ಮಂಜುನಾಥ ಶೆಟ್ಟಿ…

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜುಲೈ 17 ರಂದು ಇನ್ಸ್ಪೈರ್(Inspire’) ಇಗ್ನೈಟ್ ಮೈಂಡ್ ಅಂಡ್ ಇಗ್ನೈಟ್ ಪಾಸಿಟಿವಿಟಿ ಎಂಬ ಘೋಷವಾಕ್ಯದೊಂದಿಗೆ ವಿನೂತನ ಆನ್‌ಲೈನ್ ಪಾಡ್‌ಕಾಸ್ಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಈ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾಲ್ಕು ಕಲ್ಯಾಣ ಇಲಾಖೆಗಳ 114 ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿ ನಿಲಯಗಳ ಸುಮಾರು 9,235 ಪಿಯುಸಿ, ಪದವಿ, ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಡಿಯೋ ಸಂವಾದದ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಶಾಂತಪ್ಪ ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕುರಿತು ಹಲವು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.


ಪದವಿ ಹಂತದಲ್ಲೇ ಸಿದ್ಧತೆ: ವಿದ್ಯಾರ್ಥಿಗಳು ಪ್ರಥಮ ಪದವಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವುದರಿಂದ ಆಗುವ ಪ್ರಯೋಜನಗಳನ್ನು ವಿವರಿಸಿದರು.
ದೀರ್ಘಕಾಲದವರೆಗೆ ಓದುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಕೊರತೆ ಉಂಟಾಗುತ್ತದೆ. ಆದ್ದರಿಂದ ಕನಿಷ್ಠ 3 ಗಂಟೆಯ ನಂತರ ಸ್ವಲ್ಪ ವಿರಾಮ ತಗೆದುಕೊಂಡು ಓದುವುದರ ಅಗತ್ಯತೆಯನ್ನು ತಿಳಿಸಿದರು.
ಗುಂಪು ಅಧ್ಯಯನ ಹಾಗೂ ತರಬೇತಿ: ಗ್ರೂಪ್ ಸ್ಟಡಿ (ಗುಂಪು ಅಧ್ಯಯನ) ಮತ್ತು ಆನ್‌ಲೈನ್ ಕೋಚಿಂಗ್‌ನ ಮಹತ್ವ, ಬ್ಯಾಂಕಿಂಗ್ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.


ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ನಡವಳಿಕೆ ಮತ್ತು ಶಿಸ್ತುಪಾಲನೆ ಹೇಗಿರಬೇಕು, ನೆಗೆಟಿವ್ ಮಾರ್ಕಿಂಗ್ ಇರುವ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸುವುದು ಹೇಗೆ ಮತ್ತು ಆತ್ಮವಿಶ್ವಾಸವನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.


ಜೊತೆಗೆ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳು ಹಾಗೂ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಳಸಿಕೊಳ್ಳುವ ವಿಧಾನಗಳ ಬಗ್ಗೆಯೂ ಈ ಕಾರ್ಯಕ್ರಮದಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
ಈ ವಿಶೇಷ ಆನ್‌ಲೈನ್ ಪಾಡ್‌ಕಾಸ್ಟ್ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎನ್ ಹೇಮಂತ್ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ ಎಸ್. ಜಿ., ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಲ್ಲೇಶಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಶೋಭಾ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ರಾಘವೇಂದ್ರ ಅವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

Leave a Reply

Your email address will not be published. Required fields are marked *