ಮೊಟ್ಟ ಮೊದಲ ಮೌಲ್ಯಯುತ ಮಹಾಕಾವ್ಯ ರಾಮಾಯಣ ರಚಿಸುವ ಮೂಲಕ ಭಾರತೀಯ ಕಾವ್ಯ, ಸಾಹಿತ್ಯ, ಜನಪದ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ಆದಿಕವಿ ಮಹರ್ಷಿ ವಾಲ್ಮೀಕಿ ಅವರು ನೀಡಿರುವ ಕೊಡುಗೆ ಅನನ್ಯವಾದುದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ, ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾನಗರ ಕಂಟ್ರಿಕ್ಲಬ್‌ರಸ್ತೆಯಲ್ಲಿರುವ ಶ್ರೀ ಮಹರ್ಷಿ ಜಿಲ್ಲಾ ವಾಲ್ಮೀಕಿ ಭವನದಲ್ಲಿ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆದಿ ಕವಿಗಳಿಗೆ ಗೌರವ ಸಲ್ಲಿಸುವ ಮತ್ತು ಮೇರುಕೃತಿ ರಾಮಾಯಣದ ಮೂಲಕ ಮಹರ್ಷಿ ವಾಲ್ಮೀಕಿ ಅವರು ನೀಡಿರುವ ಸಾರ್ವಕಾಲಿಕ ಆದರ್ಶ ಮೌಲ್ಯಗಳನ್ನು ಯುವ ಪೀಳಿಗೆಗೆ ತಿಳಿಸುವ, ಅದನ್ನು ಅಳವಡಿಸಿಕೊಳ್ಳುವ ಹಾಗೂ ಅನುಸರಿಸುವ ಅಗತ್ಯವಿದೆ ಎಂದ ಅವರು, ರಾಮಾಯಣದ ನೂರಾರು ಪಾತ್ರಗಳ ಮೂಲಕ ದೇಶಭಕ್ತಿ, ಮಾನವೀಯತೆ, ಸಮಾನತೆ, ಕಾರುಣ್ಯ, ಭಾತೃತ್ವ, ಮಮತೆ, ತ್ಯಾಗ, ಧರ್ಮ ರಕ್ಷಣೆ, ರಾಜನೀತಿ ಸೇರಿದಂತೆ ಜನಜೀವನಕ್ಕೆ ಅಗತ್ಯವಾದ ಎಲ್ಲ ಮೌಲ್ಯಗಳನ್ನು ಪ್ರತಿಪಾದಿಸಿದ್ದಲ್ಲದೇ ಸಮಗ್ರ ಮನುಕುಲದ ಉದ್ಧಾರಕ್ಕಾಗಿ ಮಾರ್ಗದರ್ಶನವನ್ನು ನೀಡಿದ್ದಾರೆ.ಆದ್ದರಿಂದಲೇ ಆದಿಕವಿ ಮಹರ್ಷಿ ವಾಲ್ಮೀಕಿಗಳು, ವಿಶ್ವಕವಿಯಾಗಿ, ಇತಿಹಾಸಕಾರರಾಗಿ, ದಾರ್ಶನಿಕರಾಗಿ, ಶಾಸ್ತ್ರಜ್ಞರಾಗಿ ಮತ್ತು ತತ್ವಜ್ಞಾನಿಯಾಗಿ ಸರ್ವಕಾಲಕ್ಕೂ ಗೌರವಿಸಲ್ಪಡುತ್ತಾರೆ ಎಂದವರು ನುಡಿದರು.
ಜಗತ್ತಿಗೆ ಮಾರ್ಗದರ್ಶಿಯಾಗಿ ಗುರುತಿಸಲ್ಪಡಬಹುದಾದ ಏಕೈಕ ಕೃತಿ ವಾಲ್ಮೀಕಿ ರಚಿತ ರಾಮಾಯಣದಲ್ಲಿನ ಪ್ರತಿ ಪಾತ್ರಗಳ ಕುರಿತು ರಾಷ್ಟ್ರಕವಿ ಕುವೆಂಪು ಸೇರಿದಂತೆ ನಾಡಿನ ಅನೇಕ ಹಿರಿಯ ಸಾಹಿತಿಗಳು ವಿಸ್ತೃತ ವಿಶ್ಲೇಷಣೆ ನಡೆಸಿದ್ದಾರೆ. ಭಗವಾನ್‌ರಾಮನ ಆದರ್ಶ ಪ್ರತಿ ವ್ಯಕ್ತಿಯಲ್ಲಿ ಕಾಣುವಂತಾಗಬೇಕು ಎಂದ ಅವರು, ರಾಮಾಯಣದಲ್ಲಿ ಪ್ರತಿಯೊಬ್ಬರಲ್ಲಿ ಸೃಜಿಸುವ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ ಸಾಬೀತುಪಡಿಸಿದ್ದಾರೆ ಎಂದರು.
