ಒಬ್ಬ ಪೋಲಿಸ್ ಅಧಿಕಾರಿಯಾಗಿ ನಿಮ್ಮಲ್ಲಿ ನಾನು ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಿಮಗೆ ಗೊತ್ತಿರಲಿ ಬಹುತೇಕ ಪೋಲಿಸರು ಹಳ್ಳಿಯಿಂದ ಮತ್ತು ಬಡತನದಿಂದ ಬಂದವರೇ ಆಗಿರುತ್ತಾರೆ. ಇತ್ತೀಚಿಗೆ ಪೋಲಿಸ್ ಇಲಾಖೆಗೆ ಬರುವ ಯುವಕರು ಹಲವು ಆಕಾಂಕ್ಷೆಗಳನ್ನು ಇಟ್ಟುಕೊಂಡು ಪೋಲಿಸ್ ಇಲಾಖೆಗೆ ಬರುತ್ತಿದ್ದಾರೆ. ಅವರಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಮಂದಿ ಪದವಿ‌ ಮತ್ತು ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಪದವಿ ಪಡೆದವರಾಗಿರುತ್ತಾರೆ. ಪ್ರೀತಿಯ ಸಾರ್ವಜನಿಕರೆ…? ಇತ್ತೀಚಿಗೆ ಫೇಸ್ ಬುಕ್, ವಾಟ್ಸಪ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೋ ಯಾರಿಂದಲೋ ಒಬ್ಬಿಬ್ಬರು ಪೋಲಿಸರಿಂದ ಆದ ತಪ್ಪು(!)ಗಳಿಗೆ ಜನರು ಇಡೀ ಪೋಲಿಸ್ ಇಲಾಖೆಯನ್ನೆ ಒಗ್ಗೂಡಿಸಿ ಕೆಟ್ಟ ಪದಗಳಿಂದ ಬೈಯ್ಯುವುದು, ನಿಂದಿಸುವುದು, ದ್ವೇಷ ಕಾರುವುದು ಮಾಡಿ ಪೋಲಿಸ್ ಇಲಾಖೆಯ ಮೇಲೆ ತಮ್ಮ ಕೋಪವನ್ನು ತೀರಿಸಿಕೊಳ್ಳುತ್ತಿದ್ದಾರೆ. ಆದರೆ ನಿಮ್ಮ ನಿಂದನೆ ಕೋಪ ಬೈಗುಳ ಸಾವಿರಾರು ನಿಷ್ಠಾವಂತ ಪೋಲಿಸರಿಗೂ ಕೂಡ ಮನಸ್ಸಿಗೆ ನೋವುಂಟು ಮಾಡಿ ಕರ್ತವ್ಯದಲ್ಲಿ ನಿರುತ್ಸಾಹವನ್ನು ಉಂಟು ಮಾಡುತ್ತದೆ. ಯಾಕೆಂದರೆ ಏನೂ ತಪ್ಪು ಮಾಡದ ಸಾವಿರಾರು ಮನಸ್ಸುಗಳಿಗೆ ನೋವುಂಟಾಗುತ್ತದೆ. ದಯವಿಟ್ಟು ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಪೋಲಿಸರಿಂದ ತಪ್ಪಾಗಿದ್ದರೆ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ. ಅದನ್ನು ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ಬೇಕಾಬಿಟ್ಟಿ ಕಮೆಂಟ್ ಮಾಡಬೇಡಿ‌. ನೀವು ಪೋಲಿಸರು ತಪ್ಪು ಮಾಡಿದರೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೆ ಪೋಲಿಸ್ ಇಲಾಖೆಯಷ್ಟು ಬೇರೆ ಯಾವ ಇಲಾಖೆಯು ಬೇಗ ಸ್ಪಂದಿಸುವುದಿಲ್ಲ. ನಿಮಗೆ ಯಾವ ಪೋಲಿಸ್ ಠಾಣೆಗೆ ಹೋದರು ಕುಳಿತುಕೊಳ್ಳಲು ಚೇರ್ ನೀಡಿ ನಿಮ್ಮ ಅಹವಾಲು ಕೇಳುತ್ತಾರೆ. ನಿಮಗೆ ಇತರೆ ಬೇರೆ ಯಾವ ಸರ್ಕಾರಿ ಕಚೇರಿಗಳಲ್ಲಿ ಕುಳಿತುಕೊಳ್ಳಲು ಕುರ್ಚಿ ನೀಡುತ್ತಾರೆ…? ಬೇರೆ ಯಾವ ಇಲಾಖೆಯಲ್ಲಿ ಒಂದು ಅಥವಾ ಎರಡು ರಿಂಗ್ ಗೆ ಪೋನ್ ರಿಸೀವ್ ಮಾಡುತ್ತಾರೆ…?
