ಶಿವಮೊಗ್ಗ: ಯಶಸ್ಸಿನ ಗುರಿಯನ್ನು ಸಾಧಿಸಲು ವ್ಯಕ್ತಿತ್ವ ವಿಕಸನದೆಡೆಗೆ ಸಾಗಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಯುವ ಸಮೂಹಕ್ಕೆ ಕರೆ ನೀಡಿದರು‌.

ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ಚಟುವಟಿಕೆಗಳ ಘಟಕದ ವತಿಯಿಂದ ಬಿಕಾಂ, ಬಿಬಿಎ, ಬಿಸಿಎ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಮ್ಯಾನೇಜ್ಮೆಂಟ್ ಫೆಸ್ಟ್ ‘ಮೇಧಾ ಪರ್ವ – 2025’ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಅಂಕಗಳೊಂದಿಗೆ ಉತ್ತಮ ವ್ಯಕ್ತಿತ್ವ, ಕೌಶಲ್ಯಾಧಾರಿತ ಚಿಂತನೆಗಳನ್ನು ಗಳಿಸಿ. ಸ್ಪರ್ಧಾ ಜಗತ್ತಿನಲ್ಲಿ ಧೈರ್ಯ, ಆತ್ಮವಿಶ್ವಾಸ, ಗಟ್ಟಿ ನಿಲುವುಗಳನ್ನು ಬೆಳಸಿಕೊಳ್ಳಿ ಎಂದು ಹೇಳಿದರು.

ಎ.ಟಿ.ಎನ್.ಸಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಟಿ.ಆರ್.ಮಮತಾ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆಗಳು ಬುನಾದಿ. ಮೊಬೈಲ್ ಖರೀದಿಸುವಾಗ ಉತ್ತಮ ಹೊಸ ನಾವೀನ್ಯ ಲಕ್ಷಣಗಳು ಬೇಕು ಎಂದು ಹುಡುಕುತ್ತೇವೆ. ಅದರೇ ಬದುಕಿನಲ್ಲಿ ವಿಭಿನ್ನ ವ್ಯಕ್ತಿತ್ವ ಲಕ್ಷಣಗಳನ್ನು ಅಳವಡಿಸಿಕೊಳ್ಳುವಲ್ಲಿ ಎಷ್ಟು ಚಿಂತನಶೀಲರಾಗಿದ್ದೇವೆ ಎಂಬುದರ ಅವಲೋಕನವನ್ನು ಯುವ ಸಮೂಹ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಮ್ಯಾನೇಜ್ಮೆಂಟ್ ಘಟಕದ ಕಾರಗಯಕ್ರಮಾಧಿಕಾರಿ ಅರುಣ್ ಕುಮಾರ್ ಎಂ.ಎಸ್‌ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ 13 ಮ್ಯಾನೇಜ್ಮೆಂಟ್ ಮತ್ತು ತಾಂತ್ರಿಕ ವಿಷಯಾಧಾರಿತ ಸ್ಪರ್ಧಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹಭರಿತರಾಗಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *