
ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರವು ದೊಡ್ಡ ಮಟ್ಟದಲ್ಲಿ ಬೆಳೆಯುವ ಮೂಲಕ ಇಂದಿನ ಎಐ ತಂತ್ರಜ್ಞಾನದ ಜಗತ್ತನ್ನು ಬದಲಾಯಿಸುವಂತಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ ತಿಳಿಸಿದರು.

ಅವರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕೆಸಿಟಿಯು, ಟೆಕ್ಸಾಕ್ ಬೆಂಗಳೂರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಆರ್‌ಎಎಂಪಿ ಯೋಜನೆಯಡಿ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಶಾಂತಲಾ ಸ್ಪೆರೋಕ್ಯಾಸ್ಟ್ ಲರ್ನಿಂಗ್ ಸೆಂಟರ್‌ನಲ್ಲಿ ಆಯೋಜಿಸಿದ್ದ TReDS ಯೋಜನೆ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಯು ಈ ದೇಶದ ಬೆನ್ನೆಲುಬಾಗಿದ್ದು, ಆಹಾರ ಉತ್ಪಾದನೆಗಳಲ್ಲಿ ತನ್ನದೇ ಆದ ಪಾತ್ರ ವಹಿಸುತ್ತಿದೆ. ಆದರೆ ಈಗ ಕೃಷಿಯೊಂದಿಗೆ ಕೈಗಾರಿಕಾ ಉತ್ಪಾದನೆಯು ವಿಲೀನವಾಗಿ ದೇಶಕ್ಕೆ ತಾಂತ್ರಿಕವಾಗಿ ಸಹಕಾರಿಯಾಗುತ್ತಾ ಮುಂದೆ ಸಾಗುತ್ತಿದೆ. ಅದರಂತೆ ಎಂಎಸ್‌ಎಂಇ ಸಂಸ್ಥೆಯು ಶೇ.30 ರಷ್ಟು ಜಿಡಿಪಿಯನ್ನು ದೇಶಕ್ಕೆ ನೀಡುತ್ತಿದ್ದು, ದೇಶದಲ್ಲಿ ಕೈಗಾರಿಕಾ ಉದ್ಯಮಗಳು ಶೇ.40 ರಷ್ಟು ಉತ್ಪಾಧನೆಯನ್ನು ರಫ್ತು ಮಾಡಲಾಗುತ್ತಿದೆ. ಇದರಿಂದ ಕೃಷಿಯಂತೆ ಕೈಗಾರಿಕೆ ಕ್ಷೇತ್ರದಲ್ಲಿ ಉದ್ಯೋಗಿಗಳು ಹೆಚ್ಚಾಗುತ್ತಿದ್ದಾರೆ ಎಂದರು.
ಹಣಕಾಸು ಬಿಕ್ಕಟ್ಟಿನಿಂದ ಎಂಎಸ್‌ಎಂಇ ಉತ್ಪಾದನೆ ಘಟಕಕ್ಕೆ ದೊಡ್ಡ ಮಟ್ಟದ ಬಂಡವಾಳ ಹೂಡಿಕೆಗೆ ಸಮಸ್ಯೆಯಾಗುತ್ತಿದೆ. ಆದರಿಂದ ಟೆಕ್ಸಾಕ್ ಕಡಿಮೆ ಬಂಡವಾಳ ಹೂಡಿಕೆಗೆ ಬೇಕಾದ ಸಹಕಾರವನ್ನು ನೀಡಲು ಮುಂದಾಗಿದ್ದು, ಬ್ಯಾಂಕಿನಿಂದಲೂ ಕೂಡ ಸಾಲ ದೊರೆಯುತ್ತದೆ. ಇದನ್ನು ಸದುಪಯೋಗ ಪಡಿಸಿಕೊಂಡು ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕಾ ಉದ್ಯಮಗಳು ದೊಡ್ಡದಾಗಿ ಬೆಳೆಯಬೇಕು. ಇದಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ ಎಂದರು.
ಮಾಚೇನಹಳ್ಳಿ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಡಿ.ಜಿ.ಬೆನಕಪ್ಪ ಮಾತನಾಡಿ, ಉದ್ಯಮಗಳು ಯಶಸ್ವಿಯಾಗಲು ಹಣ ಮುಖ್ಯವಾಗಿದೆ. ಮಾರುವವರ ಮತ್ತು ಕೊಳ್ಳುವವರ ಕಾರ್ಯವನ್ನು ಸರಿಯಾಗಿ ಅರಿತುಕೊಂಡು ಹಣವನ್ನು ಹೂಡಿಕೆ ಮಾಡಬೇಕು. ಆಗ ಮಾತ್ರ ಹೂಡಿಕೆ ಮಾಡಿದ ಹಣ ಸರಿಯಾದ ಕ್ರಮದಲ್ಲಿ ಲಾಭದಾಯಕವಾಗಿ ಸಿಗುತ್ತದೆ ಎಂದರು.
ಸರ್ಕಾರವು ಎಂಎಸ್‌ಎಂಇಗೆ ಸಾಕಷ್ಟು ಯೋಜನೆಯನ್ನು ನೀಡಿದೆ. ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಯಾವುದೇ ಸಂಕುಚಿತ ಮನೋಭಾವನೆಗೆ ಒಳಗಾಗದೆ ವಿಶಾಲ ಮನಸ್ಸಿನಿಂದ ಅವಕಾಶಗಳನ್ನು ಬಳಸಿಕೊಂಡು ಕೆಲಸ ಮಾಡಬೇಕು ಎಂದರು.
ಟೆಕ್ಸಾಕ್ ಸಿಇಒ ಹಾಗೂ ಮುಖ್ಯ ಸಲಹೆಗಾರ ಸಿದ್ದರಾಜು ಪ್ರಾಸ್ತಾವಿಕವಾಗಿ ಮಾತನಾಡಿ, 2019-20 ರಲ್ಲಿ ಕೋವಿಡ್‌ನಿಂದಾಗಿ ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಾಕಷ್ಟು ಸಮಸ್ಯೆ ಅನುಭವಿಸಿದೆ. ಬಂಡಾವಳ ಹೂಡಿಕೆ ಕಡಿಮೆಯಾಗಿ ಉತ್ಪಾದನ ಘಟಕಗಳು ನಿಂತು ಹೋಗುವ ಸ್ಥಿತಿ ಬಂದಿದ್ದವು. ಇದನ್ನು ಮನಗಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶ್ವ ಬ್ಯಾಂಕ್ ಸಹಾಯದಿಂದ ಆರ್‌ಎಎಂಪಿ ಅಡಿಯಲ್ಲಿ ಉತ್ಪಾದನಾ ಘಟಕಕ್ಕೆ ಹೂಡಿಕೆ ಮಾಡಲು ಮುಂದಾದವು. ಕೈಗಾರಿಕಾ ಘಟಕಗಳು ಮಾರುವವರು ಮತ್ತು ಕೊಳ್ಳುವವರ ಒಗ್ಗೂಡಿಸಿಕೊಂಡು ಹಣವನ್ನು ಹೂಡಿಕೆ ಮಾಡಬೇಕು. ಅದರಿಂದ ಕೈಗಾರಿಕಾ ಘಟಕವನ್ನು ನಿರಂತವಾಗಿ ನಡೆಸಲು ಸಾಧ್ಯವಾಗುತ್ತದೆ ಎಂದರು.
ಕೈಗಾರಿಕೆ ಘಟಕಗಳು ಉತ್ಪಾದನೆಯ ಜೊತೆಗೆ ಪರಿಸರದ ಬಗ್ಗೆ ಅರಿವು ಹೊಂದಿದ್ದು, ಮುಂದಿನ ದಿನಗಳಲ್ಲಿ ಸಾಮಾಜಿಕ ವ್ಯವಹಾರದ ಬಗ್ಗೆ ಅರಿವು ಮೂಡಿಸುವಲ್ಲಿ ಕಾರ್ಯ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರ್‌ಎಎಂಪಿ ಕಾರ್ಯಕ್ರಮದಲ್ಲಿ ಹೊಸ ತಾಂತ್ರಿಕತೆ ಬಳಸುವ ಬಗ್ಗೆ ತಿಳಿಸಲಾಗುತ್ತಿದ್ದು, ಇದಕ್ಕೆ ಸಂಬಂಧಪಟ್ಟಂತೆ ಕಾಲೇಜು ವಿದ್ಯಾರ್ಥಿಗಳಿಗಾಗಿ 8 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರ್, ಕಾಸಿಯಾ ಪ್ರತಿನಿಧಿ ಸದಸ್ಯ ಎಸ್.ವಿಶ್ವೇಶ್ವರಯ್ಯ, ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪಿ.ಹನುಮಂತಪ್ಪ, ಕೆಎಸ್‌ಎಫ್‌ಸಿ ಶಾಖಾ ವ್ಯವಸ್ಥಾಪಕ ದತ್ತಾತ್ರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಹೆಚ್.ಸುರೇಶ್, ಗ್ರಾಮೀಣ ಕೈಗಾರಿಕಾ ಉಪ ನಿರ್ದೇಶಕ ಎಸ್.ಪಿ ರವೀಂದ್ರ ಹಾಜರಿದ್ದರು.