ಶಿವಮೊಗ್ಗ ನ್ಯೂಸ್…

ಶಿವಮೊಗ್ಗ: ಶಿವಮೊಗ್ಗ ದಸರಾ ಮಹೋತ್ಸವ ಅಂಗವಾಗಿ ಇಂದು ನಗರದಲ್ಲಿ ಸಡಗರ, ಸಂಭ್ರಮದಿಂದ ರೈತ ದಸರಾ ನಡೆಸಲಾಯಿತು. ಅಲಂಕೃತ ಎತ್ತಿನ ಗಾಡಿಗಳು, ಟಿಲ್ಲರ್, ಕಲಾತಂಡಗಳೊಂದಿಗೆ ನಗರದ ಬಸ್ ನಿಲ್ದಾಣದಿಂದ ಕುವೆಂಪು ರಂಗಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಹಸಿರು ಮೇಳೈಸಿತ್ತು. ಸುತ್ತಮುತ್ತಲಿನ ರೈತರು ಕೂಡ ರೈತ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ರೈತ ನಾಯಕರಾದ ಕೆ.ಟಿ. ಗಂಗಾಧರ್, ಹೆಚ್.ಆರ್. ಬಸವರಾಜಪ್ಪ, ಮೇಯರ್ ಸುನಿತಾ ಅಣ್ಣಪ್ಪ ಸೇರಿದಂತೆ ಪಾಲಿಕೆ ಸದಸ್ಯರು ಎತ್ತಿನ ಗಾಡಿಯಲ್ಲಿ ಆಗಮಿಸಿದ್ದು, ವಿಶೇಷವಾಗಿತ್ತು.ಮೆರವಣಿಗೆ ಕುವೆಂಪು ರಂಗಮಂದಿರ ತಲುಪಿದ ನಂತರ ವೇದಿಕೆ ಕಾರ್ಯಕ್ರಮ ನಡೆಸಲಾಯಿತು. ಯುವ ಸಂಶೋಧಕ ಹಾಗೂ ವಿ ಟೆಕ್ ಮೋಟಾರ್ಸ್ ಸಂಸ್ಥಾಪಕ ತೀರ್ಥಹಳ್ಳಿಯ ಕುಂಟುವಳ್ಳಿ ವಿಶ್ವನಾಥ್ ರೈತ ದಸರಾ ಕಾರ್ಯಕ್ರಮ ಉದ್ಘಾಟಿಸಿದರು.

ಅವರು ಮಾತನಾಡಿ, ಯಾವುದೇ ರೈತ ದಲ್ಲಾಳಿಗಳ ಮೇಲೆ ಅವಲಂಬಿತ ಆಗಿರಬಾರದು ಎಂದರು. 2007 ರಿಂದ ಕೃಷಿ ಕ್ಷೇತ್ರಕ್ಕೆ, ಅದರಲ್ಲೂ ಅಡಿಕೆ ಬೆಳೆಗಾರರಿಗೆ ಏನಾದರೂ ಸಹಾಯ ಮಾಡಬೇಕೆಂಬ ಕಲ್ಪನೆ ಇರಿಸಿಕೊಂಡು ಸಂಶೋಧನೆ ಮಾಡುತ್ತಾ ಬಂದಿದ್ದೇನೆ. ಅದರ ನಂತರ ಅಡಿಕೆ ಸುಲಿಯುವ ಯಂತ್ರ ಸಂಶೋಧನೆ ಮಾಡಲು ಸಾಧ್ಯವಾಯಿತು. ಡಿಪ್ಲೊಮಾಶಿಕ್ಷಣ ಮುಗಿಸಿದ ತಕ್ಷಣ ಹತ್ತಾರು ಕಂಪನಿಗಳು ಉದ್ಯೋಗ ನೀಡುವ ಬಗ್ಗೆ ಆಹ್ವಾನ ನೀಡಿದ್ದವು. ಆದರೂ ಸ್ವತಃ ಸಂಶೋಧನೆ ಮಾಡಬೇಕೆಂಬ ಆಲೋಚನೆಯಿಂದ ಹೋಗಲಿಲ್ಲ ಎಂದು ತಿಳಿಸಿದರು.