ಕೃಷಿ ಇಲಾಖೆ ಶಿವಮೊಗ್ಗ ಹಾಗೂ ಇ-ಆಡಳಿತ ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ
21ರಂದು ತಾಲ್ಲೂಕಿನ ಸುಮಾರು 8 ಸಾವಿರ ರೈತರೊಂದಿಗೆ ದೂರವಾಣಿ ಕರೆ ಮುಖಾಂತರ 2025-26ನೇ ಸಾಲಿನ ಬೆಳೆ ಸಮೀಕ್ಷೆ ಯೋಜನೆ ಅನುಷ್ಠಾನ ಹಾಗೂ ಸೂಕ್ಷö್ಮ ನೀರಾವರಿ ಯೋಜನೆಯಡಿ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಕಾರ್ಯಗಾರವನ್ನು ನಡೆಸಲಾಯಿತು.


ಶಿವಮೊಗ್ಗ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಾದ ರಮೇಶ್.ಎಸ್.ಟಿ ರವರು ಮಾತನಾಡಿ, ಬೆಳೆ ಸಮೀಕ್ಷೆ ಯೋಜನೆ ಅನುಷ್ಠಾನ ಕುರಿತು ರೈತರ ಬೆಳೆ ಸಮೀಕ್ಷೆ 2025-26ಕ್ಕೆ ಸರ್ಕಾರವು ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಬೆಳೆ ಸಮೀಕ್ಷೆ ತಂತ್ರಾAಶದ ಮೂಲಕ ತಾವೇ ನೇರವಾಗಿ ಬೆಳೆ ಸಮೀಕ್ಷೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ರೈತರು ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ರೈತರ ಬೆಳೆ ಸಮೀಕ್ಷೆ ಆಪ್ ( Farmer crop survey App)ನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಂಡು ಅಪ್ಲೋಡ್ ಮಾಡಬಹುದು.


ರೈತರಿಗೆ ಅಪ್ಲೋಡ್ ಮಾಡಲು ಸಾಧ್ಯವಾಗದಿದ್ದಲ್ಲಿ ತಾಲ್ಲೂಕು ಆಡಳಿತ ನೇಮಿಸಿರುವ ಮೊಬೈಲ್ ತಂತ್ರಾAಶ ಜ್ಞಾನವುಳ್ಳ ಸ್ಥಳೀಯ ಖಾಸಗಿ ನಿವಾಸಿಗಳ ಸಹಾಯದಿಂದ ಬೆಳೆ ವಿವರ ದಾಖಲಿಸಬಹುದು. ಇದರಿಂದ ಪ್ರಕೃತಿ ವಿಕೋಪದಡಿ ಪ್ರವಾಹ ಮತ್ತು ಬರಗಾಲ ಸಂದರ್ಭದಲ್ಲಿ ನೀಡುವ ಬೆಳೆ ನಷ್ಟ ಪರಿಹಾರ ವಿತರಿಸಲು, ಕನಿಷ್ಟ ಬೆಂಬಲ ಬೆಲೆ ಯೋಜನೆ ಫಲಾನುಭವಿಗಳನ್ನು ಗುರುತಿಸಲು, ಬೆಳೆ ವಿಮಾ ಯೋಜನೆ, ಬೆಳೆ ವಿಸ್ತೀರ್ಣ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು, ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಅನುಕೂಲವಾಗುವುದು ಎಂದು ತಿಳಿಸಿದರು.


ಸೂಕ್ಷö್ಮ ನೀರಾವರಿ ಯೋಜನೆಯಡಿ ನೀರಾವರಿ ಉಪಕರಣಗಳಾದ ಜೆಟ್ ಪೈಪ್‌ಗಳು/ ಕಪ್ಪು ಪೈಪ್‌ಗಳನ್ನು ಎಲ್ಲಾ ವರ್ಗದ ರೈತರಿಗೆ ಶೇ.90 ಸಹಾಯಧನದಲ್ಲಿ ವಿತರಿಸಲಾಗುವುದು ಹಾಗೂ ಈಗಾಗಲೇ ಸೌಲಭ್ಯ ಪಡೆದ ಫಲಾನುಭವಿಗಳು ಏಳು ವರ್ಷ ಮುಗಿದಿದ್ದರೆ ಮತ್ತೊಮ್ಮೆ ಪಡೆಯಲು ಹಾಗೂ 2.20 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರುವ ರೈತರು ಮತ್ತೊಂದು ಘಟಕ ಪಡೆಯಲು ಅವಕಾಶ ಕಲ್ಪಿಸಿದ್ದು, ರೈತರು ಕೇವಲ ಶೇಕಡ 10 ರಷ್ಟು ರೈತರ ವಂತಿಕೆಯನ್ನು ಪಾವತಿ ಮಾಡಿ ಸೌಲಭ್ಯ ಪಡೆಯಬಹುದು. ಈ ಯೋಜನೆಯಲ್ಲಿ ಪ್ರಸ್ತುತ ಅನುದಾನ ಲಭ್ಯವಿದ್ದು ಎಲ್ಲಾ ರೈತಭಾಂದವರು ತಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ಮಾಡಿ ಆಧಾರ್, ಪಹಣಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಲು ಮನವಿ ಮಾಡಿದರು.