ಶಿವಮೊಗ್ಗ: ಆಧುನಿಕ ಭಾರತ ನಿರ್ಮಾಣ ಆಗುವಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕೊಡುಗೆ ಮಹತ್ತರವಾಗಿದೆ. ಅವರ ಆಡಳಿತ ಅವಧಿಯಲ್ಲಿ ಕೈಗೊಂಡ ಯೋಜನೆಗಳು ದೂರದೃಷ್ಠಿಯಿಂದ ಕೂಡಿದ್ದವು ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 77ನೇ ಜನ್ಮ ದಿನದ ಪ್ರಯುಕ್ತ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಘಟಕದ ವತಿಯಿಂದ ಗುರುವಾರ ಆಯೋಜಿಸಿದ್ದ “ರನ್ ಫಾರ್ ರಾಜೀವ್” 5ಕೆ ರನ್ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಐಟಿ ಉದ್ಯಮ, ದೂರ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡುವ ಜತೆಯಲ್ಲಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದರು. ರೈತರು, ಬಡವರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರಿಗೂ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದರು ಎಂದು ತಿಳಿಸಿದರು. ದೇಶದಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆ ಬಲಗೊಳಿಸುವಲ್ಲಿ ರಾಜೀವ್ ಗಾಂಧಿ ಪ್ರಧಾನಿ ಆಗಿದ್ದ ಅವಧಿಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು ಕಾರಣವಾಗಿವೆ. 18 ವರ್ಷ ಮೇಲ್ಪಟ್ಟ ಯುವ ಸಮೂಹಕ್ಕೆ ಮತದಾನದ ಹಕ್ಕು ಸಿಗುವಂತೆ ಮಾಡಿದರು. ವಿಶೇಷವಾಗಿ ಯುವಜನತೆಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದರು. ಅವರು ನೀಡಿದ ಕೊಡುಗೆಗಳು ಇಂದಿಗೂ ಮಾದರಿ ಎಂದರು. ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ ಬಗ್ಗೆ ಯುವಸಮೂಹ ಅರಿತುಕೊಳ್ಳಲು ಮುಂದಾಗಬೇಕು. ಭಾರತದ ಐಟಿ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿಕಾರಕ ಬದಲಾವಣೆಗಳಿಂದ ದೇಶವು ವಿಶ್ವಮಟ್ಟದಲ್ಲಿ ಬಲಿಷ್ಠಗೊಳ್ಳತೊಡಗಿತು ಎಂದು ಹೇಳಿದರು. ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಘಟಕದ ವತಿಯಿಂದ ರಾಜೀವ್ ಗಾಂಧಿ ಜನ್ಮ ದಿನದ ಪ್ರಯುಕ್ತ ರನ್ ಫಾರ್ ರಾಜೀವ್ ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ಅಭಿನಂದನೀಯ ಕಾರ್ಯ. ಇದರಿಂದ ಯುವಜನರಲ್ಲಿ ರಾಜೀವ್ ಗಾಂಧಿ ಅವರ ಆದರ್ಶ ಹಾಗೂ ಆಲೋಚನೆಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. ಶಿವಮೊಗ್ಗ ಯುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದು ಆಶಿಸಿದರು. ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ, ಭದ್ರಾವತಿಯ ಯುವ ಮುಖಂಡ ಗಣೇಶ್, ಎಚ್.ಸಿ.ಯೋಗೇಶ್, ರಮೇಶ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತು, ಕಾಶಿ ವಿಶ್ವನಾಥ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ,ರಾಜ್ಯ ಕಾರ್ಯದರ್ಶಿ ಕೆ.ಚೇತನ್, ಯುವ ಕಾಂಗ್ರೆಸ್ ಮುಖಂಡ ಮಧುಸೂದನ್, ಮಹಮದ್ ನಿಹಾಲ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಬಾಲಾಜಿ, ವಿಜಯ್‌ಕುಮಾರ್, ಶ್ರೀನಿವಾಸ್ ಕರಿಯಣ್ಣ, ಆರಿಫುಲ್ಲಾ , ರವಿಕುಮಾರ್, ಹನುಮಂತು, ವಿಜಯ್, ವಿನಯ್, ಮಂಜುನಾಥ್ ಮತ್ತಿತರರು ಇದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 77ನೇ ಜನ್ಮ ದಿನದ ಪ್ರಯುಕ್ತ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಘಟಕದ ವತಿಯಿಂದ ಗುರುವಾರ ಆಯೋಜಿಸಿದ್ದ “ರನ್ ಫಾರ್ ರಾಜೀವ್” 5ಕೆ ರನ್ ಮ್ಯಾರಥಾನ್ ಬೆಂಗಳೂರಿನ ಪ್ರವೀಣ ಪ್ರಥಮ ಸ್ಥಾನ ಗಳಿಸಿ 25 ಸಾವಿರ ರೂ. ಬಹುಮಾನ ಪಡೆದರು. ಹುಬ್ಬಳ್ಳಿಯ ಸುನೀಲ್ ಎಂ.ಡಿ. ದ್ವೀತಿಯ ಸ್ಥಾನ ಪಡೆದು 15 ಸಾವಿರ ರೂ. ಹಾಗೂ ಹುಬ್ಬಳ್ಳಿಯ ನಾಗರಾಜ್ ತೃತೀಯ ಸ್ಥಾನ ಪಡೆದು 10 ಸಾವಿರ ರೂ. ಬಹುಮಾನ ಪಡೆದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153