ಶಿವಮೊಗ್ಗ:- ಯುಗಪುರುಷ ಹಾನಗಲ್ ಕುಮಾರ ಸ್ವಾಮಿಗಳವರು ಪ್ರಾಥಸ್ಮರಣೀಯರು. ಅವರನ್ನು ಸ್ಮರಿಸುವುದೇ ಒಂದು ಪುಣ್ಯದ ಕೆಲಸ. ಪೂಜ್ಯರು ಮಾಡಿದ ಅಖಿಲ ಭಾರತ ವೀರಶೈವ ಮಹಾಸಭಾ, ಶಿವಯೋಗ ಮಂದಿರ, ಗದುಗಿನ ವಿರೇಶ್ವರ ಪುಣ್ಯಶ್ರಮ, ಸೂರ್ಯ ಚಂದ್ರರಿಗೆ ಸಮವಾಗಿರುವವು. ಸಮಾಜದ ಬಗ್ಗೆ ಅವರಿಗಿದ್ದ ದೂರದೃಷ್ಠಿ ಅವಿಸ್ಮರಣೀಯ
ಎಂದು ಬೆಕ್ಮಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದಿಂದ ನಗರದ ಬೆಕ್ಕಿನ ಕಲ್ಮಠದಲ್ಲಿ ನಿನ್ನೆ ಆಯೋಜಿಸಿದ್ದ ಸಮಾಜಯೋಗಿ, ಮಹಾಸಭಾದ ಸಂಸ್ಥಾಪಕ ಹಾನಗಲ್ ಕುಮಾರಸ್ವಾಮಿಗಳ ಜಯಂತಿ, ಜಿಲ್ಲಾ ಯುವ ಘಟಕ, ಜಿಲ್ಲಾ ಮಹಿಳಾ ಘಟಕ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಘಟಕಗಳ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಇಂದು ಸಮಾಜ ಸಂಘಟನೆಯಿಂದ ಹಿಂದೆ ಸರಿದಿದೆ. ಶಿಕ್ಷಣ, ವಾಣಿಜ್ಯ, ರಾಜಕೀಯ ಹೀಗೆ ಎಲ್ಲ ರಂಗಗಳಲ್ಲಿ ಇತರೆ ಸಮಾಜಗಳಿಗೆ ಮಾರ್ಗ ದರ್ಶಕವಾಗಿ ಬೆಳೆದ ಸಮಾಜ ನಮ್ಮದು. ಈ ಸಮಾಜಕ್ಕೆ ಮತ್ತೆ ಮೊದಲಿನ ವೈಭವ ಪ್ರಾಪ್ತಿಯಾಗಬೇಕಿದೆ. ನಮಗೆ ಶರಣರು ಕಲಿಸಿದ ಮೌಲ್ಯಗಳನ್ನು ಅನುಸರಿಸುವ ಮೂಲಕ ನಮ್ಮ ಸಂಘಟನೆ ಮತ್ತು ಸಂಸ್ಕಾರಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ಕರೆ ನೀಡಿದರು.
ಶಿಕ್ಷಣ ಯಾವುದೇ ಸಮುದಾಯದ ಶಕ್ತಿ. ಕೇವಲ ಓದು ಬರಹ ಲೆಕ್ಕ ಕಲಿಯಲು ಸೀಮಿತವಾಗದೆ ಲಿಂಗಾಯತರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು. ಕೇಂದ್ರ ಮತ್ತು ರಾಜ್ಯ ಆಢಳಿತ ಸೇವೆಗಳಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಉನ್ನತ ಸ್ಥಾನಗಳನ್ನು ಅಲಂಕರಿಸಿ ಸೇವೆ ಮಾಡಬೇಕು. ಈ ನಿಟ್ಟಿನಲ್ಲಿ ಯುವಜನತೆ ಕ್ರಿಯಾಶೀಲವಾಗಬೇಕಿದೆ. ಸಮಾಜದ ಹಿರಿಯರು ಯುವಕರಿಗೆ ಈ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಬೇಕು ಎಂದರು.
ನಮ್ಮ ಸಮುದಾಯದ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಣೀಯವಾದುದು. ಅವುಗಳ ಮಾರ್ಗದರ್ಶನದಲ್ಲಿ ಸಮಾಜ ಮುಂದುವರಿಯಲಿ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ಎಸ್.ವೈ. ಅರುಣಾದೇವಿ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿ, ಹಾನಗಲ್ ಕುಮಾರಸ್ವಾಮಿಗಳು ಯೋಗಕ್ಕೆ ಒತ್ತು ನೀಡಿದ್ದರು. ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಬೇಕು ಎನ್ನುವುದು ಅವರ ಉದ್ದೇಶವಾಗಿತ್ತು. ಅವರು ಇಂಗ್ಲಿಷ್‌ಗೂ ಒತ್ತು ನೀಡಿದ್ದರು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಅಗತ್ಯವಾಗಿದ್ದು, ಯು ಪೀಳಿಗೆಯನ್ನು ಅದರ ಕಡೆಗೆ ಕರೆದುಕೊಂಡು ಬರಬೇಕಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ’ಸಮುದಾಯದಲ್ಲಿ ಈ ಹಿಂದೆ ಸಾಕಷ್ಟು ಸಮಸ್ಯೆಗಳಿದ್ದವು. ಆದರೀಗ ಎಲ್ಲರೂ ಪರಿಸ್ಥಿತಿ ಬದಲಾಗಿದೆ. ಭಾವನೆ ಮೂಡಿದೆ. ಹೀಗಾಗಿ, ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ಧನಂಜಯ್ ಮಹಾನಗರ ಪಾಲಿಕೆ ಘಟಕವನ್ನು ಉದ್ಘಾಟಿಸಿದರು. ಬೆಕ್ಕಿನ ಕಲ್ಮಠದ ಮಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಪೀಠಾಧ್ಯಕ್ಷ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮಹಾಸಭಾದ ಜಿಲ್ಲಾ ಅಧ್ಯಕ್ಷ ರುದ್ರಮುನಿ ಎಸ್. ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಮಹಾಸಭಾ ರಾಜ್ಯ ಉಪಾಧ್ಯಕ್ಷ ಎಚ್. ಎಂ. ಚಂದ್ರಶೇಖರಪ್ಪ, ಪ್ರಮುಖರಾದ ಎಚ್.ಎಂ. ರೇಣುಕಪ್ರಸನ್ನ, ನಟರಾಜ್ ಸಾಗರಹಳ್ಳಿ, ಮಹಾಂತೇಶ್ ಪಾಟೀಲ್, ಎಸ್.ಎಸ್. ಜ್ಯೋತಿ ಪ್ರಕಾಶ್, ಬಿ.ಡಿ. ಭೂಕಾಂತ್, ಎನ್.ಜೆ. ರಾಜಶೇಖರ್, ಜಿ.ಬೆನಕಪ್ಪ, ಜಿ. ವಿಜಯಕುಮಾರ್ ಇದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