ವರ್ಣಮಾತ್ರಂ ಕಲಿಸಿದಾತಂ ಗುರು.
ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.1962 ರಿಂದಲೂ ಆಚರಿಸಿಕೊಂಡು ಬರುತ್ತಿರುವ ಈ ದಿನ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಯೋಗದಾನ ನೀಡಿದ ಶ್ರೇಷ್ಠ ಶಿಕ್ಷಕ,ಅಧ್ಯಾಪಕ,ದಾರ್ಶನಿಕ, ತತ್ವಜ್ಞಾನಿ,ಲೇಖಕ, ಉತ್ತಮವಾಗ್ಮಿ, ಭಾರತರತ್ನ ಹಾಗೂ ಸ್ವತಂತ್ರ ಭಾರತದ ಮೊದಲ ಉಪರಾಷ್ಟ್ರಪತಿ, ಜೊತೆಗೆ ಎರಡನೇ ರಾಷ್ಟ್ರಪತಿಯಾಗಿದ್ದವರು.ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮ ದಿನವೂ ಹೌದು.ಡಾ.ರಾಧಾಕೃಷ್ಣನ್ ಅವರು ತಮ್ಮ ಇಡೀ ಜೀವಮಾನವನ್ನು ವಿದ್ಯಾರ್ಥಿಗಳಿಗಾಗಿಯೇ,ಶಿಕ್ಷಣ ಕ್ಷೇತ್ರಕ್ಕಾಗಿಯೇ ಮುಡಿಪಾಗಿಟ್ಟವರು.ಅವರ ವಿದ್ಯಾರ್ಥಿಗಳು ನಿಮ್ಮ ಹುಟ್ಟುಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಬೇಕು ಅದಕ್ಕೆ ತಮ್ಮ ಒಪ್ಪಿಗೆ ಬೇಕು ಎಂದು ಕೇಳಿದಾಗ, ಡಾ.ರಾಧಾಕೃಷ್ಣನ್ ರವರು ತಮಗೆ ಅಚ್ಚುಮೆಚ್ಚಿನ ಶಿಕ್ಷಕ ವೃತ್ತಿಯ ಬಗ್ಗೆ ಇರುವ ಅಪಾರ ಗೌರವದಿಂದಾಗಿ,ಈ ದೇಶದ ಭವಿಷ್ಯವನ್ನು ರೂಪಿಸುವ ಶಿಕ್ಷಕರ ದಿನವನ್ನಾಗಿ ಆಚರಿಸುವ ಮೂಲಕ ದೇಶದ ಎಲ್ಲಾ ಶಿಕ್ಷಕರಿಗೆ ಗೌರವ ಸಮರ್ಪಣೆಯಾಗಲಿ ಎಂದು ಹೇಳಿದರಂತೆ,ಅಂದಿನಿಂದ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುವುದು ಪ್ರಾರಂಭಿಸಲಾಯಿತು.
ಗುರುವೆಂದರೆ ಅಂಧಕಾರವನ್ನು ಹೋಗಲಾಡಿಸುವವನು.ಪ್ರತಿಯೊಬ್ಬ ರೂ ಒಂದಲ್ಲಾ ಒಂದು ಗುರಿಯನ್ನಿಟ್ಟುಕೊಂಡು ಸಾಧಿಸಲು ಹೊರಟಾಗ ಗುರುವಿನ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕಾಗುತ್ತದೆ.ಹಿಂದೆ ಗುರು ಇರಬೇಕು..ಮುಂದೆ ಗುರಿ ಇರಬೇಕು.ಆಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ.ಆದ್ದರಿಂದಲೇ ಪುರಂದರದಾಸರು ಹೇಳಿರುವುದು.”ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ” ನಾವು ಗುರುವಿಗೆ ಶಿರಬಾಗಿ ವಿನಮ್ರತೆಯನ್ನು ತೋರಿ,ಶ್ರದ್ಧೆಯಿಂದ ಕಲಿತಾಗ ಮಾತ್ರ ಗುರಿ ಮುಟ್ಟಲು ಸಾಧ್ಯ.ಡಾ.ರಾಧಾಕೃಷ್ಣನ್ ರವರು “ಶಿಕ್ಷಕರು ಯಾವುದೇ ದೇಶದ ಅತ್ಯುತ್ತಮ ಮೆದುಳುಗಳಾಗಬೇಕು” ಎಂದು ಹೇಳುತ್ತಿದ್ದರು.ರಾಧಾಕೃಷ್ಣನ್ ಅವರ ಪ್ರಕಾರ ಅಧ್ಯಾಪಕ ಸದ್ಗುಣಗಳ ಸಾಕಾರ ರೂಪ.ಮಕ್ಕಳಲ್ಲಿ ಆದರ್ಶವನ್ನು ರೂಢಿಸಿಕೊಳ್ಳಲು ಮಾದರಿ.ಇಂತಹ ಶಿಕ್ಷಕರನ್ನು ಆಚಾರ್ಯ ಎನ್ನುವರು.ಆಚಾರ್ಯ ಎಂದರೆ ಆಚಾರವುಳ್ಳವನು. ದೀಪ ತಾ ಉರಿದು ಜಗಕ್ಕೆ ಬೆಳಕಾಗುವಂತೆ.ಶಿಕ್ಷಕ ದೀಪದಂತೆ ಉರಿಯುತ್ತಾ…ಬೆಳಗುತ್ತಿರಬೇಕು.ಶಿಕ್ಷಕ ನಿರಂತರ ಅಧ್ಯಯನ ಶೀಲ ನಾಗಿರಬೇಕು.ತಾನು ಕಲಿತು ವಿದ್ಯಾರ್ಥಿಗಳಿಗೆ ಕಲಿಸಬೇಕು.ಆಗ ಮಾತ್ರ ಜ್ಞಾನ ಪ್ರಜ್ವಲಿಸುತ್ತಿರುತ್ತದೆ.ಶಿಕ್ಷಕ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುವವನಲ್ಲದೇ , ಆತ್ಮದ ಅಂಧಕಾರವನ್ನು ಹೋಗಲಾಡಿಸುವವನೇ ನಿಜವಾದ ಶಿಕ್ಷಕ.ಶಿಕ್ಷಕನ ಜ್ಞಾನದ ಜೊತೆಗೆ ಶಿಕ್ಷಕನ ನಡೆ, ನುಡಿ,ಆಚಾರ,ಶಿಸ್ತು,ವೇಷಭೂಷಣ ಗಳನ್ನು ವಿದ್ಯಾರ್ಥಿಗಳು ಅನುಸರಿಸುತ್ತಾರೆ.ಆದ್ದರಿಂದ ಶಿಕ್ಷಕನ ಸ್ಥಾನ ಮಾದರಿಯಾಗಿರಬೇಕು.ವಿದ್ಯಾರ್ಥಿಗಳ ಜೀವನದ ಮೇಲೆ ಪ್ರಭಾವ ಬೀರುವ ವ್ಯಕ್ತಿಯೆಂದರೆ ಗುರು.
ಶಿಕ್ಷಕ ಒಬ್ಬ ಶಿಲ್ಪಿ ಇದ್ದ ಹಾಗೆ ಶಿಲೆಯಂತಿರುವ ವಿದ್ಯಾರ್ಥಿಗಳನ್ನು ಅಚ್ಚುಕಟ್ಟಾಗಿ ಕೆತ್ತಿ, ಒಂದು ಸುಂದರಮೂರ್ತಿ ಯನ್ನಾಗಿ ರೂಪಿಸುವ ಕಲೆಗಾರ.ಆದ್ದರಿಂದಲೇ ದಾರ್ಶನಿಕರು ಒಂದು ಮಾತನ್ನು ಹೇಳಿದ್ದಾರೆ.
ಒಬ್ಬ ಸಾಮಾನ್ಯ ಶಿಕ್ಷಕ ಹೇಳುತ್ತಾನೆ
ಒಬ್ಬ ಉತ್ತಮ ಶಿಕ್ಷಕ ವಿವರಿಸುತ್ತಾನೆ
ಒಬ್ಬ ಶ್ರೇಷ್ಠ ಶಿಕ್ಷಕ ಪ್ರಯೋಗಾತ್ಮಕವಾಗಿ ಅರ್ಥೈಸಬಲ್ಲ.
ಆದರೆ ಒಬ್ಬ ಆದರ್ಶ ಶಿಕ್ಷಕ ಮಾತ್ರ ತನ್ನ ವಿದ್ಯಾರ್ಥಿಗಳನ್ನು ಪ್ರೇರೇಪಿಸಬಲ್ಲ.
