ಹಕ್ಕುಪತ್ರ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದ್ದು, ಹಕ್ಕುಪತ್ರ ನೀಡಲು ಹೆಮ್ಮೆ ಮತ್ತು ಸಂತೋಷವಾಗುತ್ತದೆ ಎಂದು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ತಿಳಿಸಿದರು.
ಕಂದಾಯ ಇಲಾಖೆ, ಸೊರಬ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯತಿ ವತಿಯಿಂದ ಸೊರಬ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಕ್ಕು ಪತ್ರ ನೀಡುವುದು ಹೆಮ್ಮೆಯ ವಿಷಯ. ಹಕ್ಕುಪತ್ರ ಇಲ್ಲದವರಿಗೆ ಹಕ್ಕು ಪತ್ರ ಒದಗಿಸಲು ಸರ್ಕಾರ ಶ್ರಮಿಸುತ್ತಿದೆ. ಕಂದಾಯ ಸಚಿವರು ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತರಲಾಗುತ್ತಿದ್ದಾರೆ. ೯೪ ಸಿ, ೯೪ ಸಿಸಿ ಅರ್ಜಿಗಳಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿವೆ, ಈ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ. ಹಕ್ಕು ಪತ್ರ ಇಲ್ಲದವರಿಗೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಜನರು ಸರ್ಕಾರದ ಮೇಲೆ ವಿಶ್ವಾಸ ಇಡಬೇಕು.
ಅರಣ್ಯ ಹಕ್ಕು ಕಾಯ್ದೆಯನ್ವಯ ಅರಣ್ಯದಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ನ್ಯಾಯ ಒದಗಿಸುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಶರಾವತಿ ಸಂತ್ರಸ್ತರು ೧೯೫೮ ರಲ್ಲಿ ಜಲಾಶಯಕ್ಕಾಗಿ ತಮ್ಮ ಭೂಮಿ ಬಿಟ್ಟುಕೊಟ್ಟಿದ್ದು ಈವರೆಗೆ ಅವರಿಗೆ ಹಕ್ಕು ಪತ್ರ ನೀಡಲಾಗಿಲ್ಲ, ಸಾಗರ, ತೀರ್ಥಹಳ್ಳಿ ಹೊಸನಗರ, ಭದ್ರಾವತಿ ಕಡೆಯಲ್ಲಿ ಸಂತ್ರಸ್ತರಿದ್ದಾರೆ.
ಇವರಿಗೆ ಸುಮಾರು
೧೦ ಸಾವಿರ ಎಕರೆಯಷ್ಟು ಭೂಮಿ ನೀಡಬೇಕಿದ್ದು, ದೊಡ್ಡ ಮಟ್ಟದ ಕಾನೂನು ರೂಪಿಸಿ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಚರ್ಚೆ, ಪ್ರಕ್ರಿಯೆ ನಡೆಯುತ್ತಿದೆ.
ತಾಲ್ಲೂಕಿನಲ್ಲಿ ಹಕ್ಕುಪತ್ರ ಇಲ್ಲದ ಗ್ರಾಮಗಳಲ್ಲಿ ಮುಖಂಡರು, ಸಮಿತಿ ಸದಸ್ಯರು ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಹಕ್ಕು ಪತ್ರ ನೀಡುವ ಪ್ರಕ್ರಿಯೆ ಚುರುಕುಗೊಳಿಸಬೇಕು.
ಶಾಸಕರುಗಳಿಗೆ ಕ್ಷೇತ್ರ ಅಭಿವೃದ್ಧಿಗೆ ರೂ. ೫೦ ಕೋಟಿ ಮಂಜೂರಾಗಿದ್ದು, ಸೊರಬದಲ್ಲಿ ರೂ. ೪೬ ಕೋಟಿ ಅನುದಾನವನ್ನು ರಸ್ತೆಗಾಗಿ ಬಳಕೆ ಮಾಡಲಾಗುತ್ತಿದೆ.೩೦ ಕಿ.ಮೀ ಪ್ರಗತಿ ಪಥ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ರಸ್ತೆಗಾಗಿ ಸುಮಾರು ೧೦೦ ಕೋಟಿ ಅನುದಾನ ಅಗತ್ಯವಿದೆ. ರೂ. ೧೬೨ ಕೋಟಿ ಅನುದಾನ ನೀರಾವರಿ ಯೋಜನೆಗೆ ಬಳಕೆ ಮಾಡಲಾಗುತ್ತಿದೆ ಎಂದರು.
ತಾಲ್ಲೂಕಿನಲ್ಲಿ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿದ್ದು, ಜನರ ಬಾಳಲ್ಲಿ ಬೆಳಕಾಗಿದೆ.
ಶಿಕ್ಷಣ ಇಲಾಖೆಯಲ್ಲಿ ೪೩ ಸಾವಿರ ಕೋಟಿ ಅನುದಾನ ಬಳಕೆ ಮಾಡಲಾಗುತ್ತಿದೆ. ೪ ರಿಂದ ೫ ಸಾವಿರ ಕೋಟಿ ಸಿಎಸ್ ಆರ್ ನಿಧಿ ತರಲಾಗಿದೆ. ಉಚಿತ ಪಠ್ಯ, ಸಮವಸ್ತ್ರ, ಶೂ, ಮಧ್ಯಾಹ್ನದ ಬಿಸಿಯೂಟದೊಂದಿಗೆ
ವಾರದಲ್ಲಿ ೬ ದಿನ ೫೭ ಲಕ್ಷ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಇಂಟರ್ಯಾಕ್ಟಿವ್ ಸ್ಮಾರ್ಟ್ ತರಗತಿ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಪ್ರತಿ
ಹೋಬಳಿಗೊಂದು ಕೆಪಿಎಸ್ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದ ಅವರು ಅನುಕೂಲ ಇರುವವರು ತಾವು ಓದಿದ ಸರ್ಕಾರಿ ಶಾಲೆಗಳಿಗೆ ಕೊಡುಗೆ ನೀಡಲು ಮುಂದೆ ಬರುವಂತೆ ಕರೆ ನೀಡಿದರು.
