ಮುಂಬರುವ ಈದ್ ಮಿಲಾದ್ ಹಾಗೂ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶ್ರೀ ಗುರುದತ್ ಹೆಗ್ಡೆ, ಐಎಎಸ್, ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ, ಶ್ರೀ ಮಿಥುನ್ ಕುಮಾರ್ ಜಿ,ಕೆ, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ, ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಶಾಂತಿ ಸಭೆಯನ್ನು ಆಯೋಜಿಸಲಾಗಿರುತ್ತದೆ.ಸದರಿ ಸಭೆಗೆ ಶ್ರೀ ಮಾಯಣ್ಣ ಗೌಡ, ಕಮಿಷನರ್ ನಗರಸಭೆ, ಶಿವಮೊಗ್ಗ, ಶ್ರೀ ರಾಜೀವ್ ತಹಶೀಲ್ದಾರ್, ಶಿವಮೊಗ್ಗ ಶ್ರೀಮತಿ ಸುಜಾತ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು, ಶ್ರೀ ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 1 ಶಿವಮೊಗ್ಗ ಶ್ರೀ ಎಸ್ ರಮೇಶ್ ಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2 ಶಿವಮೊಗ್ಗ ರವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳು ಸಭೆಯನ್ನುದ್ದೇಶಿಸಿ ಮಾತನಾಡಿ, ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.
- ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರೆಲ್ಲರೂ ಸೇರಿ ಸಾಮೂಹಿಕವಾಗಿ ಹಬ್ಬವನ್ನು ಆಚರಣೆ ಮಾಡುವಾಗ ಸಾಮಾನ್ಯವಾಗಿ ಮಕ್ಕಳು, ಹಿರಿಯರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲಾ ಹಂತದ ನಾಗರೀಕರು ಭಾಗವಹಿಸುತ್ತಾರೆ, ಇಂತಹ ಸಂದರ್ಭದಲ್ಲಿ ಯಾರಿಗೇ ಆಗಿರಲಿ ಸುರಕ್ಷತೆ ಎಂಬುದೇ ಮುಖ್ಯವಾಗಿರುತ್ತದೆ , ಆದ್ದರಿಂದ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವ ಮೂಲೋದ್ದೇಶದಿಂದ ಪೊಲೀಸ್ ಇಲಾಖೆಯು ಕಾರ್ಯ ನಿರ್ವಹಿಸುತ್ತಿದ್ದು, ರಕ್ಷಣೆಯೇ ಅವರ ಮೂಲ ಉದ್ದೇಶವಾಗಿರುತ್ತದೆ.
- ಹಬ್ಬದ ಆಚರಣೆಗೆ ಯಾವುದೇ ತೊಂದರೆ ಆಗಬಾರದೆಂಬ ಉದ್ದೇಶದಿಂದ ಪೊಲೀಸ್ ಇಲಾಖೆಯು ಎಲ್ಲಾ ಹಂತಗಳಲ್ಲಿ ವಿವಿಧ ಸಭೆಗಳನ್ನು ನಡೆಸಿ, ಕೈಗೊಳ್ಳಬೇಕಿರುವ ಕ್ರಮ, ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿರುತ್ತಾರೆ . ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ವೃಂದ ಹಾಗೂ ಹಂತದ ಅಧಿಕಾರಿ ಹಾಗೂ ಸಿಬ್ಬಂಧಿಗಳು ತಮ್ಮ ಕೆಲಸದ ಒತ್ತಡವನ್ನು ಬದಿಗಿಟ್ಟು ಕಾರ್ಯ ನಿರ್ವಹಿಸುತ್ತಾರೆ.
- ಪ್ರತೀ ವರ್ಷ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳು ಸಾರ್ವಜನಿಕರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದ್ದು, ಈ ವರ್ಷವೂ ಸಹಾ ಇದೇ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದು, ನಿಮ್ಮ ಸಹಕಾರವೂ ಸಹಾ ಪ್ರತೀ ವರ್ಷದಂತೆ ಈ ವರ್ಷವೂ ಇರಲಿ.
- ಹಬ್ಬದ ಆಚಣೆಯ ವೇಳೆ ಸಹಜವಾಗಿ ಸಂಬಂಧಪಟ್ಟ ಇಲಾಖೆಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲವು ಸೂಚನೆಗಳನ್ನು ನೀಡಲಿದ್ದು, ನಿಮ್ಮ ರಕ್ಷಣೆಯ ಉದ್ದೇಶದಿಂದ ಹಾಗೂ ಸಾರ್ವಜನಿಕರ ಹಿತಾಸಕ್ತಿಯಿಂದ ಈ ಸಲಹೆ ಸೂಚನೆಗಳನ್ನು ನೀಡುತ್ತೇವೆ .
