ಮುಂಬರುವ ಗೌರಿ ಮತ್ತು ಗಣೇಶ ಹಬ್ಬಗಳ ಹಿನ್ನೆಲೆಯಲ್ಲಿ, ಶ್ರೀ ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಗಣಪತಿ ಪ್ರತಿಷ್ಠಾಪನಾ ಸಮಿತಿ ಮತ್ತು ಅಲಂಕಾರ ಸಮಿತಿ ಸದಸ್ಯರ ಸಭೆಯನ್ನು ನಡೆಸಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.

1) ಪ್ರತಿ ವರ್ಷವೂ ಸಹಾ ಸ್ಥಳ ವಿಶೇಷತೆ ಇರುವ ಈ ಪುಣ್ಯ ಸ್ಥಳದಿಂದಲೇ ಗಣಪತಿ ಪ್ರತಿಷ್ಠಾಪನೆಗೆ ಸಂಬಂಧಪಟ್ಟಂತಹ ಸಭೆಗಳನ್ನು ನಡೆಸಲಾಗುತ್ತಿದ್ದು, ಅದೇ ರೀತಿ ಈ ಬಾರಿಯೂ ಸಹಾ ಪುಣ್ಯ ಕ್ಷೇತ್ರವಾದ ಈ ಸ್ಥಳದಿಂದಲೇ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಡೆಸಲಾಗುವ ಶಾಂತಿ ಸಭೆಯನ್ನು ಪ್ರಾರಂಭಿಸುತ್ತಿದ್ದೇವೆ.

2) ಪ್ರಮುಖವಾಗಿ ಸಾಕಷ್ಟು ಜನ ಸಾರ್ವಜನಿಕರು ಮುಖಂಡರುಗಳು ಇಲ್ಲಿ ನೆರೆದಿರುವುದು ಖುಷಿಯ ವಿಚಾರವಾಗಿರುತ್ತದೆ. ಇಲ್ಲಿ ಸೇರಿರುವವರಲ್ಲಿ ಹೆಚ್ಚಿನ ಜನರು ಈಗಾಗಲೇ ಪೊಲೀಸ್ ಇಲಾಖೆಯೊಂದಿಗೆ ನಿಖಟವಾದ ಸಂಪರ್ಕವನ್ನು ಹೊಂದಿರುತ್ತೀರಿ.

3) ಪ್ರತಿ ವರ್ಷದಂತೆ ಕಳೆದ ವರ್ಷವೂ ಸಹಾ ತುಂಬಾ ವಿಜೃಂಭಣೆಯಿಂದ ಹಬ್ಬವನ್ನು ಆಚರಣೆ ಮಾಡಿರುತ್ತೀವಿ. ಹಾಗೆಯೇ ವಿಸರ್ಜನಾ ಮೆರವಣಿಗೆಯೂ ಸಹಾ ತುಂಬಾ ಸುಸೂತ್ರವಾಗಿ ಯಾವುದೇ ಅಡೆ ತಡೆ ಇಲ್ಲದಂತೆ ನಿರ್ವಿಜ್ಞವಾಗಿ ನೆರೆವೇರಿರುತ್ತದೆ.

4) ಹಬ್ಬವನ್ನು ಶಾಂತ ರೀತಿಯಲ್ಲಿ ಯಾವುದೇ ಅಡೆ ತಡೆ ಇಲ್ಲದಂತೆ ನೆರವೇರಿಸುವ ನಿಟ್ಟಿನಲ್ಲಿ ಹಾಗೂ ಎಲ್ಲಾ ವರ್ಗದವರೂ ಸೇರಿ ಯಾವುದೇ ತೊಂದರೆ ಇಲ್ಲದಂತೆ ವಿಸರ್ಜನಾ ಮೆರವಣಿಗೆ ನಡೆಯಬೇಕು ಎಂಬ ಉದ್ದೇಶದಿಂದ ಮಾತ್ರ ಪೊಲೀಸ್ ಇಲಾಖೆಯಿಂದ ನೀಡುವ ಸಲಹೆ ಸೂಚನೆಗಳು ನೀಡಲಾಗುತ್ತದೆ.

5) ಹಬ್ಬವನ್ನು ಯಶಸ್ವಿಯಾಗಿ ನೆರವೇರಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರವನ್ನು ಪೊಲೀಸ್ ಇಲಾಖೆಯು ನೀಡಲಿದೆ. ಇದೊಂದು ಸಾರ್ವಜನಿಕ ಸಮಾರಂಬವಾಗಿದ್ದು, ಸಾರ್ವಜನಿಕರು ಮೆರವಣಿಗೆ / ಹಬ್ಬದ ಸಂದರ್ಭದಲ್ಲಿ ಲೈಟಿಂಗ್ಸ್ ನ ವ್ಯವಸ್ಥೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡಿಕೊಡಲು ಕೋರಿದ್ದು, ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿದ್ದು, ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.

6) ಮುಂಬರುವ ದಿನಗಳಲ್ಲಿ ಸಂಬಂಧಪಟ್ಟ ಇತರೆ ಇಲಾಖೆಗಳೊಂದಿಗೆ ಹಾಗೂ ಜಿಲ್ಲಾ ಮಟ್ಟದಲ್ಲಿ ಸಭೆಯನ್ನು ನಡೆಸಲಾಗುತ್ತದೆ, ಆ ವೇಳೆ ಹಬ್ಬದ ಆಚರಣೆಯನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ.

7) ಈ ಹಿಂದಿನ ವರ್ಷ ಜಿಲ್ಲೆಯಲ್ಲಿ ಒಟ್ಟು ಮೂರು ವರೆ ಸಾವಿರಕ್ಕೂ ಹೆಚ್ಚು ಗಣಪತಿಗಳ ಪ್ರತಿಷ್ಠಾಪನೆಯಾಗಿದ್ದು, ಈ ವರ್ಷವೂ ಸಹಾ ಮೂರು ಸಾವಿರದ ಆರು ನೂರು ಗಣಪತಿಗಳ ಪ್ರತಿಷ್ಠಾಪನೆಯಗುವ ನಿರೀಕ್ಷೆ ಇದೆ. ಗಣಪತಿ ಪ್ರತಿಷ್ಠಾಪನೆಯಿಂದ ಗಣಪ ವಿಸರ್ಜನೆಯಾಗುವ ವರೆಗೂ ಸಹಾ ಒಟ್ಟು ಒಂದು ವರೆ ತಿಂಗಳುಗಳ ಕಾಲ ಪೊಲೀಸ್ ಇಲಾಖೆಯು ಸಾರ್ವಜನಿಕರ ಹಿತ ರಕ್ಷಣೆಯ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ, ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿರುತ್ತದೆ. ಸಾರ್ವಜನಿಕರಿಗಾಗಿ ನಾವು ಯಾವುದೇ ಹಿಂಜರಿಕೆ ಇಲ್ಲದೇ ಕರ್ತವ್ಯ ನಿರ್ವಹಿಸಲು ಸದಾ ಕಾಲ ಸಜ್ಜಾಗಿರುತ್ತೇವೆ.

8) ನಮ್ಮ ಐದು ಬೆರಳುಗಳು ಹೇಗೆ ಒಂದೇ ಸಮನಾಗಿ ಇರುವುದಿಲ್ಲವೋ ಅದೇ ರೀತಿ ಸಮಾಜದಲ್ಲಿ ಎಲ್ಲಾ ರೀತಿಯ ಹಾಗೂ ವಿವಿಧ ಆಲೋಚನನೆಗಳಿರುವ ಜನರು ಇದ್ದು, ಎಲ್ಲರ ಯೋಚನೆಗಳು ಒಂದೇ ಆಗಿರುವುದಿಲ್ಲ, ಇಂತಹ ಸಂದರ್ಭದಲ್ಲಿ ಸಣ್ಣ ಪುಟ್ಟ ವೈಮನಸ್ಸು, ಬೇಜಾರುಗಳು ಸರ್ವೇ ಸಾಮಾನ್ಯ ಅದರೂ ಸಹಾ ಇವ್ಯಾವುದನ್ನೂ ಲೆಕ್ಕಿಸದೇ ನಾವು ಮುಂದೆ ಸಾಗ ಬೇಕು ಹಾಗೂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿ ಇತರರಿಗೆ ಮಾದರಿಯಾಗ ಬೇಕು.

