ಮಂಜುನಾಥ್ ಶೆಟ್ಟಿ…

ವಿಶ್ವದ ಬಹುನಿರೀಕ್ಷಿತ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರ ಮತ್ತು ಬಿಗ್ ಸಿನಿಮಾಸ್ ನಲ್ಲಿ ತೆರೆಗೆ ಬಂದಿದ್ದು ಅಭಿಮಾನಿಗಳು ಮತ್ತು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.ಚಿತ್ರದ ಮೊದಲಾರ್ಧವೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಗೋವಾದ ಅಂಡರ್‌ವರ್ಲ್ಡ್, ಕುಟುಂಬದ ದ್ವೇಷ, ಹಿಂಸೆ, ಪ್ರತೀಕಾರ ಮತ್ತು ತಂದೆ-ಮಕ್ಕಳ ನಡುವಿನ ಸಂಘರ್ಷವನ್ನು ಕೇಂದ್ರವಾಗಿಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ.

ಚಿತ್ರದ ಆರಂಭವೇ ಗೋವಾದ ವಾತಾವರಣದೊಂದಿಗೆ ತೆರೆದುಕೊಳ್ಳುತ್ತದೆ. ಕಿಯಾರಾ ಅಡ್ವಾಣಿ ಪಾತ್ರದ ಎಂಟ್ರಿ ಹಾಗೂ ನಂತರ ಯಶ್ ಅವರ ‘ರಾಯ’ ಪಾತ್ರದ ಪರಿಚಯ ಸಿನಿಮಾ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಕುತೂಹಲ ಮೂಡಿಸುತ್ತದೆ. ಫರ್ನಾಂಡಿಸ್ ಕುಟುಂಬದ ಸಂಘರ್ಷ, ಕೊಲೆ ಮತ್ತು ಅದರ ಹಿಂದಿನ ರಹಸ್ಯಗಳು ಕಥೆಗೆ ಮತ್ತಷ್ಟು ತಿರುವು ನೀಡುತ್ತವೆ.

ಯಶ್ ಅವರ ರಾಯ ಪಾತ್ರಕ್ಕೆ ವಿಭಿನ್ನವಾದ ಸ್ವಾಗ್ ಇದೆ. ಆಕ್ಷನ್ ದೃಶ್ಯಗಳಲ್ಲಿ ಅವರ ಮ್ಯಾನರಿಸಂ, ಬಾಡಿ ಲಾಂಗ್ವೇಜ್ ಹಾಗೂ ಸಂಭಾಷಣೆಗಳು ಅಭಿಮಾನಿಗಳಿಗೆ ಪ್ರಮುಖ ಹೈಲೈಟ್ ಆಗಿವೆ. ಚಿತ್ರದ ಬಹುತೇಕ ಪ್ರಮುಖ ಕ್ಷಣಗಳಲ್ಲಿ ಗನ್‌ಶಾಟ್, ಬಾಂಬ್ ಸ್ಫೋಟ ಹಾಗೂ ಹಿಂಸಾತ್ಮಕ ದೃಶ್ಯಗಳು ಕಾಣಿಸಿಕೊಳ್ಳುತ್ತವೆ.

ನಯನತಾರಾ ನಿರ್ವಹಿಸಿರುವ ಗಂಗಾ ಪಾತ್ರ ಕೂಡ ಕಥೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ತಾಯಿಯ ಪಾತ್ರದ ಮೂಲಕ ಭಾವನಾತ್ಮಕ ಸಂಘರ್ಷವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ಕಾಣುತ್ತದೆ. ‘ಕೆಜಿಎಫ್’ನಲ್ಲಿ ತಾಯಿಯ ಭಾವನೆ ಪ್ರಮುಖ ಅಂಶವಾಗಿದ್ದಂತೆ, ‘ಟಾಕ್ಸಿಕ್’ನಲ್ಲೂ ತಾಯಿ-ಮಗನ ಸಂಬಂಧ ಕಥೆಯ ಪ್ರಮುಖ ಭಾಗವಾಗಿರುವುದು ಗಮನ ಸೆಳೆಯುತ್ತದೆ.

ರೆಬೆಕಾ ಪಾತ್ರದಲ್ಲಿ ತಾರಾ ಸುತಾರಿಯಾ ಕಾಣಿಸಿಕೊಂಡಿದ್ದು, ರುಕ್ಮಿಣಿ ವಸಂತ್ ಅವರ ಎಂಟ್ರಿ ದ್ವಿತೀಯಾರ್ಧದಲ್ಲಿ ಕಥೆಗೆ ಹೊಸ ತಿರುವು ನೀಡುತ್ತದೆ. ತಂದೆ-ಮಕ್ಕಳ ನಡುವಿನ ಸಂಬಂಧ, ಹಳೆಯ ತಪ್ಪುಗಳು ಮತ್ತು ಅದರ ಪರಿಣಾಮವಾಗಿ ಹುಟ್ಟುವ ಸಂಘರ್ಷವೇ ಚಿತ್ರದ ಪ್ರಮುಖ ಕಥಾಹಂದರವಾಗಿ ಮೂಡಿಬರುತ್ತದೆ.

Leave a Reply

Your email address will not be published. Required fields are marked *