- ಯಾವುದೇ ನಿರ್ಬಂಧನೆಗಳನ್ನು ವಿಧಿಸುವಾಗ ಏಕಾಏಕಿ ನಿರ್ಧಾರಕ್ಕೆ ಬರುವುದಿಲ್ಲ, ಬದಲಾಗಿ ಮಾರ್ಗಸೂಚಿಸಿಗಳಿಗೆ ಒಳಪಟ್ಟು ಬಹುಪಾಲು ಸಾರ್ವಜನಿಕರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಮೆರವಣಿಗೆ ಸಂದರ್ಭದಲ್ಲಿ ಡಿ.ಜೆ, ಪಟಾಕಿ, ಸೌಂಡ್ ಸಿಸ್ಟಂ ಬಳಕೆ, ಕಲರ್ ಬ್ಲಾಸ್ಟ್ ಗಳು ಹೀಗೆ ಕೆಲವು ನಿಬಂಧನೆಗಳನ್ನು ವಿಧಿಸಲಾಗುತ್ತದೆ.
- ಬ್ಯಾನರ್, ಪ್ಲೆಕ್ಸ್ ಗಳನ್ನು ಅಳವಡಿಕೆ ಮಾಡುವಾಗ ಎಲ್ಲರೂ ಕಾರ್ಪೊರೇಷನ್ ಹಾಗೂ ಪೊಲೀಸ್ ಇಲಾಖೆಯ ಅನುಮತಿ ಪಡೆದು ಅಳವಡಿಸಿ . ಫ್ಲೆಕ್ಸ್ ಅಳವಡಿಸುವಾಗ ನಗರದ ನೋಟಕ್ಕೆ ಯಾವುದೇ ಭಿನ್ನವಾಗದ ರೀತಿ ಅಳವಡಿಸಿರಿ. ಈ ನಿಟ್ಟಿನಲ್ಲಿ ಆದೇಶಗಳು ಬಂದಾಗ ಎಲ್ಲರೂ ಪಾಲನೆ ಮಾಡಿ.
- ಸಾಮಾಜಿಕ ಜಾಲತಾಣದ ಮೇಲೆ ಸಹಜವಾಗಿ ಎಲ್ಲರ ಗಮನ ಹೆಚ್ಚಿರುತ್ತದೆ. ಆದ್ದರಿಂದ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಎಚ್ಚರದಿಂದಿರಿ, ಯಾವುದೇ ವಿಷಯವನ್ನು ಏಕಾ ಏಕಿ ನಂಬಬೇಡಿ, ಸಾಮಾಜಿಕ ಜಾಲತಾಣದಲ್ಲಿ ಬರುವ ವಿಚಾರದ ಸತ್ಯಾಸತ್ಯತೆಯನ್ನು ಅರಿತು ನಂತರ ಪ್ರತಿಕ್ರಿಯಿಸಿ .
- ಕಾನೂನು ಕಾಪಾಡಲು ಪೊಲೀಸ್ ಇಲಾಖೆಯು ಸದಾ ಕಾಲ ಸನ್ನದ್ಧವಿದ್ದು, ನಿಮ್ಮ ಸಹಕಾರಕ್ಕೆ ನಿಲ್ಲಲಿದೆ. ಎಲ್ಲರೂ ಉತ್ತಮವಾಗಿ ಹಬ್ಬ ಆಚರಿಸಿ .
ಪೊಲೀಸ್ ಅಧೀಕ್ಷಕರು ಸಭೆಯನ್ನುದ್ದೇಶಿಸಿ ಮಾತನಾಡಿ, ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.
- ಹಬ್ಬದ ಆಚರಣೆಗಳನ್ನು ಯಶಸ್ವಿಯಾಗಿ ಹಾಗೂ ಯಾವುದೇ ತೊಂದರೆ ಬಾರದಂತೆ ನಡೆಸಲು ಪೊಲೀಸ್ ಇಲಾಖೆಯವರು ಕೇಳಿದ ಸಹಕಾರವನ್ನು ಜಿಲ್ಲಾಡಳಿತವು ಈವರೆಗೆ ನೀಡುತ್ತಾ ಬಂದಿದ್ದು , ಅವರಿಗೆ ನಮ್ಮ ಅಭಿನಂದನೆಗಳು. ಮುಂದೆಯೂ ಕೂಡ ಹೀಗೆಯೆ ತಮ್ಮ ನೆರವನ್ನು ನಿರೀಕ್ಷೆ ಮಾಡುತ್ತೇವೆ.