ನೀವು ಮಧ್ಯರಾತ್ರಿ ಯಾವುದೇ ಪೋಲಿಸ್ ಸ್ಟೇಷನ್ ಗೆ ಪೋನ್ ಮಾಡಿ ನೋಡಿ ಒಂದು ಅಥವಾ ಎರಡು ರಿಂಗ್ ಗೆ ಪೋನ್ ರಿಸೀವ್ ಮಾಡಿ ನಮಸ್ಕಾರ ಎಂದು ಹೇಳುತ್ತಾರೆ. ಇದನ್ನು ಸಾರ್ವಜನಿಕರು ಗಮನಿಸಿದ್ದೀರ….? ನೀವು ಹಬ್ಬ ಹರಿದಿನಗಳಲ್ಲಿ ಸಂಭ್ರಮ ಪಡುತ್ತಿದ್ದರೆ ಪೋಲಿಸರು ನಿಮಗಾಗಿ ರಸ್ತೆಯಲ್ಲಿ, ಬಿಸಿಲಿನಲ್ಲಿ, ಧೂಳಿನಲ್ಲಿ, ಗಾಳಿಯಲ್ಲಿ, ಚಳಿಯಲ್ಲಿ, ಮಳೆಯಲ್ಲಿ ನಿಂತಿರುತ್ತಾರೆ. ನೀವು ದೇವಸ್ಥಾನಗಳಲ್ಲಿ ನಿಮ್ಮ ಯೋಗಕ್ಷೇಮಕ್ಕಾಗಿ ಬೇಡುತ್ತಿದ್ದರೆ ಪೋಲಿಸರು ನಿಮಗಾಗಿ ಏನು ಆಗದಿರಲಿ ಎಂದು ಬೇಡುತ್ತಿರುತ್ತಾರೆ. ನೀವು ನಿಮ್ಮ ಮನೆಗಳಲ್ಲಿ ನಿಮ್ಮ ಕುಟುಂಬದ ಜೊತೆ ಸುಖವಾಗಿ ನಿದ್ರಿಸುತ್ತಿರುವಾಗ ಪೋಲಿಸರು ಕೈಯಲ್ಲಿ ಲಾಠಿ ಹಿಡಿದು, ಹೆಗಲಿಗೆ ಬಂದೂಕು ಏರಿಸಿಕೊಂಡು ನಿಮ್ಮ ಏರಿಯಾದಲ್ಲಿ ಸುತ್ತುತ್ತ ವಿಷಲ್ ಹಾಕುತ್ತ ಪಾಯಿಂಟ್ ಬುಕ್ ಸಹಿ ಮಾಡುತ್ತಿರುತ್ತಾರೆ. ನಿಮಗೆ ಗೊತ್ತೆ ಇಷ್ಟೆಲ್ಲಾ ಕೆಲಸ ಮಾಡುವ ಪೋಲಿಸರಿಗೆ ಬೇರೆ ಇಲಾಖೆಯ ಸರ್ಕಾರಿ ನೌಕರರಿಗಿಂತ ಕಡಿಮೆ ಸಂಬಳ. ಬೇರೆ ಇಲಾಖೆಯ ಸರ್ಕಾರಿ ನೌಕರರಿಗೆ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ, ಸರ್ಕಾರಿ ರಜೆ ಇದ್ದರೆ ಇದ್ಯಾವುದು ಇಲ್ಲದಿದ್ದರೂ ಕೂಡ ಒಂದು ದಿನವೂ ಕೂಡ ಪೋಲಿಸ್ ಠಾಣೆಯ ಬಾಗಿಲು ಹಾಕದೆ ಕೆಲಸ ಮಾಡುತ್ತಾರೆ. ದಿನದ ಇಪ್ಪತ್ನಾಲ್ಕು ಘಂಟೆಯೂ ಕೂಡ, ಮಳೆ ಬರಲಿ, ಪ್ರವಾಹ ಬರಲಿ, ಭೂಕಂಪವಾಗಲಿ,ಕೊರೋನಾ ದಂತಹ ಭೀಕರ ಖಾಯಿಲೆ ಬರಲಿ ಪೋಲಿಸರು ರಸ್ತೆ ಗಿಳಿದು ಕೆಲಸ ಮಾಡುತ್ತಾರೆ. ಹಬ್ಬ ಇರಲಿ, ಸಾವು ಇರಲಿ, ರಾಜಕೀಯ ಕಾರ್ಯಕ್ರಮ ಇರಲಿ, ದೇವರ ಕಾರ್ಯ ಇರಲಿ, ದೇವರ ಜಾತ್ರೆಯಿರಲಿ, ವಿದೇಶದ ಪ್ರಧಾನಿ, ಅಧ್ಯಕ್ಷರು ಬರಲಿ ಪೋಲಿಸರು ಇರಬೇಕು. ಪೋಲಿಸರು ಇಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ಆದರೆ ಎಲ್ಲೋ ಯಾವಾಗಲೋ ಕೆಲವು ಪೋಲಿಸರಿಂದ ಆಗುವ ತಪ್ಪುಗಳಿಗೆ ಇಡೀ ಪೋಲಿಸ್ ಇಲಾಖೆಯನ್ನೆ ದೂರಬೇಡಿ. ಇದರಿಂದ ನಿಷ್ಠಾವಂತ ಪೋಲಿಸರ ಮನಸ್ಸಿಗೆ ನೋವಾಗುತ್ತದೆ. “ಪೋಲಿಸರಿಂದ ದಂಡನೆಗೆ ಒಳಗಾದ, ಕೇಸು ಹಾಕಿಸಿಕೊಂಡ ಕೆಲವು ಪುಂಡರು, ಕ್ರಿಮಿನಲ್ಸ್ ಗಳು, ಸಮಾಜಘಾತುಕರು, ಪೋಕರಿಗಳು ಅಂತಹ ಸಂದರ್ಭಗಳನ್ನು ದುರುಪಯೋಗ ಪಡಿಸಿಕೊಂಡು”
ಕೆಲವು ಘಟನೆಗಳು ವೀಡಿಯೋ ಮಾಡಿ ಹೇಗೆಂದರಾಗೆ ವೈಭವೀಕರಿಸಿ ಕೆಲವೊಮ್ಮೆ ತಿರುಚಿ ಕೃತಕವಾಗಿ ಮರುಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಪೋಲಿಸರ ಮನೋಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಾರೆ. ಅದ್ದರಿಂದ ಸಮಸ್ತ ಪೋಲಿಸರ ಪರವಾಗಿ ನಾನು ಸಾರ್ವಜನಿಕರಲ್ಲಿ ಕೋರುವುದೇನೆಂದರೆ ಯಾವುದೇ ಘಟನೆಯನ್ನು ಪರಾಮರ್ಶಿಸದೆ, ಸಂಪೂರ್ಣ ಅವಲೋಕಿಸದೆ, ವಿವೇಚನೆ ಮಾಡದೆ ಪೋಲಿಸರ ಮೇಲೆ ಹಾಕಿ ಕೆಟ್ಟ ನಿಂದನೆ ಮಾಡಬೇಡಿ‌ ಎಂದು ಕೋರುತ್ತೇನೆ‌. ಕರ್ನಾಟಕ ಪೋಲಿಸ್ ಸದಾ ಜನರ ಸೇವೆಗೆ ಸಿದ್ದವಾಗಿದೆ. ನಮಗೆ ಯಾರೂ ದ್ವೇಷಿಗಳಲ್ಲ, ಯಾರು ಸಂಬಂಧಿಕರಲ್ಲ, ಯಾರೂ ನೆಂಟರಲ್ಲ ಎಲ್ಲಾ ಒಂದೆ‌. ಕಾನೂನನ್ನು ಗೌರವಿಸುವವರನ್ನು ನಾವೂ ಕೂಡ ಎಂದೆಂದಿಗೂ ಯಾವತ್ತಿಗೂ ಎಲ್ಲೆಲ್ಲಿಯೂ ಗೌರವಿಸುತ್ತೇವೆ.

ಸುಗಂಧಿ ಪ್ರಜಾಶ್ರೀ ಸಂಪಾದಕರು,
ಹೈಕೋರ್ಟ್ ವಕೀಲರು ಬೆಂಗಳೂರು

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153