ಮಂಜುನಾಥ್ ಶೆಟ್ಟಿ…

ಕೆಎಫ್‌ಡಿ ಕುರಿತು ಸ್ಥಳೀಯ ಜನರಲ್ಲಿ ಅರಿವು ಮೂಡಿಸುವುದು ಹಾಗೂ ಯಾವುದೇ ರೀತಿಯ ಜ್ವರಕ್ಕೆ ಶೀಘ್ರ ಚಿಕಿತ್ಸೆ ನೀಡುವುದು ಸೇರಿದಂತೆ ಪರಿಣಾಮಕಾರಿಯಾದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಎಫ್‌ಡಿ ರೋಗವನ್ನು ಹರಡುವ ಉಣ್ಣೆಗಳು ನವೆಂಬರ್ ಯಿಂದ ಮೇ ವರೆಗೆ ಸಕ್ರಿಯವಾಗಿರುತ್ತವೆ. ಹಾಗೂ ಜನವರಿಯಿಂದ ಮಾರ್ಚ್ವರೆಗೆ ರೋಗ ಹರಡುವ ಅವಧಿಯಾಗಿರುವ ಕಾರಣ ಸಾಗರ, ಸೊರಬ, ಹೊಸನಗರ ಮತ್ತು ತೀರ್ಥಹಳ್ಳಿ ಭಾಗದಲ್ಲಿ ಜನರು ಸಾಕಷ್ಟು ಎಚ್ಚರಿಕೆ ವಹಿಸಬೇಕು. ತೋಟಕ್ಕೆ, ಕಾಡಿಗೆ ಹೋಗುವ ಜನರು ಅತ್ಯಂತ ಜಾಗರೂಕತೆಯಿಂದ ಇರಬೇಕು. ಡೇಪಾ ಎಣ್ಣೆಯನ್ನು ಲೇಪನ ಮಾಡಿಕೊಳ್ಳಬೇಕು ಹಾಗೂ ಜಾನುವಾರುಗಳಿಗೆ ಡೇಪಾ ತೈಲವನ್ನು ಲೇಪನ ಮಾಡಬೇಕೆಂದು ತಿಳಿಸಿದರು.
ಮಲೆನಾಡಿನ ಭಾಗದಲ್ಲಿ, ವಿಶೇಷವಾಗಿ ಮಂಗ ಸತ್ತಿರುವ ಹಾಟ್‌ಸ್ಟಾಟ್‌ಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಯಾವುದೇ ಜ್ವರ ಪ್ರಕರಣಗಳನ್ನು ಶೀಘ್ರವಾಗಿ ಪರಿಗಣಿಸಿ ಚಿಕಿತ್ಸೆ ನೀಡಬೇಕು. ಜ್ವರ ಸರ್ವೇ ಮಾಡಬೇಕು. ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ 10 ಪ್ರತ್ಯೇಕ ಬೆಡ್‌ಗಳನ್ನು ಮೀಸಲಿಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಳಿಗೆ ಸೂಚನೆ ನೀಡಿದರು.
ಜನರು ಎಚ್ಚರಿಕೆಯಿಂದ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಆರೋಗ್ಯ ಇಲಾಖೆ, ಪಶುಪಾಲನೆ ಮತ್ತು ಪಶುವೈದ್ಯಕೀಯ, ಅರಣ್ಯ, ಆರ್‌ಡಿಪಿಆರ್ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯ ಸಾಧಿಸಿ ಕೆಎಫ್‌ಡಿ ಹರಡದಂತೆ ಕ್ರಮಗಳನ್ನು ಕೈಗೊಳ್ಳಬೇಕು. ಈ ಭಾಗಗಳಲ್ಲಿ ಮಾಹಿತಿ, ಶಿಕ್ಷಣ, ಸಂವಹನ ಚಟುವಟಿಕೆಗಳನ್ನು ಹೆಚ್ಚಿಸಬೇಕು ಎಂದು ಸೂಚನೆ ನೀಡಿದರು.
