ಕನಸು ಎಂದಾಗ ನನಗೆ ನೆನಪಾಗುವುದೇ ನನ್ನ ಹೆಮ್ಮೆಯ ಅಪ್ಪ. ಪುಟ್ಟ ಪುಟ್ಟ ಹೆಜ್ಜೆ ಇಟ್ಟಾಗ ಎಡವಿದ ನನ್ನನ್ನು ತಿದ್ದಿ ತೀಡಿ ಅಂದಿನಿಂದ ಇಲ್ಲಿಯವರೆಗೂ ನಾ ಕಂಡ ಕನಸನ್ನು ಹೇಗೆ ಸಾಕಾರಗೊಳಿಸಬೇಕು ಎಂದು ಹೇಳಿಕೊಟ್ಟದ್ದು ನನ್ನಪ್ಪ. ಕನಸು ಕಂಡರೆ ಸಾಲದು ಮಗಳೇ ಅದನ್ನು ಸಾಧಿಸಲು ನಿರಂತರ ಶ್ರಮ ವಿರಬೇಕು ಎಂದು ಸದಾ ಎಚ್ಚರಿಸುತ್ತಿದ್ದರು. ನಾನು ಕಾಲೇಜ್ ಲೆಕ್ಚರ್ ಆಗಬೇಕು ಎಂದು ಹೇಳಿದಾಗ ಸಂತಸಪಟ್ಟರು ನಿನ್ನೊಂದಿಗೆ ನಾವೆಲ್ಲರೂ ಇದ್ದೇವೆ ಚೆನ್ನಾಗಿ ಓದು ಎಂದು ಹುರಿದುಂಬಿಸಿದರು. ಹಾಗೆಯೇ ಕಿವಿಮಾತು ಕೂಡ ಹೇಳಿದರು ಸಮಾಜದಲ್ಲಿ ಪ್ರತಿಯೊಂದು ವೃತ್ತಿಗೂ ಗೌರವವಿದೆ. ಆದರೆ ನಿನ್ನ ವೃತ್ತಿ ಅತ್ಯಂತ ಜವಾಬ್ದಾರಿಯುತ ವಾದದ್ದು. ನೀನು ಈಗಿನಿಂದಲೇ ಸಮಯಪಾಲನೆ, ಸಹನೆ ಶಿಸ್ತು ಸಂಸ್ಕಾರ ಮೌಲ್ಯಯುತ ನಡೆ ಎಲ್ಲವನ್ನೂ ರೂಡಿಸಿಕೊಳ್ಳಬೇಕು ಎಂದರು. ಇವೆಲ್ಲವೂ ನನ್ನ ತಂದೆ ತಾಯಿಯಿಂದ ಬಂದ ಬಳುವಳಿಯಾಗಿದೆ. ಇವೆ ನನ್ನ ಕನಸಿಗೆ ದಾರಿದೀಪ ವಾದವು. ಆಗಾಗ ಹೇಳುತ್ತಿದ್ದರು ಮೊಬೈಲ್ ಟಿವಿಗಳಿಂದ ದೂರವಿರು ಪುಸ್ತಕವನ್ನು ಓದುವ ಹುಚ್ಚು ಬೆಳೆಸಿಕೊ ಎಂದು ಈ ಮಾತು ನನ್ನ ಕನಸನ್ನು ಸಾಧನೆಯ ಹಾದಿಯಲ್ಲಿ ಕೊಂಡೊಯ್ಯಿತು. ನಿರಂತರ ಪರಿಶ್ರಮದಿಂದ ಸಾಧನೆಯ ಶಿಖರವೇರಿದ ಮಹಾನ್ ಸಾಧಕರಾದ ಅಬ್ದುಲ್ ಕಲಾಂ, ಅಂಬೇಡ್ಕರ್, ಕಲ್ಪನಾ ಚಾವ್ಲಾ ಸರ್ವಪಲ್ಲಿ ರಾಧಾಕೃಷ್ಣ ಮುಂತಾದವರ ಜೀವನ ಚರಿತ್ರೆಯ ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸುತ್ತಿದ್ದರು. ಅವರ ಪ್ರೋತ್ಸಾಹವೇ ನನ್ನ ಕನಸಿಗೆ ಭದ್ರಬುನಾದಿ ಆಯಿತು. ಇಷ್ಟಪಟ್ಟು ಓದಿ S.S.L.C ಮತ್ತು P.U.C ನಾನು ನನ್ನ ತಮ್ಮ ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾಗಿ ಅಪ್ಪ-ಅಮ್ಮನ ಕನಸನ್ನು ನನಸು ಮಾಡಿದೆವು. ಡಿಗ್ರಿ ಮಾಡುತ್ತಲೇ ನಿನ್ನ ಕನಸಿಗೆ ಪೂರಕವಾಗುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಓದು ಅನುಕೂಲವಾಗುತ್ತದೆ ಎಂದು ಅಪ್ಪ ಆಗಾಗ ಹೇಳುತ್ತಿದ್ದರು ಅದರಂತೆಯೇ ಆಸಕ್ತಿಯಿಂದ ಓದುತ್ತಿದ್ದೇನೆ. ದುರದೃಷ್ಟವಶಾತ್ ನನ್ನ ಕನಸಿನ ಸಾಕಾರಮೂರ್ತಿ, ದೇವತಾ ಸ್ವರೂಪಿ, ಚೈತನ್ಯ ಚಿಲುಮೆ, ಸಂಸ್ಕಾರ ತುಂಬಿದ ಕಣಜ, ಯಾರಿಗೂ ಇಲ್ಲದ ಅಮೂಲ್ಯ ರತ್ನ ಇದೇ ಆಗಸ್ಟ್ 10ರಂದು ಈ ಕೋರೋಣ ಎಂಬ ಮಹಾಮಾರಿಗೆ ಹೆದರಿ ಹೃದಯಾಘಾತವಾಗಿ ಮರಣಹೊಂದಿದರು. ಆಕಾಶವೇ ಕಳಚಿ ಬಿದ್ದಂತಾಗಿ ನನ್ನ ಕನಸಿನೊಂದಿಗೆ ನಮ್ಮ ಜೀವನವು ಕಮರಿ ಹೋಯಿತು ಎಂದು ದಿಕ್ಕು ತೋಚದೆ ನಿಂತಾಗ. ನನ್ನ ಕನಸಿಗೆ ನನ್ನ ಜೀವನಕ್ಕೆ ಜೀವ ತುಂಬುತ್ತಿರುವ ವರು ನನ್ನ ಅಪ್ಪನ ಕಡೆಯವರು ಹಾಗೂ ನನ್ನ ಅಮ್ಮನ ಕಡೆಯವರು ಇಂತಹ ಪರಿಸ್ಥಿತಿಯಲ್ಲೂ ನೋವನ್ನು ನುಂಗಿ ನನ್ನ ಕನಸನ್ನು ನನಸು ಮಾಡಲು ಹೋರಾಡುತ್ತಿರುವ ಪ್ರೋತ್ಸಾಹಿಸುತ್ತಿರುವ ನನ್ನ ತ್ಯಾಗಮಹಿ ಅಮ್ಮ ಹಾಗೂ ಪ್ರೀತಿಯ ತಮ್ಮ ನನ್ನ ಮರೆಯಲಾಗದ ಮಾಣಿಕ್ಯಗಳು ಎಲ್ಲರ ಆಶೀರ್ವಾದದೊಂದಿಗೆ ಶ್ರಮಪಟ್ಟು ಓದಿ ಕನಸನ್ನು ನನಸು ಮಾಡಿಕೊಂಡು ಉತ್ತಮ ಉಪನ್ಯಾಸಕಿಯಾಗಿ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುತ್ತೇನೆ.ಬದುಕಿನ ಹಾದಿಯಲ್ಲಿ ಹಲವು ಕಷ್ಟಗಳು ಬರುತ್ತವೆ.ಅವೆಲ್ಲವನ್ನು ಹೆದರಿಸಿ..ಕೆಲವೊಮ್ಮೆ ನೋವನ್ನು ನುಂಗಿಕೊಂಡು ಬದುಕಬೇಕಾಗುತ್ತದೆ..ನಮ್ಮ ತಂದೆ ತಾಯಿಗಳ ಕನಸನ್ನು ಈಡೇರಿಸಬೇಕು.ಆದ್ದರಿಂದ ಸ್ನೇಹಿತರೆ, ಸಾಧನೆಯ ಹಾದಿಯಲ್ಲಿ ಹಲವು ಕಷ್ಟ ಗಳು ಎದುರಾದಾಗ, ಅವುಗಳನ್ನೇ ಮೆಟ್ಟಿಲಾಗಿಸಿಕೊಂಡು ಮುನ್ನಡೆಯಬೇಕು..ನಾನು ನನ್ನ ಕನಸಿನೆಡೆಗೆ ಸಾಗುತ್ತಿದ್ದೇನೆ.

ಲೇಖನ : ಭೂಮಿಕಾ. K. S
ಪ್ರಥಮ ಡಿಗ್ರಿ
D. V. S. ಕಾಲೇಜ್
ಶಿವಮೊಗ್ಗ( ತಾಲೂಕ್)
ಶಿವಮೊಗ್ಗ( ಜಿಲ್ಲೆ)