- ಮೆರೆವಣಿಗೆ ಸಂದರ್ಭದಲ್ಲಿ ಬೇಕಂತಲೇ ಕಿಡಿಗೇಡಿತನ ತೋರುವವರು ಆಕ್ರಮಣಕಾರಿಯಾಗಿ ನೃತ್ಯ ಮಾಡುತ್ತಾ, ಮಹಿಳೆ ಹಾಗೂ ಮಕ್ಕಳ್ಳೊಂದಿಗೆ ಅಸಭ್ಯ ರೀತಯಲ್ಲಿ ವರ್ತನೆ ಮಾಡುತ್ತಾರೆ , ಅಂತಹವರ ವಿರುದ್ಧ ನಮ್ಮ ಇಲಾಖೆಯು ಸೂಕ್ತ ನಿಗಾವಹಿಸಿದ್ದು, ಇಲಾಖೆಯಿಂದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ .
- ಕಳೆದ ವರ್ಷದ ಮೆರೆವಣಿಗೆ ಸಮಯದಲ್ಲಿ ಕಿಡಿಗೇಡಿತನ ತೋರಿದ ಹಾಗೂ ಆಕ್ರಮಣಕಾರಿಯಾಗಿ ವರ್ತನೆ ತೋರುವವರ ವಿಡಿಯೋವನ್ನು ಪರಿಶೀಲನೆ ಮಾಡಿ, ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪ್ರಮುಖವಾಗಿ ನಗರದಲ್ಲಿ ಇರುವ ಪೊಲೀಸ್ ಠಾಣೆಗಳಲ್ಲಿ ಸಾವಿರಾರು ಕೆಟ್ಟ ವರ್ತನೆ ಹೊಂದಿರುವ ವ್ಯಕಿಗಳನ್ನು ಗುರುತಿಸಿ ಠಾಣೆಗಳಿಗೆ ಕರೆಸಿ ಅಂತಹ ವ್ಯಕ್ತಿಗಳಿಗೆ ಸೂಕ್ತ ಸಲಹೆ ಹಾಗೂ ಎಚ್ಚರಿಕೆಯನ್ನು ನೀಡಿರುತ್ತೇವೆ .
- ಕೆಲವು ಜನ ಯುವಕರು ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳು ಸಹಾ ದುರ್ವರ್ತನೆ ತೋರಿರುವುದನ್ನು ವಿಡಿಯೋ ಅನಾಲಿಸಿಸ್ ಮೂಲಕ ಗುರುತಿಸಲಾಗಿದ್ದು ಅಂತಹ ವಿದ್ಯಾರ್ಥಿಗಳ ಪೋಷಕರನ್ನು ಠಾಣೆಗಳಿಗೆ ಕರೆಸಿ ಸೂಕ್ತ ಎಚ್ಚರಿಕೆಯನ್ನು ನೀಡಲಾಗಿರುತ್ತದೆ .
- ಬೇರೆ ಜಿಲ್ಲೆಗಳಿಂದ ಮೆರವಣಿಗೆಗೆ ಬಂದು ಭಾಗವಹಿಸಿ, ದುರ್ವರ್ತನೆ ತೋರುವ ಬಗ್ಗೆ ಮಾಹಿತಿ ಇದ್ದು ಅಂತಹ ವ್ಯಕ್ತಿಗಳ ನಿಗಾವಣೆಗೆ ಪಕ್ಕದ ಜಿಲ್ಲೆಯ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದು, ಈ ಬಾರಿ ಜಿಲ್ಲೆಯ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗುವುದು .
- ಗಣೇಶ ಹಬ್ಬ ಹಾಗೂ ಈದ್- ಮಿಲಾದ್ ಹಬ್ಬಗಳು 3ನೇ ಬಾರಿಗೆ ಒಟ್ಟಿಗೆ ಬಂದಿದ್ದು 2 ಬಾರಿ ಯಶಸ್ವಿಯಾಗಿ ನಿರ್ವಹಣೆ ಮಾಡಲಾಗಿರುತ್ತದೆ. ಇದಕ್ಕೆ ನಿಮ್ಮ ಸಹಕಾರವಿದ್ದು ಈ ಬಾರಿಯೂ ಯಶಸ್ವಿಯಾಗಲು ನಿಮ್ಮ ಸಹಕಾರದ ಅವಶ್ಯಕತೆ ಇರುತ್ತದೆ.
- ಕೆಲವೊಂದು ಸೂಕ್ಷ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಕೆಲವು ನಿರ್ಬಂಧಗಳನ್ನು ಹೇರುವ ಸಂದರ್ಭ ಬಂದಾಗ ಅದನ್ನು ನಿರ್ಬಂಧ ಎಂದು ಭಾವಿಸದೇ ಸೌಹಾರ್ದತೆಗೋಸ್ಕರ ಸಲಹೆ , ಸೂಚನೆಗಳನ್ನು ನೀಡುತ್ತಿದ್ದಾರೆ ಎಂದು ಭಾವಿಸಬೇಕಾಗುತ್ತದೆ .
