ಮಂಗಳೂರು: ಸಂವಿಧಾನದ ಮೇಲೆ ಶಪಥ ಮಾಡಿದ ನಾವು ಸಂವಿಧಾನದ ಆಶಯದಂತೆ ಅಧಿಕಾರ ಮಾಡುತ್ತಿದ್ದೇವೆ. ಸಂವಿಧಾನದಲ್ಲಿ ಕೊಟ್ಟಿರುವ ಅಧಿಕಾರ ಬಳಸಿ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದೇವೆ. ಆದರೆ ಬಿಜೆಪಿಯ ನಾಯಕರುಗಳು ಸಮೀಕ್ಷೆಗೆ ಅವಕಾಶ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ಯಾವುದಕ್ಕೂ ಜಗ್ಗದ ನಮ್ಮ ಶಿಕ್ಷಕರು ರಾಜ್ಯದಲ್ಲಿ ಸಮೀಕ್ಷೆಯನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಮಂಗಳೂರಿನ ಓಷನ್ ಹೋಟಲ್‌ನಲ್ಲಿ ನಡೆದ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ವಿಭಾಗದ ವಿಭಾಗೀಯ ಮಟ್ಟದ ಸಭೆಯಲ್ಲಿ ಮಾತನಾಡಿದರು. ಸಮೀಕ್ಷೆಯಲ್ಲಿ ಜನರು ತಮ್ಮ ಜಾತಿಯನ್ನು ಹೇಳಿಕೊಳ್ಳಲು ಅವಕಾಶವಿದೆ. ಯಾರಿಗೂ ಒತ್ತಡ ಹಾಕುತಿಲ್ಲ. ಸ್ವಯಂ ಪ್ರೇರಿತವಾಗಿಯೇ ಮಾಹಿತಿಯನ್ನು ನೀಡುತ್ತಿದ್ದಾರೆ. ಬಿಜೆಪಿಯ ಆರ್.ಅಶೋಕ್, ಪ್ರಹ್ಲಾದ್ ಜೋಷಿ ಪ್ರತಾಪ ಸಿಂಹ, ಅಶ್ವತ್ಥನಾರಾಯಣಣ, ವಿಜಯೇಂದ್ರರಂಹ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಪಿಎಂ ದೇವೇಗೌಡರು, ಮಾಜಿ ಸಿಎಂ ಯಡಿಯೂರಪ್ಪರು ಸಮೀಕ್ಷೆಗೆ ಹೋಗಬೇಡಿ ಎಂದು ಹೇಳಿಲ್ಲ. ಆದರೆ ರಾಜಕೀಯ ಕಾರಣಕ್ಕಾಗಿ ಈ ವಿರೋಧ ಮಾಡುತಿದ್ದಾರೆ ಇದಕ್ಕೆ ಯಾವ ಮೌಲ್ಯವೂ ಇಲ್ಲ ಎಂದರು.ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡುತ್ತಿರುವುದು ಜನರಿಗೆ ಸಾಮಾಜಿಕ ನ್ಯಾಯ ನೀಡುವ ಕಾರಣಕ್ಕೆ. ಸಮಾಜದ ಕಟ್ಟಕಡೆಯ ಪ್ರಜೆಗೂ ಸರ್ಕಾರದ ಸೌಲಭ್ಯ ನೀಡಲು ಸಿದ್ದರಾಮಯ್ಯ ನೇತೃತ್ವದ ಸರಕಾರ ಈ ಮಹಾನ್ ಕಾರ್ಯ ಮಾಡುತ್ತಿದೆ.
ತುಳಿತಕ್ಕೊಳಗಾದ ಸಮಾಜಗಳಿಗೆ ನ್ಯಾಯ ತಲುಪಿಸುವಲ್ಲಿ ಈ ಸರ್ವೆ ಸಹಕಾರವಾಗುತ್ತದೆ. ರಾಜ್ಯದಲ್ಲಿ ಈಗಾಗಲೇ ಶೇ.82 ರಷ್ಟು ಸಮೀಕ್ಷೆ ಮುಗಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಲಾಗಿದೆ. ಪಕ್ಷದ ಹಿಂದುಳಿದ ವರ್ಗದ ವಿಭಾಗದ ಎಲ್ಲಾ ಮುಖಂಡರು ಸಮೀಕ್ಷೆ ಯಶಸ್ವಿಗಾಗಿ ಕೆಲಸ ಮಾಡಬೇಕಿದೆ. ಪ್ರತಿಪಕ್ಷದವರ ಸುಳ್ಳು ಆರೋಪಗಳಿಗೆ ತಕ್ಕ ಉತ್ತರ ನೀಡಬೇಕಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಸಾಮಾಜಿಕ ನ್ಯಾಯ ಸಂವಿಧಾನ ಬದ್ಧವಾದ ಹಕ್ಕು ನಾವೆಲ್ಲಾ ಒಂದು ಎಂಬ ಘೋಷಣೆಯ ಅಡಿಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಮುಖಂಡರುಗಳು, ಸಮೀಕ್ಷೆಯಲ್ಲಿ ಬರುವ ಅಂಕಿ ಅಂಶವೆ ಮಾನದಂಡ ನಾವೆಲ್ಲರೂ ಸಕ್ರಿಯವಾಗಿ ಗಣತಿ ಕಾರ್ಯದಲ್ಲಿ ಭಾಗವಹಿಸಿ ಗಣತಿಯನ್ನು ವಿರೋಧಿಸುವ ಪಟ್ಟಭದ್ರ ಶಕ್ತಿಗಳ ದುರಾಲೋಚನೆಯನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕೆಂಬ ಸಲಹೆ ನೀಡಿದರು.
ವಿಧಾನ ಪರಿಷತ್ತಿನ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ, ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ಶಿರಸಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣನಾಯ್ಕ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ನಾರಾಯಣ ಗುರುಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ.ದಕ್ಷಿಣ ಕನ್ನಡ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷರು ಹಾಗೂ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್‌ದಾಸ್, ಮೆಸ್ಕಾಂ ನಿಗಮದ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್‌ಕುಮಾರ್, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಮುಖ್ಯಮಂತ್ರಿಯವರ ವೈದ್ಯಕೀಯ ಸಲಹೆಗಾರ ಡಾ. ರವಿಕುಮಾರ್, ಕಾಂಗ್ರೆಸ್ ಮುಖಂಡರಾದ ರವಿ ಬೋಸರಾಜ್, ಪದ್ಮರಾಜ್, ರಕ್ಷಿತ್ ಶಿವರಾಂ ರಾಜ್ಯ ಸಂಯೋಜಕರಾದ ಜಿ.ಡಿ. ಮಂಜುನಾಥ್ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶಂಕರಘಟ್ಟ ರಮೇಶ್ ಶೆಟ್ಟಿ, ವಿವಿಧ ಜಿಲ್ಲೆಯ ಅಧ್ಯಕ್ಷರುಗಳು ಪದಾಧಿಕಾರಿಗಳು ಭಾಗವಹಿಸಿದ್ದರು.