ಕೊರೋನಾ ಲಾಕ್ಡೌ ನ್ ಸಂದರ್ಭದಲ್ಲಿ ನಮ್ಮ ರೈತರು ಸಾಕಷ್ಟು ಸಂಕಟ ಅನುಭವಿಸಿದ್ದಾರೆ. ಎಲ್ಲ ರೈತರೂ ಸ್ವಾವಲಂಬಿ ಬದುಕು ಸಾಗಿಸಬೇಕು.. ನನ್ನನ್ನು ಬೆಳೆಸಿದ ರೈತರು ಕಷ್ಟ ಪಡಬಾರದು. ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.ರೈತ ಮುಖಂಡ ಕೆ.ಟಿ.ಗಂಗಾಧರ ಮಾತನಾಡಿ, ದೇಶದಲ್ಲಿ ಬೇಕಾದಷ್ಟು ವಿಶ್ವವಿದ್ಯಾಲಯಗಳು, ಸಾವಿರಾರು ಮಂದಿ ವಿಜ್ಞಾನಿಗಳು ಇದ್ದಾರೆ. ಸಂಶೋಧನೆಗೆಂದೇ ಕೋಟ್ಯಂತರ ರೂ. ಬಿಡುಗಡೆ ಆಗುತ್ತಿದೆ. ಆದರೆ ಎಲ್ಲಾ ಸೌಲಭ್ಯ ಇದ್ದರೂ ಅವರುಗಳಿಂದ ಸಾಧ್ಯವಾಗದ ಸಾಧನೆಯನ್ನು ಕುಂಟುವಳ್ಳಿ ವಿಶ್ವನಾಥ್ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್.ಸಿ. ಬಸವರಾಜಪ್ಪ ಮಾತನಾಡಿ, ಹಿಂದೆ ರೈತರು ಯಾರ ಮೇಲೂ ಅವಲಂಬಿತ ಆಗಿರಲಿಲ್ಲ. ಯಂತ್ರಗಳೂ ಇರಲಿಲ್ಲ. ಸಾಲ ಮಾಡಿಕೊಂಡಿರಲಿಲ್ಲ. ಕೊಟ್ಟಿಗೆ ಗೊಬ್ಬರ ಇತ್ತು. ಮನೆಯಲ್ಲೇ ಎಲ್ಲಾ ಧಾನ್ಯಗಳು ಬೀಜ ಸಂಗ್ರಹ ಇತ್ತು. ಈಗ ಅದೆಲ್ಲವೂ ಮರೆಯಾಗಿದೆ. ಎತ್ತಿನ ಗಾಡಿ, ನೇಗಿಲು, ಕುಂಟೆ ಯಾವುದೂ ಕಾಣುತ್ತಿಲ್ಲ. ಮುಂದೊಂದು ದಿನ ಇವೆನ್ನೆಲ್ಲಾ ಮಕ್ಕಳಿಗೆ ಮ್ಯೂಸಿಯಂನಲ್ಲಿ ತೋರಿಸಬೇಕಾದ ಸ್ಥಿತಿ ಬಂದಿದೆ. ಹಾಲು ಕೂಡಾ ಡೈರಿಯಿಂದ ಬರುತ್ತದೆ ಎಂದು ಎಷ್ಟೋ ಮಕ್ಕಳು ಭಾವಿಸಿದ್ದಾರೆ. ಹಾಗಾಗಿ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂದಿನ ಪೀಳಿಗೆಗೆ ನೀಡಬೇಕಿದೆ ಎಂದರು.ರೈತ ದಸರಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಚೆನ್ನಬಸಪ್ಪ, ಸುರೇಖಾ ಮುರುಳೀಧರ, ಸುವರ್ಣ ಶಂಕರ್, ನಾಗರಾಜ ಕಂಕಾರಿ, ಯಮುನಾ ರಂಗೇಗೌಡ, ವಿಶ್ವನಾಥ, ಹೆಚ್.ಸಿ.ಯೋಗೀಶ್ ಇನ್ನಿತರರು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…