9) ಯಾವುದೇ ಸಣ್ಣ ಪುಟ್ಟ ವ್ಯತ್ಯಾಸಗಳಾದಲ್ಲಿ ಪೊಲೀಸ್ ಇಲಾಖೆಯು ನಿಮ್ಮೊಂದಿಗೆ ನಿಲ್ಲಲಿದ್ದು, ಒಂದು ಕಡೆ ಸೇರಿ ಸಮಸ್ಯೆಗೆ ಸಮಾಧಾನವನ್ನು ಹುಡುಕೋಣ. ನಿಮ್ಮ ರಕ್ಷಣೆಗೆಂದೇ ಒಟ್ಟು 2500 ಕ್ಕೂ ಹೆಚ್ಚು ಜನ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಹಗಲಿರುಳು ಶ್ರಮಿಸುತ್ತೇವೆ. ಇದರೊಂದಿಗೆ 2500 ಯಿಂದ 3000 ದಷ್ಟು ಜನ ಹೊರ ಜಿಲ್ಲೆಯಿಂದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿತರಾಗಲಿದ್ದಾರೆ.

10) ಹಬ್ಬದ ಆಚರಣೆ, ಅಲಂಕಾರ ಹಾಗೂ ಇತರೆ ಯಾವುದೇ ವಿಚಾರಗಳ ಕುರಿತು ಯಾರೊಂದಿಗಾದರೂ ಸಮಸ್ಯೆಗಳು ಬಂದಾಗ ಕೂಡಲೇ ಪೊಲೀಸ್ ಇಲಾಖೆಯ ಗಮನಕ್ಕೆ ತನ್ನಿ, ನಾವೆಲ್ಲರೂ ಸೇರಿ ಕಾನೂನಿನ ಚೌಕಟ್ಟಿಗೆ ಒಳಪಟ್ಟು ಸಮಸ್ಯೆಯನ್ನು ಬಗೆಹರಿಸೋಣ.

11) ಹಬ್ಬ ಆಚರಣೆ ಮಾಡುವ ಮೂಲ ಉದ್ದೇಶವೇ ಸಮಾಜಕ್ಕೆ ಒಳ್ಳೆಯದಾಗಲೀ, ಮನಶಾಂತಿ ಸಿಗಲಿ ಎಂಬ ವಿಚಾರವೇ ಆಗಿರುತ್ತದೆ. ಆದ್ದರಿಂದ ಸಣ್ಣ ಪುಟ್ಟ ಸಮಸ್ಯೆಗಳನ್ನು ಬದಿಗಿಟ್ಟು, ಅದನ್ನು ಮನಸ್ಸಿನಲ್ಲಿಟ್ಟು ಕೊಳ್ಳದೇ ಹಬ್ಬವನ್ನು ಯಾವ ರೀತಿ ಯಶಸ್ವಿಯಾಗಿ ನಡೆಸಬೇಕೆಂಬ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಮುಂದೆ ಸಾಗೋಣ. ನಮ್ಮೆಲ್ಲರ ಗಮನ ಹಬ್ಬದ ಆಚರಣೆಯ ಮೇಲೆ ಮಾತ್ರ ಇರಲಿ. ಸಮಾಧಾನದಿಂದ ವರ್ತಿಸೋಣ.

12) ಹಬ್ಬಕ್ಕೆ ಬೇಕಾದ ಎಲ್ಲಾ ತಯಾರಿಯು ಈಗಾಗಲೇ ಪೊಲೀಸ್ ಇಲಾಖೆಯಿಂದ ಮಾಡಿಕೊಂಡಿರುತ್ತೇವೆ. ಇದೇ ನಿಟ್ಟಿನಲ್ಲಿ ಈ ವರ್ಷ ವಿಶೇಷವಾಗಿ ನಿಮ್ಮೆಲ್ಲರ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆಯು ಸುಮಾರು 1000 ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಂಡಿರುತ್ತೇನೆ. ಆದ್ದರಿಂದ ನೀವುಗಳು ಸಹಾ ಹೆಚ್ಚಿನ ಜನರು ಸೇರುವ ಸ್ಥಳಗಳಲ್ಲಿ, ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ. ಇದರಿಂದ ಹಬ್ಬದ ಆಚರಣೆ ಮತ್ತು ಪೂಜೆಗಳಲ್ಲಿ ಭಾಗವಹಿಸುವ ಸಾರ್ವಜನಿಕರ ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯು ಸಾಧ್ಯ.