ಮಕ್ಕಳ ಭವಿಷ್ಯವನ್ನು ರೂಪಿಸುವ, ಪಠ್ಯ ಬೋಧನೆಗಿಂತಲೂ ಹೆಚ್ಚಾಗಿ ವಿವೇಕ, ತಾಳ್ಮೆ,ಸಹಕಾರ ,ಸಂಘ ಜೀವನ, ಸಾಮಾಜಿಕ ವರ್ತನೆ,ದೂರದೃಷ್ಟಿ, ಮಾನವೀಯತೆ ಯನ್ನು ಮಕ್ಕಳಿಗೆ ಕಲಿಸಬೇಕು.ಆಗ ಮಾತ್ರ ಒಬ್ಬ ಯಶಸ್ವಿ ಶಿಕ್ಷಕನಾಗಬಲ್ಲ.ದೇಶದ ಭವಿಷ್ಯದ ಪ್ರಜೆಗಳ ಸೃಷ್ಟಿಸಿ ಬೆಳೆಸಬಲ್ಲ.ನಮ್ಮ ಶಿಕ್ಷಣ ಕ್ಷೇತ್ರ, ಶಾಲೆಗಳು ಉದ್ಯೋಗ ಸೃಷ್ಟಿಸುವ ಕಾರ್ಖಾನೆ ಗಳಾಗಬಾರದು..ಬದಲಿಗೆ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವ ವ್ಯಕ್ತಿತ್ವವನ್ನು ಸೃಷ್ಟಿಸಬೇಕು.ಆಗ ಮಾತ್ರ ಒಂದು ದೇಶದ ಭವಿಷ್ಯ ,ಶಾಲೆಗಳ ನಾಲ್ಕು ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತದೆ ಎನ್ನುವ ಮಾತು ಅಕ್ಷರಶಃ ಸಾರ್ವಕಾಲಿಕವಾಗಿ ಉಳಿಯುತ್ತದೆ.ನಮ್ಮ ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ.ಭಾರತೀಯ ಗುರು ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ.ಪ್ರತಿಯೊಬ್ಬರ ಸಾಧನೆಯಿಂದೆ ಒಬ್ಬ ಗುರುವಿದ್ದೆ ಇರುತ್ತಾರೆ. ಮಾರ್ಗದರ್ಶಕ ಗುರುವಿಗೆ ಗೌರವಿಸೋಣ.ಗುರುವನ್ನು ದೇವರಿಗೆ ಹೋಲಿಸಲಾಗುತ್ತದೆ.ಗುರುವಿನಲ್ಲಿ ದೇವರ ರೂಪ ಕಾಣಲಾಗುತ್ತದೆ.ಆದ್ದರಿಂದಲೇ
ಗುರುಬ್ರಹ್ಮ ಗುರುವಿಷ್ಣು
ಗುರುದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ ಎಂದಿರುವುದು.
ಗುರು ಶಿಕ್ಷಕನಾಗಿ, ಮಾರ್ಗದರ್ಶಕನಾಗಿ, ತಾಯಿಯಂತೆ ಮಮತೆಯಿಂದ ತಿದ್ದುವ,ಅಕ್ಕರೆಯಿಂದ ಅಕ್ಷರ ಕಲಿಸಿ,ಸಹನಾಮಯಿಯಾಗಿ,ಸ್ನೇಹಿತನಾಗಿ, ಶಿಲೆಯನ್ನು ಒಂದು ಸುಂದರ ಮೂರ್ತಿ ಯನ್ನಾಗಿ ರೂಪಿಸುವ ಅದ್ಬುತ ಶಿಲ್ಪಿ..ಗುರು..
ಇಂದಿನ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣದಿಂದಾಗಿ ವಿದ್ಯಾರ್ಥಿಗಳಲ್ಲಿ ಗುರುವಿನ ಬಗ್ಗೆ ಇರುವ ಶ್ರದ್ಧೆ, ಗೌರವ ಕಡಿಮೆಯಾಗುತ್ತಿದೆ.ಹಣ ಕೊಟ್ಟರೆ ಶಿಕ್ಷಣ ಸಿಗುತ್ತದೆ ಎನ್ನುವ ಮನೋಭಾವನೆ ಬೆಳೆಯುತ್ತಿದೆ.ಆದರೂ ಗುರುವಿನ ಸ್ಥಾನ ಮಹತ್ತರವಾದದ್ದು.ಗುರುವಿನ ಸ್ಥಾನಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳುವುದು ಶಿಕ್ಷಕನ ಕರ್ತವ್ಯವಾಗಿದೆ.
One Book, One pen, One child and One TEACHER can change the World.
.-yusuf Malala
Teaching is a very Noble profession that shapes the CHARACTER, and CALIBER, and FUTURE of the individual.
Dr.APJ.Abdul kalam
ನಮ್ಮ ದೇಶದ ಗುರು ಪರಂಪರೆಯನ್ನು ಈ ದಿನ ಸ್ಮರಿಸುತ್ತಾ, ನಮ್ಮ ಜೀವನಕ್ಕೆ ದಾರಿದೀಪವಾದ ಗುರುಗಳಿಗೆ ಸ್ಮರಿಸಿ, ನಮಿಸೋಣ.
ಸರ್ವರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಗುರುಭ್ಯೋ ನಮಃ
ಅನಿತಾ ಕೃಷ್ಣ ,ಶಿಕ್ಷಕಿ ತೀರ್ಥಹಳ್ಳಿ