ತಹಶಿಲ್ದಾರ್ ಮಂಜುಳಾ ಹೆಗಡಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ ಪಿ ರುದ್ರೇಗೌಡ ಮಾತನಾಡಿ, ರಾಜ್ಯ ಸರ್ಕಾರ ಹಕ್ಕು ಪತ್ರ ಇಲ್ಲದ ಗ್ರಾಮಗಳಿಗೆ ಹಕ್ಕು ಪತ್ರ ನೀಡುತ್ತಿರುವುದು ಅಭಿನಂದನೀಯ. ಹಕ್ಕು ಪತ್ರ ಅಗತ್ಯವಿರುವ ಇನ್ನೂ ಬೇರೆ ಗ್ರಾಮಗಳಿವೆ.ಅವುಗಳಿಗೂ ಮುಂದಿನ ದಿನಗಳಲ್ಲಿ ಈ ಸೌಲಭ್ಯ ಒದಗಲಿದೆ. ಹಕ್ಕುಪತ್ರದಿಂದಾಗಿ ಸರ್ಕಾರಿ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ . ಆದ್ದರಿಂದ ಎಲ್ಲರೂ ಈ ನಿಟ್ಟಿನಲ್ಲಿ ಸಹಕರಿಸಬೇಕು.
ಸಚಿವರು, ಸೊರಬ ತಾಲ್ಲೂಕಿನ ಹಂಚಿ ತಾಂಡ ಮತ್ತು ತತ್ತೂರು ವಡ್ಡಿಗೆರೆ 2 ಕಂದಾಯ ಗ್ರಾಮಗಳ 96 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರು.
ಸೊರಬದ ಸರ್ಕಾರಿ ಪಾಲಿಟೆಕ್ನಿಕ್ ನ
೧೪ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಿದರು.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಟೈಲರಿಂಗ್, ಬಡಗಿ, ವೆಲ್ಡಿಂಗ್, ಗಾರೆ ಒಟ್ಟು ೭೬ ಫಲಾನುಭವಿಗಳಿಗೆ ಸುಧಾರಿತ ಉಪಕರಣಗಳನ್ನು ವಿತರಿಸಲಾಯಿತು ಮತ್ತು ೮ ಫಲಾನುಭವಿಗಳಿಗೆ
ಬಂಡವಾಳ ಹೂಡಿಕೆ ಧನ ಸಹಾಯ ನೀಡಲಾಯಿತು.
ಮೀನುಗಾರಿಗೆ ಇಲಾಖೆ ವತಿಯಿಂದ ಮತ್ಸ್ಯ ಸಂಜೀವಿನಿ ಯೋಜನೆಯಡಿ ೨ ಮಹಿಳಾ ಸಂಘಗಳಿಗೆ ಉಚಿತವಾಗಿ ಮೀನು ಮರಿ ಮತ್ತು ಮೀನಿನ ಆಹಾರ ಹಾಹೂ ೫ ಕೃಷಿ ಹೊಂಡ ಗಳಿಗೆ ತಲಾ ೫೦೦ ಮೀನುಮರಿಗಳನ್ನು ವಿತರಿಸಿದರು.
ಜಿ.ಪಂ.ವತಿಯಿಂದ ಆಯ್ದ ೩ ಜನ ವಿಕಲಚೇತನರಿಗೆ ವಾಹನ ವಿತರಣೆ, ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯಿಂದ ವಿಕಲಚೇತನರಿಗೆ ೩ ವ್ಹೀಲ್ ಚೇರ್ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಿದರು.
ಸೊರಬ ಪುರಸಭೆ ಉಪಾಧ್ಯಕ್ಷೆ ಶ್ರೀ ರಂಜನಿ, ಪುರಸಭೆ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ಕೆಡಿಪಿ ಸದಸ್ಯರು, ಬಗರ್ ಹುಕುಂ ಸಮಿತಿ ಸದಸ್ಯರು,ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ತಾಲ್ಲೂಕು ಸಮಿತಿ ಅಧ್ಯಕ್ಷರು,, ಭೂ ನ್ಯಾಯ ಮಂಡಳಿ ಸದಸ್ಯರು,ಜಿ.ಪಂ.ಯೋಜನಾ ನಿರ್ದೇಶಕಿ ನಂದಿನಿ,
ಸೊರಬ ತಾಲ್ಲೂಕಿನ ಇಓ ಶಶಿಧರ್,
ಹಿರಿಯ ನಾಗರಿಕರು ಮತ್ತುವಿಕಲಚೇತನರ ಕಲ್ಯಾಣ ಇಲಾಖೆ, ಮೀನುಗಾರಿಕೆ, ಕೈಗಾರಿಕೆ ಇತರೆ ಇಲಾಖೆಗಳ ಅಧಿಕಾರಿಗಳು,ತಾಲ್ಲೂಕು ಮಟ್ಟದ ಅಧಿಕಾರಿಗಳು, ಮುಖಂಡರು ಹಾಜರಿದ್ದರು.