ರಾಮ ಎಂಬುದು ಕಲ್ಪನೆಯ ಚಿತ್ರವಲ್ಲ, ವಾಸ್ತವ. ಕೃತಿಯಲ್ಲಿ ಸತ್ಯಸಂಗತಿಗಳು ಅನಾವರಣಗೊಂಡಿದೆ. ಅದರಲ್ಲಿ ಜೀವನ ವಿಧಾನವಿದೆ. ಆದರ್ಶದ ಬದುಕಿದೆ. ರಾಮಾಯಣ ಮತ್ತು ಮಹಾಭಾರತ ಈ ದೇಶದ ಅದರಲ್ಲೂ ಹಿಂದೂಗಳ ಆರಾಧನಾ ಕೃತಿಗಳಾಗಿದ್ದು, ದೇಶೀಯರು ಮಾತ್ರವಲ್ಲ ವಿದೇಶಿಯರೂ ಕೂಡ ರಾಮ, ರಾಮಾಯಣವನ್ನು ಆರಾಧಿಸುತ್ತಿರುವುದು ಹರ್ಷದ ಸಂಗತಿಯಾಗಿದೆ. ಇದು ಭಾರತೀಯ ಮಹಾಕಾವ್ಯದ ಅಸ್ಮಿತತೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್‌ಸದಸ್ಯ ಡಿ.ಎಸ್.ಅರುಣ್‌ಅವರು ಮಾತನಾಡಿ, ವಾಲ್ಮೀಕಿ ಮತ್ತು ರಾಮಾಯಣ ಕೃತಿಗಳಲ್ಲಿ ಬಿಂಬಿತವಾಗಿರುವ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಭವ್ಯ ಪರಂಪರೆಯನ್ನು ಇಂದಿನ ಯುವ ಜನತೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಅನುಸರಿಸುವ ಅಗತ್ಯವಿದೆ ಎಂದರು.
ಆಡಳಿತಾರೂಢ ಸರ್ಕಾರವು ತುಳಿತಕ್ಕೊಳಗಾದ ಜನರ ಸುಧಾರಣೆಗೆ ನಿಗಮಗಳ ಮೂಲಕ ರೂಪಿಸಿ ಅನುಷ್ಠಾನಗೊಳಿಸಿರುವ ಯೋಜನೆಗಳನ್ನು ಸಮರ್ಪಕ ಜನರಿಗೆ ತಲುಪಿಸಲು ಸಕಾಲಿಕವಾಗಿ ಅನುದಾನ ಬಿಡುಗಡೆಗೊಳಿಸುವಂತೆ ಅವರು ಮನವಿ ಮಾಡಿದರು.
ವಿಧಾನ ಪರಿಷತ್‌ಸದಸ್ಯೆ ಶ್ರೀಮತಿ ಬಲ್ಕೀಸ್‌ಬಾನು ಅವರು ಮಾತನಾಡಿ, ವಾಲ್ಮೀಕಿ ದಿನಾಚರಣೆಗಳಿಗಷ್ಟೇ ಸೀಮಿತವಾಗದೇ ಪ್ರತಿದಿನವೂ ಅವರ ಆದರ್ಶಗಳನ್ನು ಅನುಸರಿಸಬೇಕು. ಅವರ ಕೃತಿಯಲ್ಲಿನ ರಾಮ ಸತ್ಯದ ಪ್ರತೀಕವಾಗಿದ್ದಾನೆ. ಕೃತಿಯನ್ನು ಅನುಸರಿಸಿ, ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದವರು ನುಡಿದರು.
ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಜಿ.ಪಲ್ಲವಿ, ಜವುಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್‌ಕೆ.ಗೌಡ, ಕಾಡಾ ಅಧ್ಯಕ್ಷ ಸುಂದರೇಶ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಸಮಾಜದ ಮುಖಂಡರಾದ ಲಕ್ಷ್ಮಣ್‌ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಮುಖಾಮುಖಿ ರಂಗತಂಡದ ಮಂಜುನಾಥ್‌ಮತ್ತು ಸಹಕಲಾವಿದರು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.