ಶಿವಮೊಗ್ಗ ನ್ಯೂಸ್…
ಶೈಕ್ಷಣಿಕ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ರಾಜ್ಯಾಧ್ಯಂತ ಹೋರಾಟಕ್ಕೆ ನೀಡಿದ ಕರೆ ಅನ್ವಯ ಎಬಿವಿಪಿ ಜಿಲ್ಲಾ ಘಟಕ ಇಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.
ಕೊರೋನಾ ಎರಡನೇ ಅಲೆಗೆ ತತ್ತರಿಸಿದ್ದ ರಾಜ್ಯ ಸಹಜ ಸ್ಥಿತಿಗೆ ಮರಳುತ್ತಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ತರಗತಿಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಅನೇಕ ಸಮಸ್ಯೆಗಳಿದ್ದು, ಪ್ರಮುಖ ಅಗತ್ಯತೆಯನ್ನು ಸರ್ಕಾರ ಇತ್ಯರ್ಥಗೊಳಿಸಬೇಕೆಂದು ಒತ್ತಾಯಿಸಲಾಗಿದೆ.ರಾಜ್ಯದ ಗ್ರಾಮೀಣ ಭಾಗದಿಂದ ಬರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೂಡಲೇ ಬಸ್ ಸಂಚಾರ ಆರಂಭಿಸಬೇಕು. ಹಾಗೂ ಬಸ್ ಪಾಸ್ ಗಳನ್ನು ವಿತರಿಸಬೇಕು. ಡಿಪ್ಲೊಮಾ ಇಂಜಿನಿಯರಿಂಗ್ ಮತ್ತು ಸ್ನಾತಕ, ಸ್ನಾತಕೋತ್ತರ ತರಗತಿಗಳಲ್ಲಿ ಮತ್ತು ಪಿ.ಹೆಚ್.ಡಿ. ಮಾಡುತ್ತಿರುವ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಸಿಗದೇ ಪರದಾಡುವಂತಾಗಿದ್ದು, ಕೂಡಲೇ ವೇತನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ವಸತಿ ನಿಲಯಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಯ್ಕೆಯನ್ನು ಕೂಡಲೇ ಪೂರ್ಣಗೊಳಿಸಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದವಸತಿ ನಿಲಯಗಳ ಸಮಸ್ಯೆ ಬಗೆಹರಿಸಿ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ತಾಲೂಕು ಎಬಿವಿಪಿ ಸಂಚಾಲಕ ಕುಮಾರಸ್ವಾಮಿ ಸೇರಿದಂತೆ ವಿದ್ಯಾರ್ಥಿ ಪ್ರಮುಖರು ಭಾಗವಹಿಸಿದ್ದರು.