ಶಿವಮೊಗ್ಗ: ಜಿಎಸ್‌ಟಿಯಲ್ಲಿ ಎರಡನೇ ಹಂತದ ಸುಧಾರಣೆಗಳಿಂದ ಎಂಎಸ್‌ಎಂಇ, ಸಣ್ಣ ಕೈಗಾರಿಕಾ ಉದ್ಯಮಿಗಳು, ವ್ಯಾಪಾರಿಗಳು ಹಾಗೂ ಜನಸಾಮಾನ್ಯರಿಗೆ ಆರ್ಥಿಕ ಪ್ರಯೋಜನ ದೊರೆಯುವ ನಿರೀಕ್ಷೆ ಇದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಎರಡನೇ ಹಂತದ ಸರಕು ಮತ್ತು ಸೇವಾ ತೆರಿಗೆ ಸುಧಾರಣೆಗಳಿಂದ ವಾಣಿಜ್ಯ ಮತ್ತು ಕೈಗಾರಿಕೆ, ವ್ಯಾಪಾರ, ಸಣ್ಣ ಕೈಗಾರಿಕೆ, ಚಿಲ್ಲರೆ ಮಾರುಕಟ್ಟೆ ಕ್ಷೇತ್ರಗಳ ಮೇಲೆ ಉಂಟಾದ ಪರಿಣಾಮಗಳ ಬಗ್ಗೆ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

2017ರಲ್ಲಿ ಜಿಎಸ್‌ಟಿ ಕಾನೂನಿನ ಪರಿಚಯವು ಬಹುಪಾಲು ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಹೊರೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಯಿತು. ಜಿಎಸ್‌ಟಿ 2.0 ಸುಧಾರಣೆಗಳು ನಿಜಕ್ಕೂ ಸ್ವಾಗತಾರ್ಹ ಹೆಜ್ಜೆಯಾಗಿದೆ. ಸೆಪ್ಟೆಂಬರ್ 22ರಿಂದ ಜಾರಿಗೆ ಬರುವ ಜಿಎಸ್‌ಟಿ 2.0, ಸರಳೀಕೃತ ಎರಡು ಸ್ಲ್ಯಾಬ್‌ ವ್ಯವಸ್ಥೆಯನ್ನು (ಶೇ. 5 ಮತ್ತು ಶೇ. 18 ) ಪರಿಚಯಿಸುತ್ತದೆ. ಕಡಿಮೆ ಗ್ರಾಹಕ ಬೆಲೆಗಳು ಮತ್ತು ಸುವ್ಯವಸ್ಥಿತ ಅನುಸರಣೆಯ ಮೂಲಕ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.

ಲೆಕ್ಕ ಪರಿಶೋಧಕ ಜತಿನ್ ಕ್ರಿಸ್ಟೋಪರ್ ಮಾತನಾಡಿ, ಜಿಎಸ್‌ಟಿ ದರಗಳಲ್ಲಿನ ಬದಲಾವಣೆಯಿಂದ ಮಾರಾಟವಾಗದ ದಾಸ್ತಾನಿನ ಮೇಲೆ ಎಂಆರ್‌ಪಿ ಪರಿಷ್ಕರಿಸಲು ಸರ್ಕಾರವು ಇತ್ತೀಚೆಗೆ ತಯಾರಕರಿಗೆ ಅನುಮತಿ ನೀಡಿದೆ. ಮೂಲ ಎಂಆರ್‌ಪಿ ಪ್ರದರ್ಶಿಸಬೇಕು ಮತ್ತು ಪರಿಷ್ಕೃತ ಬೆಲೆ ಅದನ್ನು ಅಸ್ಪಷ್ಟಗೊಳಿಸಬಾರದು. ಈ ಅನುಮತಿಯು 2025ರ ಡಿಸೆಂಬರ್ 31ರವರೆಗೆ ಮಾನ್ಯವಾಗಿರುತ್ತದೆ ಎಂದು ತಿಳಿಸಿದರು.

ಮಲೆನಾಡು ವಿಭಾಗದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತೆ (ಆಡಳಿತ) ನಾಜಿಯಾ ಅಮೀನ್, ಮಲೆನಾಡು ವಿಭಾಗದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತ (ಜಾರಿ) ವಿಜಯಕುಮಾರ್ ಬತ್ತದ್, ಕೇಂದ್ರ ಸಹಾಯಕ ಆಯುಕ್ತ ವಿಜಯ್ ಕುಮಾರ್ ಅವರು ಜಿಎಸ್‌ಟಿ ಸುಧಾರಣೆಯಲ್ಲಿನ ಅಂಶಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ಪ್ರೋಗ್ರಾಮ್ ಕಮಿಟಿ ಚೇರ್ಮನ್ ಶರತ್, ನಿರ್ದೇಶಕರಾದ ವಸಂತ್ ಹೋಬಳಿದಾರ್, ಪ್ರದೀಪ್ ವಿ.ಎಲಿ, ರಾಜ್ ಪ್ರಕಾಶ್ ಜನ್ನಿ, ಕೆ.ಎನ್.ರಾಜಶೇಖರ್, ಎಸ್.ಎಸ್.ಉದಯ್ ಕುಮರ್, ವಿನೋದ್ ಕುಮಾರ್, ಸುರೇಶ್ ಕುಮಾರ್, ವಿನೋದ್ ಕುಮಾರ್ ಜೈನ್, ಮಾಜಿ ಅಧ್ಯಕ್ಷರಾದ ಡಿ.ಎಂ.ಶಂಕ್ರಪ್ಪ, ಜೆ.ಆರ್.ವಾಸುದೇವ್, ತೆರಿಗೆ ಸಲಹೆಗಾರರು, ಲೆಕ್ಕಿಗರು, ಅನೇಕ ಕೈಗಾರಿಕಾ ಸಂಘ, ಸಂಯೋಜಿತ ಸಂಘದ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು, ಸನ್ನದು ಲೆಕ್ಕ ಪರಿಶೋಧಕರು, ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *