ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ ಮತ್ತು ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಹಾಗೂ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಹಾಗೂ ಜಿಲ್ಲೆಯ ಸರ್ಕಾರೇತರ ಸಂಘ ಸಂಸ್ಥೆಗಳು ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಹೆಚ್.ಐ.ವಿ ನಿಯಂತ್ರಣಕ್ಕಾಗಿ ತೀವ್ರಗೊಳಿಸಿದ ಪ್ರಚಾರಾಂದೋಲನದ ಅಂಗವಾಗಿ ದಿನಾಂಕ 14-10-25 ಎಂದು ಏರ್ಪಡಿಸಲಾಗಿದ್ದ ಬೈಕ್ ಜಾಥಾ ಕಾರ್ಯಕ್ರಮಕ್ಕೆ ಡಿಹೆಚ್‌ಓ ಡಾ. ನಟರಾಜ್ ಕೆ ಎಸ್ ಚಾಲನೆ ನೀಡಿದರು.
ಈ ವೇಳೆ ಅವರು ಮಾತನಾಡಿ, 2030 ಕ್ಕೆ ಹೆಚ್.ಐ.ವಿ ಮುಕ್ತ ಭಾರತವನ್ನು ನಿರ್ಮಿಸಲು ಕಾರ್ಯ ಚಟುವಟಕೆಗಳನ್ನು ಕೈಗೊಳ್ಳಲಾಗುತ್ತಿದೆ. ಹೊಸದಾಗಿ ಹೆಚ್‌ಐವಿ ಸೋಂಕಿಗೆ ತುತ್ತಾಗುವುದನ್ನು ಸೊನ್ನೆಗೆ ತರುವುದು, ಹೆಚ್.ಐ.ವಿ ಯಿಂದ ಆಗುವ ಮರಣಗಳನ್ನು ಸೊನ್ನೆಗೆ ತರುವುದು ಹಾಗೂ ಹೆಚ್.ಐ.ವಿ ಯಿಂದಾಗುವ ತಾರತಮ್ಯ, ಕಳಂಕವನ್ನು ಸೊನ್ನೆಗೆ ತರುವ ನಿಟ್ಟಿನಲ್ಲಿ 95-95-95 ರ ಗುರಿಯನ್ನು ಹೊಂದಿದ್ದು ಪ್ರತಿಯೊಬ್ಬರು ತಮ್ಮ ಹೆಚ್. ಐ. ವಿ ಸ್ಥಿತಿಯನ್ನು ತಿಳಿದಿರಬೇಕು ಹಾಗೂ ಹೆಚ್‌ಐವಿ ಸೋಂಕಿತರು ತಪ್ಪದೇ ಎ.ಆರ್.ಟಿ ಚಿಕಿತ್ಸೆಯನ್ನು ಪಡೆಯಬೇಕು ಹಾಗೂ ಎಆರ್‌ಟಿ ಚಿಕಿತ್ಸೆಯನ್ನು ಪಡೆಯುವವರಲ್ಲಿ ವೈರಸ್ ಲೋಡ್ ಕಡಿಮೆ ಆಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯನಿರ್ವಹಿಸಿ ಹೆಚ್.ಐ.ವಿ ಸೋಂಕು ಕಡಿಮೆ ಮಾಡುವಂತೆ ತಿಳಿಸಿದರು.
ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಚ್.ಐ.ವಿ ಸೋಂಕಿನ ಪ್ರಮಾಣ ಕಡಿಮೆ ಆಗುತ್ತಿದ್ದು, ನಿಯಂತ್ರಣದ ನಿಟ್ಟಿನಲ್ಲಿ ಇಲಾಖೆಯಿಂದ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ತಿಳಿಸಿದರು.
ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ನಾಗೇಶ್ ಬಿ ಪಿ, ಎನ್‌ಎಸಿಓ ದಿಶಾ ಸಂಯೋಜಕರು ಬೆಂಗಳೂರು, ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ವೈದ್ಯಾಧಿಕಾರಿಗಳು, ನರ್ಸಿಂಗ್ ಅಧಿಕಾರಿಗಳು, ಆಡಳಿತ ಅಧಿಕಾರಿಗಳು, ಡಿಎಪಿಸಿಯು ಸಿಬ್ಬಂದಿಗಳು, ಎನ್‌ಟಿಇಪಿ ಸಿಬ್ಬಂದಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಜಾಥಾವು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಿಂದ ಆರಂಭಗೊAಡು ಬಸ್ ನಿಲ್ದಾಣ, ಅಮೀರ್ ಅಹ್ಮದ್ ಸರ್ಕಲ್, ಗೋಪಿ ಸರ್ಕಲ್, ಕೋರ್ಟ್ ಸರ್ಕಲ್, ಡಿಸಿ ಕಚೇರಿ, ಶಿವಮೂರ್ತಿ ಸರ್ಕಲ್, ಜಿಲ್ಲಾ ಪಂಚಾಯತ್, ಜೈಲ್ ಸರ್ಕಲ್, ಕುವೆಂಪು ರಸ್ತೆ ಮೂಲಕ ಹಾದು ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕಚೇರಿ ಬಳಿ ಸಮಾಪ್ತಗೊಂಡಿತು.