- ಮೆರೆವಣಿಗೆ ಸಂದರ್ಭದಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸುವಾಗ ವಿದ್ಯಾರ್ಥಿಗಳ ಶಿಕ್ಷಣವನ್ನು ಪರಿಗಣಿಸಿ ಅವರಿಗೆ ಅನುಕೂಲವಾಗುವಂತೆ ಅಳವಡಿಸಲು ಪ್ರಯತ್ನಿಸುತ್ತೇವೆ. ವಿದ್ಯಾರ್ಥಿಗಳ ಶಿಕ್ಷಣಕ್ಕಿಂತ ಮೆರವಣಿಗಳು, ರ‍್ಯಾಲಿ ಮುಖ್ಯ ಅನ್ನಿಸುವುದಿಲ್ಲ ಅವರ ಜೀವನ ರೂಪಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿರುತ್ತದೆ.
- ಹೆಚ್ಚು ಜನ ಸೇರಿ ಮೆರವಣಿಗೆ ಮಾಡುವಾಗ ಸಾಮಾನ್ಯವಾಗಿ ಸಮಸ್ಯೆಗಳು ಕಂಡು ಬರಲಿವೆ, ಆದ್ದರಿಂದ ಯಾವುದೇ ಸಮಸ್ಯೆಗಳಿದ್ದರೂ ಸಹಾ ಬಗೆಹರಿಸಿಕೊಂಡು ಮುಂದೆ ಸಾಗೋಣ , ಪೊಲೀಸ್ ಇಲಾಖೆಯು ನಿಮ್ಮ ಜೊತೆಗೆ ನಿಲ್ಲಲಿದೆ, ಯಾವುದೇ ಸಮಸ್ಯೆಯನ್ನು ಪೊಲೀಸ್ ಇಲಾಖೆ / ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಾಗ ಕೂಡಲೇ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು, ತಕ್ಷಣದಲ್ಲಿ ಬಗೆಹರಿಸಲಾಗುತ್ತದೆ .
- ಯಾವುದೇ ಭಿನ್ನಾಭಿಪ್ರಾಯವಿದ್ದಾಗ ನಿಮ್ಮ ನಿಮ್ಮಲ್ಲೆ ಜಗಳ, ವೈಮನಸ್ಸು ಬಂದೇ ಬರುತ್ತದೆ, ಆದ್ದರಿಂದ ಇವೆಲ್ಲವನ್ನೂ ಬದಿಗಿಟ್ಟು ಮುಂದೆ ಸಾಗೋಣ. ಸಾಮೂಹಿಕವಾಗಿ ನಡೆಯುವ ಹಬ್ಬವನ್ನು ಯಶಸ್ವಿಯಾಗಿಸೋಣ.
- ನೀವುಗಳು ಸಮಾಜದಲ್ಲಿ ಮುಖಂಡರು / ಮುಂದಾಳತ್ವವನ್ನು ವಹಿಸಿರುವವರಾಗಿರುತ್ತೀರಿ, ಒಂದು ವೇಳೆ ನೀವುಗಳು ಯಾವುದೇ ಸಮಸ್ಯೆಗಳು ಬಂದಾಗ ಅದನ್ನು ದೊಡ್ದದು ಮಾಡದೇ ಬಗೆಹರಿಸುವ ಸಾಮರ್ಥ್ಯವನ್ನು ಹೊಂದಿರುತ್ತೀರಿ. ಆದ್ದರಿಂದ ನಿಮ್ಮನ್ನು ಗುರುತಿಸಿ ಈ ಸಭೆ ನಡೆಸಲಾಗಿರುತ್ತದೆ.
- ಈಗಾಗಲೇ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಠಾಣಾ ಬೀಟ್ ಮಟ್ಟ, ಪೊಲೀಸ್ ಠಾಣಾ ಮಟ್ಟ, ವೃತ್ತ ಕಛೇರಿ ಹಾಗೂ ಉಪ ವಿಭಾಗ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿಯೂ ಕೂಡ ಸಭೆ ನಡೆಸಲಾಗಿರುತ್ತದೆ. ಇವೆಲ್ಲದರ ಮೂಲ ಉದ್ದೇಶವೇನೆಂದರೆ ಹಬ್ಬವನ್ನು ಶಾಂತಿಯಿಂದ ಆಚರಿಸುವುದೇ ಆಗಿರುತ್ತದೆ.
ಎಲ್ಲರಿಗೂ ಶುಭವಾಗಲಿ, ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ.ಸದರಿ ಸಭೆಯಲ್ಲಿ ಶಿವಮೊಗ್ಗ ನಗರದ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.