ಮಂಜುನಾಥ ಶೆಟ್ಟಿ…

ಯಾವುದೇ ಪೂರ್ವ ನೋಟೀಸ್ ನೀಡದೆ ಕಾನೂನುಬಾಹಿರವಾಗಿ ಜೆಸಿಬಿ ಯಂತ್ರವನ್ನು ಜಪ್ತಿ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದ ಎಚ್.ಡಿ.ಬಿ ಫೈನಾನ್ಸ್ ಸರ್ವೀಸಸ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸೂಕ್ತ ಆದೇಶ ಹಾಗೂ ದಂಡ ವಿಧಿಸಿದೆ.


ಸೊರಬ ತಾಲೂಕಿನ ಬೆನ್ನೂರು ಗ್ರಾಮದ ಮಂಜಪ್ಪ ಕೆ. ಎಂಬುವರು ಎಚ್.ಡಿ.ಬಿ ಫೈನಾನ್ಸ್ ಸರ್ವೀಸಸ್‌ನಿಂದ ರೂ.31,67,455/- ಸಾಲ ಪಡೆದು ಜೆಸಿಬಿ ಖರೀದಿಸಿದ್ದರು. ಪ್ರತಿ ತಿಂಗಳು ರೂ.71,500/- ಕಂತು ಪಾವತಿಸಬೇಕಿದ್ದು, ಪ್ರತಿ ತಿಂಗಳೂ ಸರಿಯಾಗಿ ಪಾವತಿಸುತ್ತಿದ್ದರು. ಆದರೆ, ಅಧಿಕ ಮಳೆ ಹಾಗೂ ಜೆಸಿಬಿ ರಿಪೇರಿ ಕಾರಣದಿಂದ 3 ತಿಂಗಳ ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ.


ಯಾವುದೇ ಮುನ್ಸೂಚನೆ ಅಥವಾ ನೋಟೀಸ್ ನೀಡದೆ, 2025ರ ಆಗಸ್ಟ್ 6ರಂದು ಫೈನಾನ್ಸ್ ಸಂಸ್ಥೆಯವರು ಬಲವಂತವಾಗಿ ಜೆಸಿಬಿ ಯನ್ನು ವಶಪಡಿಸಿಕೊಂಡಿದ್ದರು. ನಂತರ ದೂರುದಾರರು ರೂ.1,00,000/- ಹಣ ಪಾವತಿಸಿ ಯಂತ್ರವನ್ನು ಹಿಂತಿರುಗಿಸುವಂತೆ ಕೋರಿದರೂ ಫೈನಾನ್ಸ್‌ನವರು ಸಂಪೂರ್ಣ ಸಾಲದ ಮೊತ್ತ ಪಾವತಿಸುವಂತೆ ಪಟ್ಟು ಹಿಡಿದಿದ್ದರು. ಇದರಿಂದ ನೊಂದ ದೂರುದಾರರು ವಕೀಲರ ಮೂಲಕ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.


ತೀರ್ಪು…

ದೂರುದಾರರು ಮತ್ತು ಎದುರುದಾರರ ವಾದ-ವಿವಾದಗಳನ್ನು ಆಲಿಸಿದ ಜಿಲ್ಲಾ ಗ್ರಾಹಕರ ಆಯೋಗವು, ಆರ್‌ಬಿಐ ನಿಯಮಗಳು ಹಾಗೂ ಉಚ್ಚ ನ್ಯಾಯಾಲಯ/ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಫೈನಾನ್ಸ್ ಕಂಪನಿಯು ಸೇವಾ ನ್ಯೂನ್ಯತೆ ಎಸಗಿದೆ ಎಂದು ತೀರ್ಮಾನಿಸಿದೆ.
ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯರವರನ್ನೊಳಗೊಂಡ ಪೀಠವು ಈ ಆದೇಶ ನೀಡಿದ್ದು, ಆದೇಶವಾದ 45 ದಿನಗಳ ಒಳಗೆ ಫೈನಾನ್ಸ್ ಕಂಪನಿಯು ದೂರುದಾರರಿಗೆ ಜೆಸಿಬಿ ಯನ್ನು ಹಿಂತಿರುಗಿಸಬೇಕು.


45 ದಿನಗಳ ನಂತರ ಜೆಸಿಬಿ ನೀಡುವವರೆಗೆ, ವಿಳಂಬವಾಗುವ ಪ್ರತಿದಿನಕ್ಕೆ ರೂ.2,000/- ಗಳಂತೆ ದೂರುದಾರರಿಗೆ ಪಾವತಿಸಬೇಕು.
ದೂರುದಾರರಿಗೆ ಆದ ನಷ್ಟಕ್ಕೆ ಪರಿಹಾರವಾಗಿ ರೂ.10,000/- ಹಾಗೂ ದೂರಿನ ವೆಚ್ಚವನ್ನು 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದ್ದಲ್ಲಿ ವಾರ್ಷಿಕ ಶೇ. 12ರ ಬಡ್ಡಿಯನ್ನು ನೀಡಬೇಕಾಗುತ್ತದೆ ಎಂದು ಆದೇಶಿಸಿದೆ.

Leave a Reply

Your email address will not be published. Required fields are marked *