ನುಲಿಯ ಚಂದಯ್ಯ ಕಾಯಕದ ಸಮೂಹಕ್ಕೆ ಹೆಚ್ಚು ಶಕ್ತಿಯನ್ನು ತುಂಬುವ ಮೂಲಕ ಕಾಯಕವು ಎಲ್ಲರ ಜೀವನಕ್ಕೆ ಅತ್ಯವಶ್ಯಕವಾಗಿದೆ ಎಂಬ ಸಂದೇಶವನ್ನು ಸಾರಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕೊರಮ ಹಾಗೂ ಕೊರಚ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನುಲಿಯ ಚಂದಯ್ಯ ಕಾಯಕಕ್ಕೆ ಹೆಸರು ವಾಸಿಯಾದವರು. ಇವರು ಸುಮಾರು 48 ವಚನಗಳನ್ನು ರಚಿಸಿದ್ದು, ಆ ಮೂಲಕ ಕಾಯಕ ಸಮೂಹಕ್ಕೆ ಹೆಚ್ಚು ಶಕ್ತಿಯನ್ನು ತುಂಬಿದ್ದಾರೆ. ಕಾಯಕ ಎಲ್ಲರ ಜೀವನಕ್ಕೆ ಅತಿ ಅವಶ್ಯಕ ಎನ್ನುವ ಮೂಲಕ ಇಡೀ ಮನುಕುಲಕ್ಕೆ ಶಕ್ತಿಯ ತುಂಬಿದ್ದರು. ಕಾಯಕ ಇಲ್ಲದೆ ಜೀವನ ಸಾಗಿಸುವುದು ಕಷ್ಟಕರ ಎಂದಿದ್ದ ಅವರು ನಾಯಕತ್ವವನ್ನು ಪಡೆಯುವ ವ್ಯಕ್ತಿ ಸಮಾಜಕ್ಕೆ ಏನೇನು ಮಾಡಬೇಕೆಂದು ಸಲಹೆಯನ್ನು ಕೂಡ ಅವರು ನೀಡಿದ್ದಾರೆ ಎಂದರು.


ನುಲಿಯ ಚಂದಯ್ಯರವರ ಹುಟ್ಟೂರು ಬಿಜಾಪುರ ಜಿಲ್ಲೆಯ ಶಿವಣಗಿ. 1160 ರಲ್ಲಿ ಶೂನ್ಯ ಸಂಪಾದನೆ ಮತ್ತು ಪುರಾಣಗಳಲ್ಲಿ ಈತನ ಕಾಯಕನಿಷ್ಠೆಯ ಕಥೆ ವರ್ಣಿತವಾಗಿದೆ. ಶರಣ ನುಲಿಯ ಚಂದಯ್ಯನವರು ಕಲ್ಯಾಣ ರಾಜ್ಯದ ಹೊರವಲಯದ ಕೆರೆಯ ಹಿನ್ನೀರ ದಡದಲ್ಲಿ ಬೆಳೆದ ಸೊಗಸಾದ ಹುಲ್ಲು ತಂದು ಹಗ್ಗ ಹೊಸೆದು ಅದನ್ನು ಮಾರಿ ಅದರಿಂದ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದರು.
ಶಿವಮೊಗ್ಗ ಜಿಲ್ಲೆಯ ತುಂಗಾ ಪ್ರದೇಶಕ್ಕೆ ಬರುವ ಚಂದಯ್ಯನವರು ಪದ್ಮಾವತಿ ಎಂಬ ಊರಿಗೆ ಬರುತ್ತಾರೆ. ದುಮ್ಮಿರಾಯನ ಹೆಂಡತಿಯಾದ ಪದ್ಮಾವತಿ ಚಂದಯ್ಯನವರಿAದ ಧರ್ಮೊಪದೇಶವನ್ನು ಪಡೆದು ಅವರ ಅಪ್ಪಣೆಯ ಪ್ರಕಾರ ಒಂದು ಕೆರೆಯನ್ನು ಕಟ್ಟಿಸುತ್ತಾರೆ. ಆ ಕೆರೆಗೆ ಇಂದಿಗೂ ಪದ್ಮಾವತಿ ಅಂತಾನೆ ಸರಕಾರಿ ದಾಖಲೆಗಳುಂಟು. ಕೆರೆ ಸಿದ್ಧವಾದ ಮೇಲೆ ಕೆರೆಯ ಏರಿಯ ಮೇಲೊಂದು ಚಂದಯ್ಯನವರಿಗೊಸ್ಕರ ಮೂರಂಕಣದ ಮಠವೊಂದನ್ನ ಕಟ್ಟಿಸಿಕೊಡುತ್ತಾರೆ.