13) ಜನ ಸಂದಣಿಯಂತಹ ಪ್ರದೇಶಗಳಲ್ಲಿ ಸ್ವತ್ತು ಕಳವು, ಸರ ಗಳ್ಳತನ, ಜೇಬು ಗಳ್ಳತನದಂತಹ ಪ್ರಕರಣಗಳು ವರದಿಯಾಗುವುದು ಸರ್ವೇ ಸಾಮಾನ್ಯ ಅದೇ ರೀತಿ ಹಬ್ಬದ ಆಚರಣೆಗೆ ಅಡ್ಡಿಯನ್ನುಂಟು ಮಾಡಲು ಫ್ಲೆಕ್ಸ್ ಗಳನ್ನು ಹರಿಯುವುದು ಹಾಗೂ ಯಾವುದೇ ಇನ್ನಿತರೆ ಅಹಿತಕರ ಘಟನೆಗಳು ಜರುಗುವ ಸಂಭವವಿರುತ್ತದೆ. ಇಂತಹ ಸಂದರ್ಭದಲ್ಲಿ ಸಿಸಿ ಟಿವಿ ಕ್ಯಾಮೆರಗಳು ತುಂಬಾ ಸಹಾಯಕ್ಕೆ ಬರಲಿವೆ. ಎಷ್ಟೋ ಬಾರಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸುರುವುದನ್ನು ನೋಡಿಯೇ ಯಾವುದೇ ಕಿಡಿಗೇಡಿತನ / ಕಳ್ಳತನ ಮಾಡಲು ಹಿಂಜರಿಯುತ್ತಾರೆ.

14) ಒಂದು ವೇಳೆ ಯಾವುದೇ ಘಟನೆಗಳು ಜರುಗಿದರೂ ಸಹಾ ಆರೋಪಿತರನ್ನು ಶೀಘ್ರವಾಗಿ ಪತ್ತೆ ಮಾಡಲು ಸಾಧ್ಯವಿರುತ್ತದೆ. ಈ ದೃಷ್ಠಿಯಿಂದ ನಾವುಗಳು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸುತ್ತೇವೆ. ಪೊಲೀಸ್ ಇಲಾಖೆಯಿಂದಲೂ ಸಹಾ ಈಗಾಗಲೇ ಸೋಲಾರ್ ಸಿಸಿ ಟಿವಿ ಕ್ಯಾಮೆರಾಗಳನ್ನು ಸಹಾ ಖರೀದಿ ಮಾಡಿ ಅಳವಡಿಸಲು ಕ್ರಮ ಕೈಗೊಂಡಿರುತ್ತೇವೆ. ಅದೇ ಈ ರೀತಿ ಸಾದ್ಯವಾದಷ್ಟೂ ಪ್ರಮುಖ ಸ್ಥಳಗಳಲ್ಲಿ ಮತ್ತು ರಸ್ತೆ ಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ.

15) ಹಬ್ಬಕ್ಕೆ ಅಡಚಣೆಯನ್ನುಂಟು ಮಾಡುವಂತಹ ಸಂಭವನೀಯ 80 ಜನ ಕಿಡಿಗೇಡಿ ವ್ಯಕ್ತಿಗಳನ್ನು ಗುರುತಿಸಿ ಪೊಲೀಸ್ ಇಲಾಖೆಯು ಈಗಾಗಲೇ ಅಂತಹವರನ್ನು ಗಡಿಪಾರು ಮಾಡಿ, ಹಲವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಂಡಿರುತ್ತೇವೆ. ಇನ್ನೂ ಕೆಲವರನ್ನು ಗುರುತಿಸಿದ್ದು ಅವರ ಮೇಲೂ ಸಹಾ ಕ್ರಮ ಕೈಗೊಳ್ಳುತ್ತೇವೆ.

