ಮಂಜುನಾಥ್ ಶೆಟ್ಟಿ…

ಶಿವಮೊಗ್ಗ: ಸದಾ ಶೈಕ್ಷಣಿಕ ಒತ್ತಡದಲ್ಲಿದ್ದ ವಿದ್ಯಾರ್ಥಿಗಳು ಸಂಚಾರಿ ಪೊಲೀಸರಾಗಿ ಬದಲಾಗಿದ್ದರು. ವಿವಿಧ‌ ವೃತ್ತಗಳಿಗೆ ತೆರಳಿ ಸಂಚಾರಿ ನಿಯಂತ್ರಣಕ್ಕಾಗಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಶ್ರಮಿಸಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ರಾಷ್ಟ್ರೀಯ ಶಿಕ್ಷಣ ಸಮಿತಿ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಕಮಲಾ ನೆಹರು ಮಹಿಳಾ‌ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 37 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ – 2026 ಅಂಗವಾಗಿ ಸರಣಿ ಕಾನೂನು ಅರಿವು ಕಾರ್ಯಕ್ರಮ ಇಂತಹ ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು.

ಎ.ಟಿ.ಎನ್.ಸಿ.ಸಿ ಹಾಗೂ ಕಮಲಾ‌ ನೆಹರು ಕಾಲೇಜಿನ ಎನ್.ಸಿ.ಸಿ ಹಾಗೂ ರೇಂಜರ್ಸ್ ರೋವರ್ಸ್ ವಿದ್ಯಾರ್ಥಿಗಳು ಸಂಚಾರಿ ಪೊಲೀಸರಾಗಿ ವೃತ್ತ ಮಧ್ಯೆ ನಿಂತು ಕೈ ಸಂಕೇತಗಳನ್ನು ತೋರಿಸುತ್ತ ಸಂಚಾರ ದಟ್ಟಣೆ ನಿಯಂತ್ರಿಸಿದರು. ಬಿತ್ತಿ ಪತ್ರಗಳನ್ನು ಹಿಡಿದು ವಾಹನ ಸವಾರರಲ್ಲಿ ಜಾಗೃತಿ ಮೂಡಿಸಿದರು. ವೃತ್ತದಲ್ಲಿ ಜೀಬ್ರಾ ಲೈನ್ ದಾಟಿದ ಸವಾರರಿಗೆ, ವೃತ್ತದಲ್ಲಿ ಸರಿಯಾಗಿ ನಿಲ್ಲುವ ಬಗೆ ವಿವರಿಸುತ್ತಾ, ಅವಸರವೇ ಅಪಘಾತಕ್ಕೆ ಕಾರಣವೆಂದು ತಿಳಿಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ಎಸ್.ಸಂತೋಷ್ ಮಾತನಾಡಿ, 8 ನೇ ತರಗತಿಯಲ್ಲಿ ಸ್ಕೌಟ್ಸ್ ಮೂಲಕ ಸಂಚಾರಿ ಪೊಲೀಸರೊಂದಿಗೆ ಕೆಲ ಸಮಯ ಕಾರ್ಯನಿರ್ವಹಿಸುವ ಅವಕಾಶ ದೊರಕಿತ್ತು. ಅದು ಸಂಚಾರಿ ನಿಯಮದ ಬಗ್ಗೆ ನಮ್ಮೊಳಗೆ ಅದ್ಭುತವಾದ ಜಾಗೃತಿ ಮೂಡಿಸಿತ್ತು. ಅಂತಹ ಸಂದರ್ಭವನ್ನು, ಇಂದಿನ ವಿದ್ಯಾರ್ಥಿಗಳ ಮೂಲಕ ಪುನರ್ ಪ್ರಯೋಗ ಮಾಡುವ ಕಾರ್ಯದಲ್ಲಿ ನಿರತರಾಗಿದ್ದೇವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕನಿಷ್ಟ ಮೂರು ಸಾವಿರ ಅಪಘಾತಗಳಾಗುತ್ತಿವೆ. ಬಲಿಯಾದವರಲ್ಲಿ ಯುವ ಸಮೂಹದ ಸಂಖ್ಯೆಯೆ ಹೆಚ್ಚು. ಹಾಗಾಗಿಯೇ ಜಾಗೃತವಾದ ನಡೆ ನಿಮ್ಮದಾಗಲಿ. ಅಪಘಾತವಾದ ಕೂಡಲೇ ಗಾಯಳುವನ್ನು ಆಸ್ಪತ್ರೆಗೆ ಸೇರಿಸಿ. ಕೂಡಲೇ ಪೊಲೀಸ್ ಇಲಾಖೆ ವಿಷಯ ತಿಳಿಸಿ. ಆಸ್ಪತ್ರೆಗೆ ಗಾಯಾಳುವನ್ನು ಸೇರಿಸಿದ ವ್ಯಕ್ತಿಗೆ, ವೈದ್ಯರು ನೀಡುವ ಪ್ರಮಾಣ ಪತ್ರವನ್ನು ಪಡೆದು, ಜೋಪಾನ ಮಾಡಿ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಸಂಚಾರಿ ಪೊಲೀಸರು ಬಿಸಿಲು ಮಳೆ ಲೆಕ್ಕಿಸದೆ ಜನರನ್ನು ಸುರಕ್ಷಿತವಾಗಿಡುವ ಕಾರ್ಯ ನಡೆಸುತ್ತಿದ್ದಾರೆ. ಕಾನೂನು ಉಲ್ಲಂಘನೆ ಎಂಬುದು ಯುವ ಸಮೂಹದಲ್ಲಿ, ಒಂದು ರೀತಿಯ ಆಕರ್ಷಣಿಯ ಮನೋಭಾವವಾಗಿ ಕಾಡುತ್ತಿದೆ‌. ರಸ್ತೆ ಸುರಕ್ಷತಾ ಕಾನೂನುಗಳನ್ನು ಅನುಸರಿಸುವುದು ಮೂಲಭೂತ ಕರ್ತವ್ಯವಾಗಬೇಕು. ಆಗ ಮಾತ್ರ ಬದುಕಿನಲ್ಲಿ ಬದಲಾವಣೆ ಸಾಧ್ಯ ಎಂದು ಹೇಳಿದರು.

ಸಂಚಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದೇವರಾಜ್ ಮಾತನಾಡಿ, ಶಿವಮೊಗ್ಗ ನಗರದಲ್ಲಿಯೇ 3 ಲಕ್ಷಕ್ಕೂ ಹೆಚ್ಚು ವಿವಿಧ ಬಗೆಯ ವಾಹನಗಳಿವೆ. ಇಂಟಲಿಜೆನ್ಸ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಸಹಾಯದಿಂದ, ನಮ್ಮ ಕಂಟ್ರೋಲ್ ರೂಂ ಮೂಲಕವೇ ನಗರದಲ್ಲಿ ನಡೆಯುವ ಪ್ರತಿಯೊಂದು ಸಂಚಾರಿ ಕಾನೂನು ಉಲ್ಲಂಘನೆಗಳ ಮೇಲೆ ತೀವ್ರ ನಿಗಾ ಇಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಐದು ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಾದಲ್ಲಿ, ಡಿಎಲ್ ರದ್ದು ಪಡಿಸುವಂತಹ ಕಾನೂನು ಅನುಷ್ಟಾನಗೊಳ್ಳಲಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ವಕೀಲೆ ಸಾದ್ವಿ ಕಾಮತ್, ಮಾತನಾಡಿದರು. ಎ.ಟಿ.ಎನ್.ಸಿ ಕಾಲೇಜಿನ ವಿಶೇಷ ಕರ್ತವ್ಯಾಧಿಕಾರಿ ಡಾ.ಆರ್.ಎಂ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ವಿ.ಎಚ್.ಮುನೇಶಪ್ಪ ಮತ್ತು ಸಾಮಾಜಿಕ ಜಾಲತಾಣದ ಮುಖ್ಯಸ್ಥರದ ನೃಪತುಂಗ ಸಂಚಾರ ನಿಯಂತ್ರಣಕ್ಕಾಗಿ ಪೋಲಿಸರು ಬಳಸುವ ವಿವಿಧ ಕೈ ಸಂಕೇತಗಳ ಪ್ರಾತ್ಯಕ್ಷಿಕೆ ನೀಡಿದರು.

Leave a Reply

Your email address will not be published. Required fields are marked *