ಜಿ.ಪಂ ಸಿಇಓ ಮಾತನಾಡಿ, ಜಾನುವಾರುಗಳಿಂದ ಕೆಎಫ್‌ಡಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಜಾನುವಾರುಗಳಿಗೆ ಲಸಿಕೆ ನೀಡಬೇಕು. ದಾಸ್ತಾನು ಇಲ್ಲದಿದ್ದರೆ ಈ ತಕ್ಷಣ ಲಸಿಕೆ ತರಿಸಿಕೊಳ್ಳಬೇಕು. ಜಾನುವಾರುಗಳಿಗೆ ಎರಡು ಡೋಸ್ ಲಸಿಕೆಗಳನ್ನು ನೀಡಬೇಕು. ಡೇಪಾ ಎಣ್ಣೆಯನ್ನು ಜಾನುವಾರುಗಳಿಗೆ ಲೇಪನ ಮಾಡಲು ನೀಡಬೇಕು ಮತ್ತು ತೋಟಕ್ಕೆ, ಹೊರಗೆ ಕೆಲಸಕ್ಕೆ ಹಾಗೂ ಕಾಡಿಗೆ ಹೋಗುವ ಜನರಿಗೆ ನೀಡಬೇಕು ಎಂದು ಸೂಚನೆ ನೀಡಿದರು.
ಡಿಎಸ್‌ಓ ಡಾ.ನಾಗರಾಜ ನಾಯ್ಕ್ ಮಾತನಾಡಿ, ಕೆಎಫ್‌ಡಿ ಪ್ರಕರಣ ಪತ್ತೆಗಾಗಿ ಜಿಲ್ಲೆಯಲ್ಲಿ ಇಲ್ಲಿಯರೆಗೆ 5202 ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿದ್ದು, 59 ಪಾಸಿಟಿವ್ ಬಂದಿದೆ. 01 ಮರಣ ಸಂಭವಿಸಿದೆ. 457 ಟಿಕ್ ಸಂಗ್ರಹಿಸಿದ್ದು, ಯಾವುದೇ ಪಾಸಿಟಿವ್ ಪ್ರಕರಣ ಬಂದಿರುವುದಿಲ್ಲ. 114 ಮಂಗಗಳ ಸಾವು ಸಂಭವಿಸಿದ್ದು ಮಂಗ ಅಟಾಪ್ಸಿಯಲ್ಲಿ 31 ಪಾಸಿಟಿವ್ ಬಂದಿದ್ದು, ಮಂಗಗಳ ಸಾವು ಸಂಭAವಿಸಿದ ಸುತ್ತಮುತ್ತಲಿನ ಪ್ರದೇಶವನ್ನು ಹಾಟ್‌ಸ್ಪಾಟ್ ಎಂದು ಗುರುತಿಸಿ, ಇಲ್ಲಿ ರಾಸಾಯನಿಕಗಳನ್ನು ಸಿಂಪಡಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೈರಿಸ್ಕ್ ಪ್ರದೇಶಗಳಲ್ಲಿ ಟಿಕ್ ಕಲೆಕ್ಷನ್ ಮಾಡಲಾಗುತ್ತಿದೆ ಎಂದರು.
ನಾಯಿ ಕಡಿತ-ಶೀಘ್ರ ಚಿಕಿತ್ಸೆ ಅಗತ್ಯ…
ನಾಯಿ ಕಡಿತದಿಂದ ಉಂಟಾಗುವ ರೇಬಿಸ್ ಕಾಯಿಲೆ ಮಾರಣಾಂತಿಕವಾಗಿದ್ದು, ರೇಬಿಸ್ ಬಂದ ನಂತರ ಇದಕ್ಕೆ ಚಿಕಿತ್ಸೆ ಇಲ್ಲ. ಆದ್ದರಿಂದ ನಾಯಿ ಕಚ್ಚಿದ ತಕ್ಷಣ ಚಿಕಿತ್ಸೆ ಪಡೆಯಬೇಕು. ಕಡ್ಡಾಯವಾಗಿ ಆಂಟಿ ರೇಬಿಸ್ ಚುಚ್ಚುಮದ್ದು ಪಡೆಯಬೇಕು. ರೇಬಿಸ್ ಚಿಕಿತ್ಸೆಯನ್ನು ಯಾವುದೇ ಕಾರಣಕ್ಕೂ ಮಧ್ಯದಲ್ಲಿ ನಿಲ್ಲಿಸಬಾರದು.
