಹಿಸುವರು ಎಂದು ವೈದ್ಯನಾಥನ್ ಅವರು ವಿವರಿಸಿದರು.
ಸರ್ವಸದಸ್ಯರ ಸಭೆ
ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್, ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ನಂತರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆಯ ವಾರ್ಷಿಕ ಸರ್ವಸದಸ್ಯರ ಸಭೆಯು ಪತ್ರಿಕಾ ಭವನದಲ್ಲಿ ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ಜಿಲ್ಲಾ ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್ ವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕೆ.ವಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ೨೦೨೨-೨೫ ನೇ ಸಾಲಿನ ಅನೇಕ ರಚನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳನ್ನು ಕೈಗೊಂಡಿದ್ದು, ಪತ್ರಕರ್ತ ಸದಸ್ಯರ ಕ್ಷೇಮಾಭಿವೃದ್ದಿಗೆ, ವೃತ್ತಿಪರ ಏಳಿಗೆಗೆ ಶ್ರಮವಹಿಸುತ್ತಾ ಬಂದಿದೆ. ಪತ್ರಕರ್ತರ ಸಂಘದ ಎಲ್ಲಾ ಸದಸ್ಯರುಗಳು ಜು. ೨೬ ರಂದು ನಡೆಯಲಿರುವ ಸರ್ವ ಸದಸ್ಯರ ಸಭೆಯಲ್ಲಿ ಇದರಲ್ಲಿ ಭಾಗಹಿಸುವ ಮೂಲಕ ಸಂಘದ ಬಲವರ್ಧನೆಗೆ ಸಹಕರಿಸಬೇಕಾಗಿ ಎನ್. ರವಿಕುಮಾರ್ ಮನವಿ ಮಾಡಿಕೊಂಡರು.
ಪತ್ರಿಭಾಪುರಸ್ಕಾರ-ಸಾಧಕರ ಪತ್ರಕರ್ತರಿಗೆ ಸನ್ಮಾನ
ಸುದ್ದಿಮಾಧ್ಯಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ಪ್ರಶಸ್ತಿಗಳಿಂದ ಪುರಸ್ಕೃತರಾದ ಜಿಲ್ಲೆಯ ಪತ್ರಕರ್ತರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಗುತ್ತಿದೆ.
ಪತ್ರಕರ್ತರಾದ ಆರುಂಡಿ ಶ್ರೀನಿವಾಸ್ ಮೂರ್ತಿ, ಜಿ.ಟಿ ಸತೀಶ್, ರವಿಬಿದನೂರು, ಚಂದ್ರಶೇಖರ್ ಶೃಂಗೇರಿ, ಗಿರೀಶ್ ಉಮ್ರಾಯಿ, ಕವಿತಾ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ತೀರ್ಪುಗಾರರ ಸೆನ್ಸಾರ್ ಮಂಡಳಿ ಸದಸ್ಯರಾಗಿ ನೇಮಕಗೊಂಡಿರುವ ಹಿರಿಯ ಪತ್ರಕರ್ತ ವೈದ್ಯನಾಥನ್ ಹೆಚ್. ಯು., ಕರ್ನಾಟಕ ಸರ್ಕಾರದ ಚಲನಚಿತ್ರ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ಪ್ರತಿಭಾನ್ವಿತ ಪತ್ರಕರ್ತ ದೇಶಾದ್ರಿ ಹೊಸ್ಮನಿ ಅವರನ್ನು ಅಭಿನಂದಿಸಲಾಗುವುದು.
ಎಸ್‌ಎಸ್‌ಎಲ್‌ಸಿ. ಪಿಯಸಿಯಲ್ಲಿ ಗರಿಷ್ಠ ಅಂಕಗಳಿಸಿದ ಪತ್ರಕರ್ತರ ಮಕ್ಕಳಾದ ಶರಣ್ಯನಾಯರ್, ನವ ಎಸ್. ನಾಯಕ್, ರಘು ಸಮರ್ಥನಾಡಿಗ್, ವೈ.ಎಸ್. ಅನಿಕೇತನ್, ವೈ.ಎಸ್. ಆಯುಷ್, ಕೆ.ಎನ್. ಶ್ರೇಯಾ, ಸಮರ್ಥ ಎಸ್. ಕಿರುವಾಸೆ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್ ವಿ.ಟಿ. ಕಾರ್ಯದರ್ಶಿ ಸೋಮನಾಥ್ ಕೆ.ಆರ್. ಉಪಸ್ಥಿತರಿದ್ದರು.