16) ಯಾರೋ ಕೆಲವು ಜನ ಕಿಡಿಗೇಡಿ ಮಾಡುವ ಕೃತ್ಯದಿಂದ ಇಡೀ ಸಮಾಜಕ್ಕೆ ಹಾಗೂ ಹಬ್ಬದ ಆಚರಣೆಗೆ ಮತ್ತು ವೈಭವಕ್ಕೆ ತೊಂದರೆಯಾಗಲಿದೆ, ಆದ್ದರಿಂದ ಸಾರ್ವಜನಿಕರ ಹಿತ ರಕ್ಷಣೆಯ ದೃಷ್ಠಿಯಿಂದ ಗಡಿಪಾರು ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ.

17) ಹಳೆಯ ವರ್ಷದ ಗಣಪತಿ ವಿಸರ್ಜನೆಯ ವಿಡಿಯೋ ಗಳನ್ನು ಗಮನಿಸಿ, ಜನ ಸಮೂಹದಲ್ಲಿ ಕೆಟ್ಟದಾಗಿ ನಡೆದುಕೊಳ್ಳುವುದು, ಹೆಣ್ಣು ಮಕ್ಕಳಿಗೆ ಕಿರಿ ಕಿರಿ ಮಾಡುವುದು, ಅವರೊಂದಿಗೆ ಅಸಭ್ಯವಾಗಿ ವರ್ತಿಸುವುದು, ಕಿಡಿಗೇಡಿತನ ಮಾಡುವುದು, ಪ್ರಚೋದನಾಕಾರಿಯಾಗಿ ಘೋಷಣೆ ಕೂಗುವುದು, ತಳ್ಳಾಟ ಮಾಡುವುದು ಈ ರೀತಿಯ ಕೃತ್ಯ ಮಾಡುವವರನ್ನು ಗುರುತಿಸಿ, ಅವರುಗಳ ಪೋಷಕರನ್ನು ಪೊಲೀಸ್ ಠಾಣೆಗೆ ಕರೆಸಿ ಸೂಕ್ತ ಎಚ್ಚರಿಕೆ ನೀಡಲಾಗಿರುತ್ತದೆ.

18) ಇದೇ ರೀತಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರ ಸುರಕ್ಷತೆಯೇ ನಮ್ಮ ಗುರಿ, ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಿ ಗಣಪತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದೇ ಏಕ ಉದ್ದೇಶ ಆಗಿರುತ್ತದೆ.

19) ಪೊಲೀಸ್ ಇಲಾಖೆಯು ನೀಡುವ ಸೂಚನೆಗಳನ್ನು ಹಬ್ಬಕ್ಕೆ ಹಾಗೂ ಆಚರಣೆಗೆ ಅಡಚಣೆ ಎಂದು ತೀರ್ಮಾನಿಸಬೇಡಿ, ನಿಮಗೆ ಸಹಕಾರ ನೀಡಲು ನಾವು ಇರುತ್ತೇವೆ ಎಂದು ತಿಳಿಸುತ್ತೇವೆ. ಇದೇ ಸೂಚನೆಯನ್ನು ನಮ್ಮ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳಿಗೆ ನೀಡಲಾಗಿರುತ್ತದೆ.

ಈ ಸಂದರ್ಭದಲ್ಲಿ ಶ್ರೀ ಕಾರಿಯಪ್ಪ ಎ ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ, ಶ್ರೀ ಎಸ್ ರಮೇಶ್ ಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ, ಶ್ರೀ ಬಾಬು ಆಂಜನಪ್ಪ, ಡಿವೈಎಸ್.ಪಿ, ಶಿವಮೊಗ್ಗ ಎ ಉಪ ವಿಭಾಗ, ಶ್ರೀ ಹರೀಶ್ ಪಾಟೀಲ್ ಪಿಐ ಕೋಟೆ ಪೊಲೀಸ್ ಠಾಣೆ ಮತ್ತು ಗಣಪತಿ ಪ್ರತಿಷ್ಠಾಪನಾ ಸಮಿತಿ ಅಲಂಕಾರ ಸಮಿತಿಯ ಸದಸ್ಯರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.