ಮನೆ ಮಾಲೀಕರು ಮನೆಯಲ್ಲಿನ ನಾಯಿಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳು, ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಸೇರಿದಂತೆ ಸಂಬAಧಿಸಿದ ಇಲಾಖೆಗಳು ಬೀದಿ ನಾಯಿಗಳಿಗೆ ಆಂಟಿ ರೇಬಿಸ್ ಚುಚ್ಚುಮದ್ದು ನೀಡಲು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಕಚೇರಿಗಳು, ವಿವಿಧ ಸಂಸ್ಥೆಗಳ ಆವರಣಗಳಲ್ಲಿನ ನಾಯಿಗಳನ್ನು ನಿಯಮಾನುಸಾರ ಒಂದು ಬಾರಿ ಶಿಫ್ಟ್ ಮಾಡಿಸಿ ಶೆಲ್ಟರ್ ಕೇರ್ ತೆಗೆದುಕೊಳ್ಳಲು ಕ್ರಮ ವಹಿಸಬೇಕು. ಬೀದಿ ನಾಯಿಗಳ ನಿಯಂತ್ರಣಕ್ಕೆ ಪಾಲಿಕೆಯಿಂದ ಸೂಕ್ತ ಕ್ರಮದೊಂದಿಗೆ, ಶಾಲೆಗಳು, ಹೋಟೆಲ್‌ಗಳು, ಬೀದಿ ಬದಿ ತಿಂಡಿ ಅಂಗಡಿಗಳು ಉಳಿದ/ತ್ಯಾಜ್ಯ ಆಹಾರವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದರು.ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 3906 ನಾಯಿ ಕಡಿತ ಪ್ರಕರಣ ದಾಖಲಾಗಿದ್ದು ಯಾವುದೇ ಸಾವು ಸಂಭವಿಸಿರುವುದಿಲ್ಲ ಎಂದರು.
ಹಾವು ಕಡಿತ-ಅರಿವು ಅಗತ್ಯ…
ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 47 ಜನರು ಹಾವು ಕಡಿತಕ್ಕೆ ಒಳಗಾಗಿದ್ದು ಯಾವುದೇ ಸಾವು ಸಂಭವಿಸಿಲ್ಲ. ಎಲ್ಲ ಆಸ್ಪತ್ರಗಳಲ್ಲಿ ಹಾವು ಕಡಿತಕ್ಕೆ ಚಿಕತ್ಸೆಗೆ ಅಗತ್ಯವಾದ ಔಷಧಗಳನ್ನು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಹಾಗೂ ಹಾವು ಕಚ್ಚಿದ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸಬೇಕು ಎಂದರು.
ಡಿಎಸ್‌ಓ ಡಾ.ನಾಗರಾಜ ನಾಯ್ಕ್ ಮಾತನಾಡಿ, ನಾಯಿ ಕಚ್ಚಿದ ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಅದಕ್ಕೂ ಮುನ್ನ ಗಾಯವನ್ನು ಸೋಪು ಹಾಕಿ ಹರಿಯುವ ನೀರಿನಿಂದ 15 ನಿಮಿಷ ತೊಳೆಯಬೇಕು. ರೇಬಿಸ್ ನಿರೋಧಕ ಚುಚ್ಚುಮದ್ದು ಮತ್ತು ಆರ್‌ಐಜಿ ಯನ್ನು ಕಡ್ಡಾಯವಾಗಿ ಪಡೆಯಬೇಕು.
ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಸಮಾಧಾನಪಡಿಸಿ, ಎಡಭಾಗಕ್ಕೆ ಮಲಗಿಸಿ, ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕು. ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು.