ಮೂರಂಕಣದ ಮಠದಲ್ಲಿ ಚಂದಯ್ಯ ತಮ್ಮ ಕೊನೆಕಾಲದವರೆಗೂ ಅನುಭಾವ ಗೋಷ್ಠಿ ನಡೆಸುತ್ತಿದ್ದರು. ಅವರು ಲಿಂಗೈಕ್ಯರಾದಾಗ ಅವರ ಕ್ರಿಯಾ ಸಮಾಧಿಯನ್ನು ಆ ಮಠದಲ್ಲೆ ಮಾಡಲಾಗಿತ್ತು.
ಬನವಾಸಿಯ ಮಧುಕೇಶ್ವರ ದೇವಾಲಯದ ಕಲ್ಲು ಮಂಟಪದಲ್ಲಿ ನುಲಿಯ ಚಂದಯ್ಯ, ಅಗ್ಗವಣಿಯ ಹೊನ್ನಯ್ಯ, ಮೋಳಿಗೆ ಮಾರಯ್ಯ. ಹಡಪದ ಅಪ್ಪಣ್ಣ, ಜೇಡರ ದಾಸಿಮಯ್ಯ, ಆಯ್ದಕ್ಕಿ ಮಾರಯ್ಯ, ಹಾಳಿನ ಹಂಪಣ್ಣ ಇವರ ಮೂರ್ತಿಗಳನ್ನು ಅವರವರ ಅಂಕಿತ ನಾಮದೊಡನೆ ಕೆತ್ತಲಾಗಿದೆ ಎಂದರು.ತಿಳಿಸಿದರು.


ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷÀರಾದ ಸಿ.ಎಸ್.ಚಂದ್ರಭೂಪಾಲ ಮಾತನಾಡಿ, ನುಲಿಯ ಚಂದಯ್ಯ 12 ನೇ ಶತಮಾನದಲ್ಲಿ ಬಸವಣ್ಣರಿಗೆ ಬಹಳ ಪ್ರಯವಾದ ವಚನಕಾರರಾಗಿದ್ದು, ಅವರು ತಾನು ದುಡಿದು ಜೀವನ ಸಾಗಿಸಬೇಕು ಹೊರತು ಬೇರೆ ಅವರ ದುಡ್ಡಲ್ಲಿ ಜೀವನ ಸಾಗಿಸಬಾರದು ಎನ್ನುತ್ತಿದ್ದರು. ಇಂತಹ ಮಹನೀಯರ ಜಯಂತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅವರ ಆಶಯಗಳಿಗೆ ಗೌರವಿಸಬೇಕು. ಶಾಲಾ ಹಾಗೂ ಕಾಲೇಜಿನಲ್ಲೂ ಈ ಮಹನೀಯರ ಕಾರ್ಯಕ್ರಮಗಳನ್ನು ಆಚರಣೆ ಮಾಡುವ ಮೂಲಕ ಮಕ್ಕಳಿಗೆ ಇವರ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು. ಈ ಕುರಿತು ಸರ್ಕಾರದ ಬಳಿಯೂ ನಾನು ಮನವಿ ಮಾಡುತ್ತೇನೆ ಎಂದರು.


