ಡಿಎಆರ್ ಪೊಲೀಸ್ ಸಭಾಂಗಣ ಶಿವಮೊಗ್ಗದಲ್ಲಿ ಶ್ರೀ ಮಿಥುನ್ ಕುಮಾರ್ ಜಿ.ಕೆ, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯನ್ನು ನಡೆಸಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದ ಮುಖಂಡರುಗಳು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪ್ರಕರಣಗಳಲ್ಲಿ ನೊಂದವರ ಕುಂದು ಕೊರತೆಗಳನ್ನು ಆಲಿಸಿ ಈ ಕೆಳಕಂಡ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

1) ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ಮೂಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಸಭೆಯಲ್ಲಿದ್ದವರು ಕೇಳಿದ್ದು, – ಇದಕ್ಕೆ ಸಂಬಂಧಪಟ್ಟಂತೆ ನಿರ್ದಿಷ್ಟವಾದ ಮಾಹಿತಿಯನ್ನು ನೀಡಿ, ಪೊಲೀಸ್ ಇಲಾಖೆ / ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಗೆ ದೂರು ನೀಡಿದ್ದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

2) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಾಯ್ದೆಯ ಅಡಿಯಲ್ಲಿ ದೂರು ನೀಡುವಾಗ ಕೆಲವರು ದುರುಪಯೋಗ ಪಡಿಸಿಕೊಂಡು ನೊಂದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ, ಸರ್ಕಾರದಿಂದ ಪರಿಹಾರವನ್ನು ಪಡೆದುಕೊಳ್ಳುತ್ತಿದ್ದು, ಕ್ರಮ ಕೈಗೊಳ್ಳಲು ಕೋರಿದ್ದು, – ಈ ಬಗ್ಗೆ ಸೂಕ್ತ ರೀತಿಯಲ್ಲಿ ನಿಸ್ಪಕ್ಷಪಾತವಾಗಿ ತನಿಖೆ ಕೈಗೊಳ್ಳಲಾಗುತ್ತಿದ್ದು, ಒಂದು ವೇಳೆ ಈ ರೀತಿ ಉದ್ದೇಶ ಪೂರ್ವಕವಾಗಿ ಮಾಡಿರುವುದು ಕಂಡು ಬಂದಲ್ಲಿ, ಘನ ನ್ಯಾಯಾಲಯಕ್ಕೆ ಬಿ ಅಂತಿಮ ವರದಿ ಸಲ್ಲಿಸಲಾಗುತ್ತಿದೆ ಹಾಗೂ ಅಂಗೀಕಾರವಾದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ಪರಿಹಾರವನ್ನು ನೀಡದಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ವ್ಯವಹಾರ ಮಾಡಲಾಗುತ್ತದೆ.

3) ಕಂಬದ ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣಸೇ ಕಟ್ಟೆಯಲ್ಲಿ ದಲಿತ ಕಾಲೋನಿಗೆ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕಕ್ಕೆ ಮೇಲ್ವರ್ಗದವರು ಅಡ್ಡಿ ಪಡಿಸುತ್ತಿದ್ದಾರೆಂದು ಹೇಳಿದ್ದು, – ಈ ಬಗ್ಗೆ ಈಗಾಗಲೇ ಭದ್ರಾವತಿಯ ಇ.ಒ ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳವರ ಗಮನಕ್ಕೆ ತರಲಾಗಿದ್ದು, ಸಮಸ್ಯೆ ಸರಿಪಡಿಸುವ ಬಗ್ಗೆ ಕ್ರಮ ಕೈಗೊಂಡಿರುತ್ತದೆ.

4) ಘನ ನ್ಯಾಯಾಲಯದ ತಡೆಯಾಜ್ಞೆಯಲ್ಲಿರುವ ಭದ್ರಾವತಿ ಹಳೆ ನಗರ ಪೊಲೀಸ್ ಪ್ರಕರಣದ ಬಗ್ಗೆ ಉಲ್ಲೇಖಿಸಿದ್ದು, – ಘನ ನ್ಯಾಯಾಲಯದಲ್ಲಿ ಸದರಿ ಪ್ರಕರಣದ ತಡೆಯಾಜ್ಞೆಯನ್ನು ತೆರವುಗೊಳಿಸಲು ಕೈಗೊಳ್ಳಬೇಕಾದ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಪಾಲಿಸಲಾಗಿರುತ್ತದೆ. ಘನ ನ್ಯಾಯಾಲಯದ ಆದೇಶದನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

5) ತಮಿಳು ನಾಡಿನಿಂದ ಬಂದಿರುವ ಮೊದಲಿಯಾರ್ ಜನಾಂಗದವರು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪಡೆದುಕೊಳ್ಳುತ್ತಿದ್ದು, ಮೂಲ ಪರಿಶಿಷ್ಟ ಜಾತಿಗಳವರು ಸೌಲಭ್ಯದಿಂದ ವಂಚಿತರಾಗುತ್ತಿದ್ದು, ಇದರೊಂದಿಗೆ ಸುಳ್ಳು ದೂರುಗಳನ್ನು ಸಹಾ ನೀಡುತ್ತಿದ್ದು ಇದರಿಂದ ಸಾರ್ವಜನಿಕರಲ್ಲಿ ವೈಮನಸ್ಸು ಮೂಡಲು ಕಾರಣರಾಗುತ್ತಿರುವ ಬಗ್ಗೆ ಹೇಳಿದ್ದು, – ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಾಯ್ದೆ ಪ್ರಕರಣಗಳನ್ನು ತನಿಖೆ ಮಾಡುವ ಸಂಬಂಧ ಈಗಾಗಲೇ ಘನ ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಗಳನ್ನು ತೆರೆದಿದ್ದು, ಅದರಂತೆ ಶಿವಮೊಗ್ಗದಲ್ಲಿಯೂ ಸಹಾ ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಯು ಕಾರ್ಯ ನಿರ್ವಹಿಸುತ್ತಿದೆ. ತಾವುಗಳು ಸಂಬಂಧಪಟ್ಟ ಪೊಲೀಸ್ ಠಾಣೆ / ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಗೆ ನೇರವಾಗಿ ದೂರು ನೀಡಬಹುದು.

6) ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ವಿನಾಯಿತಿಯ ಬಗ್ಗೆ ಅವಕಾಶವಿದ್ದು, ಆದರೆ ಬ್ಯಾಂಕ್ ಗಳವರು ಸದರಿ ಸೇವೆಯನ್ನು ಕೆಲವರಿಗಷ್ಟೇ / ಪರಿಚಯ ವಿರುವ ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಅನುವು ಮಾಡಿಕೊಡುತ್ತಿದ್ದು, ಒಂದು ವೇಳೆ ನ್ಯಾಯ ಕೇಳಲು ಹೋದವರ ಮೇಲೆಯೇ ಗಲಾಟೆ ಮಾಡಲು ಬಂದಿದ್ದಾರೆಂದು ದೂರು ನೀಡುತ್ತಿದ್ದಾರೆಂದು ಕೇಳಿದ್ದು, – ನಿಮಗೆ ಏನಾದರರೂ ಸದರಿ ವಿಚಾರವಾಗಿ ದೂರುಗಳಿದ್ದಲ್ಲಿ, ನೀವು ನೇರವಾಗಿ ಬ್ಯಾಂಕ್ ನ ಬಳಿ ಹೋಗದೇ ಮಾನ್ಯ ಜಿಲ್ಲಾಧಿಕಾರಿಗಳವರಲ್ಲಿ ದೂರು ನೀಡಿದ್ದಲ್ಲಿ, ಅವರು ಈ ವಿಚಾರವಾಗಿ ಲೀಡ್ ಬ್ಯಾಂಕ್ ನವರ ಸಭೆ ಕರೆದು, ಪರಿಶೀಲನೆ ಮಾಡಿ, ಸಂಬಂಧಪಟ್ಟಂತಹ ಬ್ಯಾಂಕ್ ಗಳ ಮೇಲೆ ಕ್ರಮ ಕೈಗೊಂಡು ಪರಿಹಾರ ಮಾರ್ಗ ಸೂಚಿಸಲಿದ್ದಾರೆ.

7) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳವರಲ್ಲಿ ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ ಎಂದು ಗಮನಕ್ಕೆ ತಂದಿದ್ದು, – ಈ ಬಗ್ಗೆ ಮಿಷನ್ ಸುರಕ್ಷಾ ಕಾರ್ಯಕ್ರಮದ ಅಡಿ ಜಿಲ್ಲೆಯ ಎಲ್ಲಾ ಇಲಾಖೆಗಳು ಅಂದರೆ, ಗ್ರಾಮ ಪಂಚಾಯತಿ,. ಸ್ಥಳೀಯ ಸಂಸ್ಥೆಗಳು, ಸಂಘ ಸಂಸ್ಥೆಗಳು, ಆರ್ ಐ, ವಿ ಎ, ಅಂಗನವಾಡಿ ಕಾರ್ಯ ಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂಸಂಬಂಧಪಟ್ಟ ಇತರೆ ಇಲಾಖೆಗಳ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂಧಿಗಳನ್ನೊಂಡ ಸಭೆ ಕರೆದು, ಸದರಿ ಸಭೆಯಲ್ಲಿ ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣಗಳನ್ನು ಯಶಸ್ವಿಯಾಗಿ ತಡೆಗಟ್ಟುವ ಹಿನ್ನೆಲೆಯಲ್ಲಿ ಕೈಗೊಳ್ಳ ಬೇಕಾದ ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಂಡಿರುತ್ತೇವೆ. ಇನ್ನು ಕೆಲವೇ ದಿನಗಳಲ್ಲಿ ಇದರ ಧನಾತ್ಮಕ ಫಲಿತಾಂಶ ಕಂಡುಬರಲಿದೆ.

8) ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಿಗೆ ಬಂದು ಕೂಡುವ ರಸ್ತೆಗಳಲ್ಲಿ ಹೆಚ್ಚು ಅಫಘಾತ ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ಕೇಳಿದ್ದು, – ಈ ಬಗ್ಗೆ ಪೊಲೀಸ್ ಇಲಾಖೆಯು ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಸೂಚನಾ ಫಲಕಗಳು, ರಿಫ್ಲೆಕ್ಟರ್ ಗಳು, ಸ್ಟಿಕ್ಕರ್, ಬ್ಲಿಂಕ್ಲರ್ಸ್, ಕ್ಯಾಟ್ ಐಸ್ ಹಾಗೂ ಇತರೆ ಸುರಕ್ಷತಾ ಮಾಪನಗಳನ್ನು ಬಳಸಿ ರಸ್ತೆ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಂಡಿರುತ್ತದೆ.

9) ರಸ್ತೆಗಳಲ್ಲಿ ಬೆಳೆಗಳ ಒಣಗಲು ಹಾಕುತ್ತಿದ್ದು ಇದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತದೆ ಮತ್ತು ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಿದ್ದು, – ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಅಧಿಕಾರಿ ಹಾಗೂ ಸಿಬ್ಬಂಧಿಗಳು ಗಮನ ಹರಿಸುತ್ತಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಂಡಿರುತ್ತೇವೆ. ಒಂದು ವೇಳೆ ಯಾವುದೇ ಅಡೆ ತಡೆ ಕಂಡು ಬಂದರೆ ತೆರವು ಗೊಳಿಸಲಾಗುತ್ತದೆ. ಐಎಂವಿ ಕಾಯ್ದೆಯಡಿ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುತ್ತದೆ.

10) ಹೊಳೆಹೊನ್ನೂರಿನ ಕೈಮರ ವೃತ್ತದಲ್ಲಿ ವಾಹನ ದಟ್ಟಣೆಯಿಂದಾಗಿ ಅಫಘಾತಗಳಾಗುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಕೋರಿದ್ದು, ಈ ಬಗ್ಗೆ ಪೊಲೀಸ್ ನಿರೀಕ್ಷಕರು ಹೊಳೆಹೊನ್ನೂರು ಪೊಲೀಸ್ ಠಾಣೆ ರವರಿಗೆ, ಸ್ಥಳ ಪರಿಶೀಲನೆ ಮಾಡಿ, ಸದರಿ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ, ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆಗಳನ್ನು ನೀಡಿರುತ್ತೇವೆ, ಹಾಗೂ ಸಿಸಿ ಟಿವಿ ಕ್ಯಾಮೆರಾಗಳನ್ನು ಸಹಾ ಅಳವಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ರವರಿಗೆ ಸೂಚನೆಗಳನ್ನು ನೀಡಲಾಗುತ್ತದೆ.

11) ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಮೀನಿಗೆ ಓಡಾಡುವ ರಸ್ತೆ ವಿಚಾರವಾಗಿ ಮಾನ್ಯ ತಹಸಿಲ್ದಾರ್ ರವರು ಸ್ಥಳಕ್ಕೆ ಬಂದು ರಸ್ತೆ ಬಿಡಿಸಿಕೊಟ್ಟಿದ್ದು, ಈ ಬಗ್ಗೆ ದೂರು ಹಾಗೂ ಪ್ರತಿ ದೂರುಗಳು ದಾಖಲಾಗಿದ್ದು, ಪ್ರತಿ ದೂರು ನೀಡುವಾಗ ವಿಧ್ಯಾರ್ಥಿಗಳನ್ನು ಸೇರಿಸಿ ದೂರು ನೀಡಿರುತ್ತಾರೆಂದು ಅವರನ್ನು ಕೈ ಬಿಡಲು ಕೋರಿದ್ದು, – ತನಿಖಾಧಿಕಾರಿಯವರು ಪ್ರಕರಣದ ತನಿಖೆಯನ್ನು ನಿಸ್ಪಕ್ಷಪಾತವಾಗಿ ಕೈಗೊಂಡು, ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಲಾಗುತ್ತದೆ. ಒಂದು ವೇಳೆ ದೂರುದಾರರಿಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಅವಕಾಶವೂ ಸಹಾ ಇರುತ್ತದೆ ಎಂದು ತಿಳಿಸಿದರು.

12) ಸಾರ್ವಜನಿಕರು ದೂರನ್ನು ನೀಡಿದ ಮೇರೆಗೆ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಲಾಗುತ್ತದೆ. ತನಿಖಾಧಿಕಾರಿಗಳು ಪ್ರಕರಣದ ತನಿಖೆಯನ್ನು ಕೈಗೊಂಡು ತನಿಖೆಯಲ್ಲಿ ಕಂಡು ಬಂದ ಅಂಶದ ಮೇರೆಗೆ, ಘನ ಸರ್ವೋಚ್ಚ ನ್ಯಾಯಾಲಯದ ಮಾನದಂಡಗಳನ್ನು ಅನುಸರಿಸಿ ಆರೋಪಿಯ ಬಂಧನ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಬಂಧನದ ಪ್ರಕ್ರಿಯೆಯು ತನಿಖಾಧಿಕಾರಿಗಳ ವಿವೇಚನಾಧಿಕಾರವಾಗಿರುತ್ತದೆ. ಆದರೂ ಸಹಾ ಒಂದು ವೇಳೆ ತನಿಖೆಯಲ್ಲಿ ಲೋಪಗಳು ಕಂಡು ಬಂದಲ್ಲಿ ತನಿಖಾಧಿಕಾರಿಗಳ ಮೇಲೆಯೂ ಸಹ ಶಿಸ್ತಿನ ಕ್ರಮ ಜರುಗಿಸುವ ಅವಕಾಶ ಇರುತ್ತದೆ ಎಂದು ತಿಳಿಸಿದರು.

13) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳವರ ಮೇಲೆ ಗಡಿಪಾರು ಹಾಗೂ ಗೂಂಡಾ ಕಾಯ್ದೆ ಹಾಕುವುದು ಮತ್ತು ರೌಡಿ ಹಾಳೆ ತೆರೆಯುತ್ತೀದ್ದೀರೆಂದು ತಿಳಿಸಿದ್ದು, – ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ತರುವ ಹಾಗೂ ಸಾರ್ವಜನಿಕರಿಗೆ ಕಿರುಕುಳ ನೀಡುವ ಯಾವುದೇ ವ್ಯಕ್ತಿಯಾಗಲೀ ಆತನ ವಿರುದ್ಧ ನಿಸ್ಪಕ್ಷಪಾತವಾಗಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಾಗುತ್ತಿದೆಯೇ ಹೊರತು, ಯಾರೋ ಒಬ್ಬರ ಮೇಲೆ ಕೇಂದ್ರೀಕೃತವಾಗಿ ಕ್ರಮ ಕೈಗೊಳ್ಳುತ್ತಿರುವುದಿಲ್ಲ.

14) ಕೈಮರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳವರಿಗೆ ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿರುವ ಬಗ್ಗೆ ಕೇಳಿದ್ದು, – ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿವಾದವನ್ನು ಪರಿಹರಿಸಿ, ಶವ ಸಂಸ್ಕಾರಕ್ಕೆ ಅನುವು ಮಾಡಿಸಿಕೊಟ್ಟಿರುತ್ತಾರೆ.

