ಮಕ್ಕಳ ದಿನಾಚರಣೆ-2025 ರ ಅಂಗವಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣದ ರಕ್ಷಣೆಗಾಗಿ ಧೈರ್ಯ ಸಾಹಸ ಪ್ರದರ್ಶಿಸಿದ 6 ರಿಂದ 18 ವರ್ಷಗೊಳಗಿನ ಬಾಲಕರಿಗೆ ‘ಹೊಯ್ಸಳ’ ಮತ್ತು ಬಾಲಕಿಯರಿಗೆ ‘ಕೆಳದಿ ಚೆನ್ನಮ್ಮ’ ಶೌರ್ಯ ಪ್ರಶಸ್ತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವತಿಯಿಂದ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ತಲಾ ರೂ.10,000 ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಇದೇ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಟ 05 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ತಲಾ ರೂ.25,000/- ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಸಂಸ್ಥೆಗಳಿಗೆ ತಲಾ ರೂ. 1,00,000/- ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು.
ಸಾಹಸ ಪ್ರಕರಣವು ದಿ: 01/08/2024 ರಿಂದ 31/07/2025 ರೊಳಗೆ ನಡೆದಿರಬೇಕು. ಧೈರ್ಯ ಸಾಹಸ ಪ್ರದರ್ಶಿಸಿದ ಕುರಿತು ಜಿಲ್ಲಾ ಮಟ್ಟದಲ್ಲಿ ಗುರುತಿಸಿರಬೇಕು ಮತ್ತು ಈ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರಬೇಕು. ಅರ್ಜಿ ಸಲ್ಲಿಸುವವರು ವ್ಯಕ್ತಿ/ಸಂಸ್ಥೆಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಇಲ್ಲದಿರುವ ಬಗ್ಗೆ ಪೊಲೀಸ್ ಇಲಾಖೆಯಿಂದ ಪರಿಶೀಲನಾ ವರದಿ ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು.