ಅಂತರಾತ್ಮ ಜೀವಂತ

ಬಾಲ್ಯದಲ್ಲಿ
ಪುಟಾಣಿ ಅಂಗಿ ಹಾಗು ಚಡ್ಡಿ ಜೇಬಿನಲ್ಲಿ
ಹುಡುಗಿಸಿಟ್ಟ ನೆನಪುಗಳನ್ನು,
ಒಂದೊಂದಾಗಿ ಹೊರತೆಗೆದೆ,

ಅವೆಲ್ಲ ನನ್ನನ್ನು ನೋಡಿ ಮುಗುಳ್ನಕ್ಕವು
ಎಷ್ಟೋ ನೆನಪುಗಳನ್ನು ಮರೆತೇ ಬಿಟ್ಟಿದ್ದೇನೆ ನಾನು,
ಈಗ ಮತ್ತೆ ಪ್ರತ್ಯಕ್ಷವಾಗಿವೆ,

ಚಿಕ್ಕ ಚಿಕ್ಕ ಕನಸುಗಳಲ್ಲೇ
ಬದುಕು ಅಡಗಿತ್ತಲ್ಲವಾ?
ಅದ್ಯಾವುದೋ ಬೇವರ್ಸಿ ಬದುಕನ್ನು ಅರಸುತ್ತ
ಕೊಂದೆನಾ ನಾನು ನನ್ನ ನೆನಪುಗಳನ್ನು ?
ಕಾಡುವ ಪ್ರಶ್ನೆಗಳ ಒಳಗೆ,
ಬೇರೆ ತರಹದ ಸಮಾದಾನದ ಉತ್ತರಗಳು

ತನ್ನ ತಮ್ಮ ಮೊದಲ ಸಂಬಳದಲ್ಲಿ,
ತನಗೊಂದು ಹೊಸ ಲಂಗ ಕೊಡಿಸಬೇಕು
ಎಂದು ಹೇಳಿದ ಅಕ್ಕ,,,,,,,,
ಇವತ್ತು ಅವಳ ಲಂಗದ ಕನಸನ್ನು ಮರೆತು
ಅವಳ ಮಗುವಿಗೆ ಕಾನ್ವೆಂಟು ಹುಡುಕುವುದರಲ್ಲಿ ಬ್ಯುಸಿ,

ಬಾಲ್ಯದ ಗೆಳತಿ
ಜಾತ್ರೆಯಲ್ಲಿ ಐದು ರುಪಾಯಿಗೆ
ನನಗಾಗಿ ಕೊಂಡು ತಂದ ಕೀ ಚೈನು,
ಈಗಲೂ ಕೆಣುಕುತ್ತದೆ ನನ್ನನ್ನು,,,,,,,,,,
ಅವಳು, ಅವಳಾತ್ಮವನ್ನೇ ಕೀ ಚೈನಿನೊಳಗಿತ್ತು ಕೊಟ್ಟಿದ್ದಳು,,,,,,,,,,
ಹೀಗೆ,,,,,,,,,, ಹೀಗೆ,,,,,,,,, ಸುಮ್ಮನೆ
ಬೆಳೆಯುತ್ತ ಎತ್ತ ಹೋಯಿತು ಆ ಮುಗ್ಧತೆ?

ಎಲ್ಲೊ ಮರದ ಬುಡದಲ್ಲಿ ಕುಳಿತು,
ಟೊಮೊಟೊ ಹಣ್ಣಿಗೆ ಉಪ್ಪು ಬೆರೆಸಿ ತಿನ್ನು
ರುಚಿಯಾಗಿರುತ್ತದೆ ಎಂದು ಹೇಳಿದ ಬಾಲ್ಯದ ಗೆಳೆಯ,
ಸಿಗಲೇ ಇಲ್ಲ ಮತ್ತೆ,,,,,,
ಈ ಮತ್ತೇರಿಸುವ ನಗರದಲ್ಲಿ,!
ಎತ್ತ ಮರೆಯಾದ ?

