ಶಿವಮೊಗ್ಗ ನಗರದಲ್ಲಿ ಮೂರು ಕಡೆ ನಿರ್ಮಿಸಿರುವ ರಸ್ತೆ ಹಂಪ್ಸ್ ಗಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಾಹನ ಚಲಾವಣೆಗೆ ಯಾವುದೇ ತೊಂದರೆಯಾಗುವುದಿಲ್ಲ ಹಾಗೂ ವೇಗ ಮಿತಿ ಹಿಡಿತದಲ್ಲಿರುತ್ತದೆ ಮತ್ತು ಅಪಘಾತಗಳ ಸಂಖ್ಯೆ ಇದರಿಂದ ಕ್ಷೀಣಿಸುತ್ತದೆ ಎಂದು ಪ್ರಶಂಸಿಸಿದ್ದಾರೆ.


ಶಿವಮೊಗ್ಗ ನಗರದ ಗಾರ್ಡನ್ ಏರಿಯಾಗೆ ಹೊಂದಿಕೊಂಡಂತಹ ಎಲ್ಎಲ್ಆರ್ ರಸ್ತೆಯ ಕ್ರಾಸ್ ಹಾಗೂ ಶುಭಂ ಹೋಟೆಲ್ ಬಳಿಯ ಕ್ರಾಸ್ ಮತ್ತು ಶರಾವತಿ ನಗರ ರಸ್ತೆಯ ಸೈಕಲ್ ಲೋಕ ಮಗ್ಗುಲ ಕ್ರಾಸ್ ನಲ್ಲಿ ಈ ಹಂಪ್ಸ್ ಗಳನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಹಾಕಿಸಿದ್ದು, ಇದರಿಂದ ವಾಹನದ ಸವಾರರು ವೇಗಮಿತಿ ನೋಡಿಕೊಳ್ಳುವುದಲ್ಲದೆ ಪರಸ್ಪರ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ.


ಈ ಬಗ್ಗೆ ಸಂಚಾರಿ ಪೊಲೀಸ್ ಅಧಿಕಾರಿ ತಿರುಮಲ್ಲೇಶ್ ಮಾತನಾಡಿಸಿದಾಗ ಈ ಹಂಪ್ಸ್ ಗಳು ವೈಜ್ಞಾನಿಕವಾಗಿ ನಿರ್ಮಾಣಗೊಂಡಿವೆ. ಅಗಲವಾದ ಹಂಪ್ಸ್ ಗಳಾಗಿರುವುದರಿಂದ ವಾಹನಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ವೇಗಮಿತಿ ನಿರ್ಧರಿತವಾಗುತ್ತದೆ ಹಾಗೂ ಪರಸ್ಪರ ಎದುರಿಗೆ ಬರುವ ವಾಹನಗಳು ಕಾಣುತ್ತವೆ ಎಂದು ಹೇಳಿದ್ದಾರೆ.
ಈ ಬಗೆಗಿನ ಹಂಪ್ಸ್ ಗಳಿಂದ ನಿಜವಾಗಿಯೂ ಸವಾರರಿಗೆ ತಮ್ಮ ವಾಹನದ ವೇಗಮಿತಿ ಅರ್ಥವಾಗುತ್ತದೆ. ಹಾಗೂ ಎದುರಿಗೆ ಬರುವ ಮತ್ತು ಪಕ್ಕದಲ್ಲಿ ಬರುವ ವಾಹನಗಳು ಕಾಣುತ್ತವೆ.

ಇದರಿಂದ ಅಪಘಾತಗಳ ಸಂಖ್ಯೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಎಂದು ಶಿವಮೊಗ್ಗ ಎಲ್ ಎಲ್ ಆರ್ ರಸ್ತೆಯ ಉದ್ಯಮಿ ಉದಯಕುಮಾರ್, ವಿನೋಬನಗರದ ಆರ್. ಅಭಿನಂದನ್ ತಿಳಿಸಿದ್ದಾರೆ. ಸಾರ್ವಜನಿಕರ ಹಾಗೂ ಸವಾರರ ಪ್ರಶಂಸೆಗೆ ಪಾತ್ರವಾದ ಇಂತಹ ಅಂಶಗಳನ್ನು ಅತಿ ಮುಖ್ಯವಾಗಿ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಹೋಗುವ ಸ್ಥಳದಲ್ಲಿ ಹಾಗೂ ಅಲ್ಲಿನ ಕ್ರಾಸ್ ಗಳಲ್ಲಿ ಮತ್ತು 100 ಅಡಿ ರಸ್ತೆಯ ಪ್ರಮುಖ ಕ್ರಾಸ್ ಗಳಲ್ಲಿ ಅಳವಡಿಸಬೇಕು ಹಾಗೂ ನಗರದಲ್ಲಿ ಅವಶ್ಯಕತೆ ಇರುವ ಎಲ್ಲಾ ಕಡೆ ಇಂತಹ ಹಂಪ್ಸ್ ಗಳನ್ನು ಹಾಕುವ ಕಾರ್ಯವನ್ನು ಮಾಡಬೇಕೆಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರಿಗೆ ಸಾರ್ವಜನಿಕರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *