ಶಿವಮೊಗ್ಗ: ಆತ್ಮಹತ್ಯೆ ಎಂಬುದು ಜೀವನದ ಯಾವುದೇ ಸಮಸ್ಯೆಗೂ ಪರಿಹಾವಲ್ಲ. ಸಮಸ್ಯೆಗಳು ತಾತ್ಕಾಲಿಕ, ಆದರೆ ಆತ್ಮಹತ್ಯೆಯು ಮತ್ತೊಂದು ದೊಡ್ಡ ಸಮಸ್ಯೆಯನ್ನು ಕುಟುಂಬಕ್ಕೆ ತಂದೊಡ್ಡುತ್ತದೆ ಎಂದು ಮನೋವೈದ್ಯ ಡಾ. ಎಸ್.ಟಿ.ಅರವಿಂದ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕುರಿತು ಮಾತನಾಡಿ, ಮಾನಸಿಕ ಸಮಸ್ಯೆಯಿಂದ ಬಳಲುವುದು, ಮದ್ಯವ್ಯಸನ ಸೇರಿದಂತೆ ಅನೇಕ ಸಮಸ್ಯೆಗಳು ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತವೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಕೂಡಲೇ ಅಂತಹ ವ್ಯಕ್ತಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು.
ವಿಶ್ವ ಸಂಸ್ಥೆ ಪ್ರಕಾರ ವಾರ್ಷಿಕವಾಗಿ ಪ್ರಪಂಚದಲ್ಲಿ ಎಂಟರಿAದ ಹತ್ತು ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ 40 ಸೆಕೆಂಡಿಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೂರು ಸೆಕೆಂಡಿಗೆ ಒಬ್ಬರು ಆತ್ಮಹತ್ಯೆ ಬಗ್ಗೆ ಆಲೋಚನೆ ಮಾಡುತ್ತಾರೆ. 2012ರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯು ಭಾರತ ದೇಶದಲ್ಲಿ ಹೆಚ್ಚಿತ್ತು. ದೇಶದಲ್ಲಿ ಪ್ರತಿ 55 ನಿಮಿಷಕ್ಕೊಮ್ಮೆ ವ್ಯಕ್ತಿ ಆತ್ಮಹತ್ಯೆಗೆ ಶರಣಾಗುತ್ತಾನೆ ಎಂದು ಹೇಳಿದರು.
ಸಾಮಾನ್ಯವಾಗಿ ಖಿನ್ನತೆ, ಆತಂಕ, ವ್ಯಸನಗಳು ಹಾಗೂ ಆತ್ಮಹತ್ಯೆಗೆ ಪ್ರಯತ್ನಪಟ್ಟ ವ್ಯಕ್ತಿಗಳು ಆಪ್ತಸಮಾಲೋಚನೆಗೆ ಬರುವುದು ಸಹಜ. ನಕರಾತ್ಮಕ ಚಿಂತನೆಗಳು ಆತ್ಮಹತ್ಯೆಗೆ ಕಾರಣವಾಗುತ್ತವೆ. ಆಪ್ತ ಸಮಾಲೋಚನೆಗೆ ಒಳಪಡಿಸಿ ಅವರಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ನಕರಾತ್ಮಕ ಆಲೋಚನೆಗಳು ಮನಸ್ಸಿನಲ್ಲಿ ಬೆಳೆಯಲು ಬಿಡಬಾರದು. ಮಾನಸಿಕವಾಗಿ ಕುಗ್ಗಿರುವ ವ್ಯಕ್ತಿಗಳಲ್ಲಿ ಮನೋಸ್ಥೆöÊರ್ಯ ಹೆಚ್ಚಿಸುವ ಹಾಗೂ ಧನಾತ್ಮಕ ಚಿಂತನೆಗಳನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಗದೀಶ್, ಜಿ.ವಿಜಯ್‌ಕುಮಾರ್, ರಾಣಿ ಬಾಳೆಕೊಪ್ಪ, ಶ್ರೀಕಾಂತ್, ಕೋಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು.
.