ಸಮಾಜದ ಮುಖಂಡರಾದ ಅನಿಲ್ ಕುಮಾರ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ನುಲಿಯ ಚಂದಯ್ಯ ಕಾಯಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದು, ಅದರಿಂದ ಬಂದ ಹಣದಿಂದ ದಾಸೋಹ ಮಾಡುತ್ತಿದ್ದರು. ಅವರು ರಚಿಸಿರುವ 48 ವಚನಗಳಲ್ಲಿ ಅತೀ ಹೆಚ್ಚಿನ ವಚನ ಕಾಯಕದ ಆಧಾರವಾಗಿದ್ದು, ವಚನಗಳಲ್ಲಿ ಗುರು ಆಗಲಿ, ಜಂಗಮವಾಗಲಿ ಕಾಯಕವೇ ಮೊದಲು ಮಾಡಬೇಕು ಎಂದಿದ್ದಾರೆ. ಹಾಗೂ ಅದರಲ್ಲಿ 28 ವಚನಗಳು ಲಿಂಗ ದೇವರ ಪೂಜೆ ಕುರಿತು ತಿಳಿಸುತ್ತದೆ ಎಂದರು.


ಮನುಷ್ಯನಿಗೆ ಕಾಯಕ ನಿಷ್ಠೆ ಮುಖ್ಯ. ಪ್ರೀತಿಯಿಂದ ಕಾಯಕ ಮಾಡಿದರೆ ಮಾತ್ರ ಮಾನವೀಯ ಗುಣಗಳು ಹುಟ್ಟಲು ಸಾಧ್ಯ ಎಂದ ನುಲಿಯ ಚಂದಯ್ಯ ಬಲವಂತದ ಹಾಗೂ ಕಾಡಿ ಬೇಡಿ ಮಾಡುವ ಕಾಯಕ ತೃಪ್ತಿ ನೀಡುವುದಿಲ್ಲ ಎಂದಿದ್ದಾರೆ ಎಂದು ತಿಳಿಸಿದರು.
ಕೊರಮ, ಕೊರಚ ಸಮುದಾಯಗಳು ಈಗ ಅಲೆಮಾರಿ ಪಟ್ಟಿಯಲ್ಲಿದ್ದು, ಅತ್ಯಂತ ಹಿಂದುಳಿದಿದ್ದಾರೆ. ಉದ್ಯೋಗ, ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಾಕಷ್ಟು ಅರಿವಿಲ್ಲದೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ವಿಫಲರಾಗುತ್ತಿದ್ದಾರೆ. ನಮ್ಮ ಸೌಲಭ್ಯಗಳನ್ನು ಪಡೆಯಲು ಇರುವ ಒಂದೇ ಮಾರ್ಗ ಅದು ಸಂಘಟನೆ. ಸಂಘಟನೆ ಕಟ್ಟಿದಾಗ ಮಾತ್ರ ನಮ್ಮೆಲ್ಲಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.


ಹೆಚ್ಚುವರಿ ಪೊಲೀಸ್ ಅಧಿಕ್ಷಕರು ರಮೇಶ್ ಕುಮಾರ್ ಮಾತನಾಡಿ, ನುಲಿಯ ಚಂದಯ್ಯ ಅನುಭವ ಮಂಟಪದಿಂದ ದೂರಾದ ಮೇಲೆ ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಹೊಳಲ್ಕೆರೆಗೆ ಬಂದರು. ಇಲ್ಲಿಯೂ ಕಾಯಕವನ್ನು ಮಾಡಿ ದಾಸೋಹವನ್ನು ನೀಡಿದರು. ಇಂತಹ ಮಹನೀಯರು ಹಾಕಿ ಕೊಟ್ಟ ದಾರಿಯಲ್ಲಿ ನಾವೆಲ್ಲಾ ಸಾಗಬೇಕು. ಆಗ ಮಾತ್ರ ಅವರ ವಿಚಾರಗಳನ್ನು ಸಮಾಜದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ. ಹಾಗಾಗಿ ನಾವೆಲ್ಲಾ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ತಹಸೀಲ್ದಾರ್ ರಾಜೀವ್, ಕೊರಚ ಸಮಾಜದ ಸಂಘದ ಜಿಲ್ಲಾಧ್ಯಕ್ಷರಾದ ಸುರೇಶ್ ಹಾಗೂ ಸಮಾಜದ ಇತರೆ ಮುಖಂಡರುಗಳು ಇದ್ದರು.