ಪ್ರಸ್ತುತ ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಹಗಲು ಮಾತ್ರ ವಿಮಾನಯಾನ ಸೇವೆ ಲಭ್ಯವಿದ್ದು ಮುಂದಿನ ನಾಲ್ಕಾರು ತಿಂಗಳಲ್ಲಿ ರಾತ್ರಿ ವಿಮಾನ ಸಂಚಾರಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ್ ಅವರು ಹೇಳಿದರು.
ಅವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಅವಲೋಕಿಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ವಿಮಾನ ನಿಲ್ದಾಣದಲ್ಲಿ ಬಾಕಿ ಇರುವ ಕೆಲವು ಸಿವಿಲ್ ಕಾಮಗಾರಿಗಳು, ಲೈಟಿಂಗ್‌ವ್ಯವಸ್ಥೆ ಮತ್ತು ನೈಟ್ ಲ್ಯಾಂಡಿಂಗ್ ಗೆ ಸಂಬಂಧಿಸಿದ ಕಾಮಗಾರಿಗಳಿಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿ ಅತ್ಯಲ್ಪ ಅವಧಿಯಲ್ಲಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ ಎಂದರು.
ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಲಾಗಿದ್ದ ವಿಶಾಲವಾದ ಭೂ 780ಎಕರೆ ಪ್ರದೇಶದಲ್ಲಿ ಸುಮಾರು 111 ಎಕರೆ ಭೂ ಪ್ರದೇಶವನ್ನು ಹೋಟೆಲ್, ಮಾಲ್ ಗಳ ನಿರ್ಮಾಣ ಮತ್ತು ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಕನಿಷ್ಠ 30ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಉದ್ದೇಶಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದರಿಂದಾಗಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅಲ್ಲದೆ ಇಲ್ಲಿನ ಅನೇಕ ಬಾಕಿ ಇರುವ ಕೆಲಸಗಳನ್ನು ಗಮನಿಸಲಾಗಿದೆ. ಈ ಸಂಬಂಧ ಅಕ್ಟೋಬರ್ 17ರಂದು ಬೆಂಗಳೂರಿನಲ್ಲಿ ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದ ಅವರು ನುಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅವಿರತ ಶ್ರಮದಿಂದ ವ್ಯವಸ್ಥಿತವಾದ ಈ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಅದಕ್ಕಾಗಿ ಬಿ.ಎಸ್.ಯಡಿಯೂರಪ್ಪ ಅವರು ಅಭಿನಂದನಾರ್ಹರು.
– ಎಸ್.ಜಿ. ನಂಜಯ್ಯನಮಠ್, ಅಧ್ಯಕ್ಷರು, ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ.
ವಿಮಾನ ಸಂಚಾರ ಆರಂಭಗೊಂಡ ಮೊದಲ ವರ್ಷದಲ್ಲಿ 17000, ಎರಡನೇ ವರ್ಷದಲ್ಲಿ 92,000 ಹಾಗೂ ಪ್ರಸಕ್ತ ಸಾಲಿನಲ್ಲಿ 1,10ಲಕ್ಷ ಜನ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಇದನ್ನು ಗಮನಿಸಿದಾಗ ವಿಮಾನಯಾನ ಬಳಸಿಕೊಳ್ಳುವವರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ ಎಂದ ಅವರು, ಹೈದ್ರಾಬಾದ್, ಗೋವಾ, ಚೆನ್ನೈ, ತಿರುಪತಿ, ಬೆಂಗಳೂರು ಸೇರಿದಂತೆ ಕೇವಲ ಸೀಮಿತ ಸ್ಥಳಗಳಿಗೆ ಮಾತ್ರ ವಿಮಾನ ಸಂಚಾರವಿದ್ದು, ಅದನ್ನು ದೇಶದ ಬೇರೆ ಬೇರೆ ಸ್ಥಳಗಳಿಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದರು.
ವಿಮಾನ ನಿಲ್ದಾಣದಲ್ಲಿ ತನಿಖಾ ತಂಡ ಸೂಚಿಸುವ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸದ ಕಾರಣ ಕಳೆದ ಬಾರಿ ವಿಧಿಸಿದ್ದ 30ಲಕ್ಷ ರೂ.ಗಳನ್ನು ಪಾವತಿಸಬೇಕಾದ್ದು ಬಾಕಿ ಇದ್ದು, ಶೀಘ್ರದಲ್ಲಿ ಪಾವತಿಸಲು ಕ್ರಮ ವಹಿಸಲಾಗುವುದು. ಅಲ್ಲದೇ ಈ ಹಿಂದೆ ತನಿಖಾ ತಂಡ ಗುರುತಿಸಿದ್ದ ಎಲ್ಲಾ ಲೋಪಗಳನ್ನು ಈಗಾಗಲೇ ಸರಿಪಡಿಸಿಕೊಳ್ಳಲಾಗಿದೆ. ಈ ಬಾರಿ ತನಿಖಾ ತಂಡ ಭೇಟಿ ನೀಡಿ ಪರಿಶೀಲಿಸಿದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಪರವಾನಿಗೆ ನವೀಕರಣಗೊಳ್ಳಲಿದೆ ಎಂದರು.
ಈ ಹಿಂದೆ ವಿಮಾನ ನಿಲ್ಧಾಣಕ್ಕೆ ಭೂಪ್ರದೇಶವನ್ನು ಬಿಟ್ಟುಕೊಟ್ಟ 371 ಭೂಮಾಲೀಕರಿಗೆ ನಿವೇಶನವನ್ನು ನೀಡಲು ಈ ಹಿಂದೆ ಸರ್ಕಾರವು ಒಪ್ಪಿಕೊಂಡಿತ್ತು. ಈ ಬಗ್ಗೆ ಭೂಮಾಲೀಕರು ಅನೇಕ ಬಾರಿ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದರು. ನಾಳೆಯಿಂದ ಪುನಃ ತಮ್ಮ ಬೇಡಿಕೆಯ ಈಡೇರಿಗೆ ಆಗ್ರಹಿಸಿ, ವಿಮಾನ ನಿಲ್ದಾಣದ ಎದುರು ಅನಿರ್ಧಿಷ್ಟಾಧಿ ಧರಣಿ ನಡೆಸುತ್ತಿರುವುದ ತಿಳಿದಿದ್ದು, ಸಂತ್ರಸ್ಥ ಕುಟುಂಬದವರಿಗೆ ನಿವೇಶನ ನೀಡಲು ಸಂಬಂಧಿಸಿದ ಇಲಾಖಾ ಮುಖ್ಯಸ್ಥರ ಗಮನಸೆಳೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿಮಾನ ನಿಲ್ದಾಣ ಮುಖ್ಯಸ್ಥ ಕ್ಯಾ.|| ಶಮಂತ್ ಮತ್ತಿತರರು ಉಪಸ್ಥಿತರಿದ್ದರು.