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸೂಚನೆ…
ಸಾಂಕ್ರಾಮಿಕ ರೋಗಗಳಾದ ಟೈಫಾಯ್ಡ್, ವೈರಲ್ ಹೆಪಟೈಟಿಸ್, ಕ್ಷಯ, ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯದಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾದ ಅಂಶಗಳನ್ನು ಗುರುತಿಸಿ, ಆರಂಭದಲ್ಲಿಯೇ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಶುದ್ದ ಕುಡಿಯುವ ನೀರು ಮತ್ತು ಮನೆ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ್‌ಗಳನ್ನು ಕಾಲ ಕಾಲಕ್ಕೆ ಸ್ವಚ್ಚಗೊಳಿಸಿ ಸಮರ್ಪಕವಾಗಿ ಕ್ಲೋರಿನೀಕರಣ ಮಾಡಬೇಂದು ಡಿಸಿ ಸೂಚನೆ ನೀಡಿದರು.
ಏಡ್ಸ್ ನಿಯಂತ್ರಣ-ಗುರಿ ತಲುಪಲು ಸೂಚನೆ…
ನ್ಯಾಷನಲ್ ಪ್ರೊಗ್ರಾಂ ಫಾರ್ ಏಡ್ಸ್ ಕಂಟ್ರೋಲ್ ಕಾರ್ಯಕ್ರಮದಡಿ 2026 ರ ಡಿಸೆಂಬರ್ 1 ರ ವಿಶ್ವ ಏಡ್ ದಿನಕ್ಕೆ 95 95 99 ರ ಗುರಿ ನೀಡಲಾಗಿದೆ. ಅಂದರೆ ಸಮಾಜದಲ್ಲಿನ ಶೇ.95 ರಷ್ಟು ಹೆಚ್‌ಐಐ ರೋಗಿಗಳನ್ನು ಪತ್ತೆ ಮಾಡಬೇಕು. ಹಾಗೂ ಪತ್ತೆಯಾದವರಲ್ಲಿ ಶೇ.95 ರಷ್ಟು ಜನರಿಗೆ ಚಿಕಿತ್ಸೆ ನಿಡಬೇಕು. ಹೀಗೆ ಮಾಡುವುದರಿಂದ ಶೇ. 99 ಜನರಲ್ಲಿ ವೈರಲ್ ಲೋಡ್ ಕಡಿಮೆಯಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಮೂಲಕ 2026 ರ ಡಿಸೆಂಬರ್‌ಗೆ ಈ ಗುರಿಯನ್ನು ತಲುಪಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಕಿರಣ್ ಮಾತನಾಡಿ, ಜಿಲ್ಲೆಯಲ್ಲಿ 2025 ರ ಏಪ್ರಿಲ್ ಮಾಹೆಯಿಂದ 2026 ರ ಫೆಬ್ರವರಿವರೆಗೆ 257 ಹೆಚ್‌ಐವಿ ಪ್ರಕರಣಗಳು ದಾಖಲಾಗಿದ್ದು, 230 ಜನರಿಗೆ ಎಆರ್‌ಟಿ ಚಿಕಿತ್ಸೆ ನೀಡಲಾಗುತ್ತಿದ್ದು, 14 ಜನ ಮರಣ ಹೊಂದಿರುತ್ತಾರೆ. ಇನ್ನುಳಿದವರ ಚಿಕಿತ್ಸೆಗೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಓ, ತಾಯಿ ಮರಣ ಪರಿಶೋಧನಾ(ಡೆಟ್ ಆಡಿಟ್) ಸಮಿತಿ ಸಭೆ ನಡೆಸಿ, ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಡಿಹೆಚ್‌ಓ ಡಾ.ನಟರಾಜ್, ಆರ್‌ಸಿಹೆಚ್ ಅಧಿಕಾರಿ ಡಾ.ಓ.ಮಲ್ಲಪ್ಪ, ಡಿಎಲ್‌ಓ ಡಾ.ಕಿರಣ್, ಡಾ.ಗುಡುದಪ್ಪ, ಡಾ.ಹರ್ಷವರ್ದನ್, ತಾಲ್ಲೂಕು ವೈದ್ಯಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಾಜರಿದ್ದರು.