ರಾಜ್ಯದ ಆಯುರ್ವೇದಿಕ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡ ಪರಿಣಾಮ, ಕೇಂದ್ರ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (CCIM) ನಿಯಮಾವಳಿ ಪ್ರಕಾರ ಶಿವಮೊಗ್ಗ ಸರ್ಕಾರಿ ಆಯುರ್ವೇದಿಕ್ ಕಾಲೇಜಿನಲ್ಲಿ ಪ್ರವೇಶ ಸೀಟುಗಳನ್ನು 60ರಿಂದ ಕೇವಲ 31ಕ್ಕೆ ಇಳಿಸಲಾಗಿತ್ತು. ಈ ತೀರ್ಮಾನವು ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ತಂದು, ಆಯುರ್ವೇದ ಶಿಕ್ಷಣದ ಗುಣಮಟ್ಟದ ಮೇಲೂ ಗಂಭೀರ ಪರಿಣಾಮ ಬೀರಿತ್ತು.
ಈ ಮಹತ್ವದ ವಿಚಾರವನ್ನು ನಿರ್ಲಕ್ಷಿಸದೆ ಮಾನ್ಯ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಗಳಾದ ಡಿ.ಎಸ್.ಅರುಣ್ ರವರು ನಿರಂತರವಾಗಿ ಧ್ವನಿಸೇಳಿದರು. ವಿದ್ಯಾರ್ಥಿ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಕಳೆದ ಹಲವು ಅಧಿವೇಶನಗಳಲ್ಲಿ ಅವರು ಸರ್ಕಾರವನ್ನು ಪ್ರಶ್ನಿಸಿ, ಸೀಟು ಕಡಿತ ಅನ್ಯಾಯಕರ ಎಂದು ಗಟ್ಟಿಯಾಗಿ ಪ್ರಸ್ತಾಪಿಸಿದರು. ಸಿಬ್ಬಂದಿ ಕೊರತೆಯ ಹೊಣೆ ವಿದ್ಯಾರ್ಥಿಗಳ ಮೇಲೆ ಹೇಗೆ ಹಾಕಬಹುದು? ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುವುದು ನ್ಯಾಯವಲ್ಲ ಎಂದು ಅರುಣ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರನ್ನು ಪ್ರಶ್ನಿಸುತ್ತಾ ಬಂದರು
ಮಾನ್ಯ ಡಿ.ಎಸ್.ಅರುಣ್ ರವರ ನಿರಂತರ ಒತ್ತಾಯಗಳ ಫಲವಾಗಿ, ಸರ್ಕಾರವು ಹಳೆಯ ತೀರ್ಮಾನವನ್ನು ಹಿಂತೆಗೆದು, ಶಿವಮೊಗ್ಗ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ UG ಪ್ರೋಗ್ರಾಂ ಪ್ರವೇಶ ಸೀಟುಗಳನ್ನು 31ರಿಂದ ಮತ್ತೆ 60ಕ್ಕೆ ಮರುಸ್ಥಾಪಿಸಿದೆ. ಈ ಮಹತ್ವದ ನಿರ್ಧಾರವು ನೂರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಿದಂತಾಗಿದೆ.
ಇದರಿಂದ ರಾಜ್ಯದಾದ್ಯಂತ ಆಯುರ್ವೇದ UG ಶಿಕ್ಷಣದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿದ್ದು, ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಆಯುರ್ವೇದ ಶಿಕ್ಷಣದ ಗುಣಮಟ್ಟವು ಮತ್ತಷ್ಟು ಬಲಪಡಲಿದೆ.