ನಾವೆಲ್ಲಾ ಶಾಲೆಯ ಪ್ರವಾಸಕ್ಕೆ ಹೊರಟಾಗ,
ನನಗೆ ಕೊಡಲೆಂದೇ,
ನಾಲ್ಕಾಣೆಯ ಚಾಕಲೇಟನ್ನು ಹಿಡಿದು,
ಬೇಲೂರಿನ ದೇವಾಲಯದ ಬುಡದಲ್ಲಿ
ಕಾಯುತ್ತಿದ್ದ ಗೆಳತೀ,
ಮತ್ತೆ ಇತ್ತೀಚಿಗೆ ಸಿಕ್ಕಿದಾಗ, ಸುಮ್ಮನೆ ಮುಗುಳ್ನಕ್ಕು
ಕೈಬೀಸಿ, ಕಣ್ಣ ಹನಿ ಸುರಿಸಿದ್ದ್ಯಾಕೆ?
ಕಾಡಿರಬಹುದೇ ಆಕೆಗೂ ನೆನಪುಗಳು ?

ಕೆರೆಯಲ್ಲಿ ಈಜುವಾಗ,
ಸಮಚಿತ್ತದಿಂದ ಈಜು,,,,,,,
ನೀರು,,,,, ನಾಯಿಯ ಹಾಗೆ,,,,,,,
ನೀನು ನಿನ್ನದಾಗಿಸಿಕೊಂಡರೆ, ನಿನ್ನನ್ನು ಪ್ರೇಮಿಸಿ ತೇಲಿಸುತ್ತದೆ,
ಇಲ್ಲವಾದರೆ ಕಚ್ಚಿ ಮುಳುಗಿಸುತ್ತದೆ,
ಎಂದು ಹೇಳಿಕೊಟ್ಟ ಚಂದ್ರಣ್ಣ,
ಹೊಟ್ಟೆ ಪಾಡಿಗೆ ಬಾಂಬೆಗೆ ಹೋದವನು ಯಾಕೆ ಬರಲಿಲ್ಲ?

ಶಾಲೆಯ ಬೇಸಿಗೆ ರಜೆಯ ಪ್ರಾರಂಭದಲ್ಲಿ
ಇನ್ನೂ ಎರಡು ತಿಂಗಳು ನಾವು ಮತ್ತೆ ಸಿಗುವುದಿಲ್ಲ ಎಂದು,
ನೀರು ನಿಂತು ಒಣಗಿ ಹೋದ ಕಾಲುವೆಯಲ್ಲಿ ಕುಳಿತು,,,,,,,,
ಆಗತಾನೆ ಬರೆಯಲು ಕಲಿತ ಅಕ್ಷರಗಳಲ್ಲಿ,
ಬೇಸಿಗೆ ರಜೆಯ ಶುಭಾಶಯಗಳು ಮನು, ಕವಿ, ಚೊಟ್ಟ-ಯೋಗಿ,
ಎಂದೆಲ್ಲ ಬರೆದುಕೊಟ್ಟು, ಕಣ್ಣ ಹನಿ ಜಿನುಗಿಸುತ್ತಾ,
ಬೇರೆ ಊರಿನ ಬಸ್ಸು ಹತ್ತುತ್ತಿದ್ದ ಭಾವ,,,,,,
ಎಲ್ಲಿ ಹೋಯಿತು ಈಗ?

ತೆಂಗಿನ ಗರಿಗಳನ್ನು ಹೆಣೆದು,
ಮನೆಮಾಡಿ, ಅಲ್ಲಿಯೇ ಅಂಗಡಿಯನ್ನು ಮಾಡಿ,
ಎಲೆಗಳನ್ನೇ ದುಡ್ಡನ್ನಾಗಿ ಮಾಡಿ,
ಇಷ್ಟ ಬಂದಹಾಗೆ ದುಡ್ಡು ಎಣಿಸಿ ಕೊಟ್ಟು,
ಹಳೆಯ ಚೇರನ್ನೇ ಬಸ್ಸು ಮಾಡಿ,
ಅದರಲ್ಲೇ ಕುಳಿತು, ನಮಗೆ ನಿಲುಕದ ಬಾಂಬೆ, ಡೆಲ್ಲಿ, ಎಲ್ಲ ಕಡೆ ಹೋಗಿ,
ಕ್ಷಣಾರ್ಧದಲ್ಲಿ ಮತ್ತೆ ಅಲ್ಲಿಯೇ ಇಳಿಯುವ,
ಕಲ್ಪನೆಯ ಕಾಲವಧಿ,
ನನ್ನೆಲ್ಲ ಗೆಳೆಯರಿಗೂ ಕಾಡದೆ ಇರದು,

ಮನೆಯ ಹಿತ್ತಲಿನಲ್ಲಿ
ಕಣ್ಣಾಮುಚ್ಚಾಲೆ ಆಡಿ,
ಮರ ಹತ್ತಿ ಜಾರಿ ಬಿದ್ದು,
ಕಾಲಿಗಾದ ಗಾಯಕ್ಕೆ ಮಣ್ಣು ಸುರಿದು,
ಮನೆಯಲ್ಲಿ ಯಾರಿಗೂ ಹೇಳದೆ,
ಗುಣಪಡಿಸಿಕೊಂಡ ದಿನಗಳು,,,,,,
ಈಗ ಗಾಯಗಳಂತೆ ಕಾಡುತ್ತಿವೆ,

ಬಾಲ್ಯದ ಸ್ವಚ್ಚಂದ ಬದುಕನ್ನು ನೆನೆವಾಗ ನನಗೆ ಅನಿಸುವುದು,
ಈಗ
ಬೇಕಾ ನಮಗೇ ಈ ಆಡಂಬರದ ಡಾಂಭಿಕತನ?
ರೇಸುಕುದುರೆಯಂತೆ ದಿನವೂ ಓಡುತ್ತಾ,
ಕೊನೆಯಿಲ್ಲ, ಮೊದಲಿಲ್ಲ,,,,,,,
ಎಲ್ಲಿಯೂ ನಮ್ಮ ಕುರುಹಿಲ್ಲ,,,,,,
ಬದುಕಿದ್ದುದ್ದಕ್ಕೆ ಸಾಕ್ಷಿಯೇ ಇಲ್ಲ,,,,,,,,
ಕಾಲಿಗೆ ಮಣ್ಣು ತಾಕುವುದಿಲ್ಲ,,,,,,,
ಹೃದಯದಲ್ಲಿ ಪ್ರೇಮದ ಸುಳಿವೇ ಇಲ್ಲ,,,,,,,,,
ಬರಿ ದೊಂಬರಾಟ,,,,,,,
ಕಾಸಿನ ಗಾಳ,,,,,,,

ಸಾಕಾಯ್ತು,
ಹೊರಹೋಗುತ್ತೇನೆ, ಮತ್ತೆ ನನ್ನದೇ ಲೋಕಕ್ಕೆ,
ನಾನೇ ಎಂದುಕೊಂಡಂತೆ ಬದುಕುತ್ತೇನೆ,,,,,,,
ಸಹ್ಯಾದ್ರಿಯ ತಪ್ಪಲಲ್ಲಿ, ಗಿರಿ ತೊರೆಗಳ ಲೋಕದಲ್ಲಿ,,,,,,,,
ನನ್ನ ಆಲೋಚನೆ ಬಿಟ್ಟು, ಮತ್ಯಾವುದೂ ಬಾಧಿಸಬಾರದು ನನ್ನಾತ್ಮವನ್ನು,,,,,,,,,,,
ಅಂತರಾತ್ಮ ಅದಕ್ಕೆ ಜೀವಂತ,,,,,,,,

-GKN

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153