15) ಮೈಕ್ರೋ ಫೈನಾನ್ಸ್ ಹಾಗೂ ಇತರೆ ಸಂಘ ಸಂಸ್ಥೆಗಳವರು ಸಾಲ ನೀಡಿದ ನಂತರ ಸಾಲ ವಸೂಲಾತಿ ಮಾಡುವಾಗ ತುಂಬಾ ಕೆಟ್ಟದಾಗಿ ನಡೆದುಕೊಳ್ಳುವುದರ ಜೊತೆಗೆ ಅಪರಾತ್ರಿ ಮತ್ತು ಕೆಲಸದ ಸ್ಥಳಕ್ಕೆ ಬಂದು ಮರ್ಯಾದೆ ತೆಗೆಯುತ್ತಿದ್ದು, ಇದರಿಂದ ಮನನೊಂದು ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಹೇಳಿದ್ದು, – ಈ ಬಗ್ಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಘನ ಸರ್ಕಾರದ ಆದೇಶದಂತೆ ಮೈಕ್ರೋ ಫೈನಾನ್ಸ್ ಹಾಗೂ ಇತರೆ ಸಂಘ ಸಂಸ್ಥೆಗಳವರು ಯಾವುದೇ ಕಿರುಕುಳ ನೀಡುತ್ತಿದ್ದಲ್ಲಿ, ನೇರವಾಗಿ ವ್ಯಾಪ್ತಿಯ ಪೊಲೀಸ್ ಠಾಣೆಗೆ ದೂರು ನೀಡಿ / 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿರುತ್ತದೆ. ಒಂದು ವೇಳೆ ಈ ರೀತಿಯ ದೂರುಗಳು ಬಂದಲ್ಲಿ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಮತ್ತು ಇದರ ಬಗ್ಗೆ ಸೂಕ್ತ ಅರಿವು ಕಾರ್ಯಕ್ರಮಗಳನ್ನು ಸಹಾ ಹಮ್ಮಿಕೊಳ್ಳುತ್ತೀದ್ದೇವೆ.

16) ಪೊಲೀಸ್ ಇಲಾಖೆಯು ಯಾವಾಗಲೂ ಶೋಷಿತರು ಮತ್ತು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಮತ್ತು ಅವರ ಸಹಾಯಕ್ಕಾಗಿ ಸದಾ ಸಿದ್ದವಿರುತ್ತದೆ. ಪೊಲೀಸ್ ಠಾಣಾ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯನ್ನು ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಕುಂದುಕೊರತೆಗಳನ್ನು ಆಲಿಸಿ, ಕಾನೂನಿನ ಚೌಕಟ್ಟಿನೊಳಗೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗೂ ನೀವುಗಳು ನ್ಯಾಯಕ್ಕಾಗಿ ಸಭೆಗಳಿಗೆ / ವೇದಿಕೆಗಾಗಿ ಕಾಯದೇ ನೇರವಾಗಿ ವ್ಯಾಪ್ತಿಯ ಪೊಲೀಸ್ ಠಾಣೆಗೆ ತೆರಳಿ ದೂರ ನೀಡಿ, ಪೊಲೀಸ್ ಇಲಾಖೆಯು ಸದಾ ನೊಂದವರ ಪರವಾಗಿ ನಿಲ್ಲಲಿದೆ ಹಾಗೂ ಸಮುದಾಯದತ್ತ ಪೊಲೀಸ್ ನ ಭಾಗವಾಗಿ ಈಗಾಗಲೇ ಜಿಲ್ಲೆಯಾದ್ಯಂತ ಮನೆ ಮನೆಗೆ ಪೊಲೀಸ್ ಸಕ್ರಿಯ ಸೇವೆಯನ್ನು ಆರಂಭಿಸಿದ್ದು, ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ / ಸಿಬ್ಬಂಧಿಗಳು ತಮ್ಮ ಮನೆಯ ಬಳಿ ಬಂದಾಗ ಕೂಡ ನೀವು ಅವರಿಗೆ ನಿಮ್ಮ ಅಹವಾಲು / ದೂರುಗಳನ್ನು ನೀಡಬಹುದಾಗಿರುತ್ತದೆ.

ಈ ಸಂದರ್ಭದಲ್ಲಿ ಶ್ರೀ ಕಾರಿಯಪ್ಪ ಎ ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ, *ಶ್ರೀ ಎಸ್ ರಮೇಶ್ ಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ ಮತ್ತು ಜಿಲ್ಲೆಯ ಎಲ್ಲಾ ಡಿ.ವೈ.ಎಸ್.ಪಿ, ಸಿಪಿಐ / ಪಿಐ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಖಂಡರುಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.