ಶಿವಮೊಗ್ಗ ನ್ಯೂಸ್…

ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ
ಜಯಗಳಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ
ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಬಣ) ಆಗ್ರಹಿಸಿದೆ.
ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಚಿನ್ನಯ್ಯ, ತಮಿಳುನಾಡಿನಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಪಿ. ಅಣ್ಣಮಲೈ ಎಂಬುವವರು ತಾವು ಪರಿಶಿಷ್ಟ ಜಾತಿ ಭೋವಿ ಎಂದು ಹೇಳಿ, ಜಾತಿ ದೃಢೀಕರಣ ಪತ್ರ ಪಡೆದಿದ್ದಾರೆ.

ಅವರ ಮಕ್ಕಳಾದ ಎ. ಗುಣಶೇಖರ್, ಎ. ಅನ್ನಪೂರ್ಣ ಎಂಬುವವರು ಪರಿಶಿಷ್ಟ ಜಾತಿಯಾದ ಭೋವಿ ಜಾತಿ
ಪ್ರಮಾಣಪತ್ರವನ್ನು ಪಡೆದು, ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿ ಸರ್ಕಾರಿ ಸೌಲಭ್ಯ ಪಡೆಯುತ್ತಿದ್ದಾರೆ. ನ್ಯಾಯಾಲಯ ಹಲವು ಬಾರಿ ಇವರ ಜಾತಿ ಪ್ರಮಾಣಪತ್ರವನ್ನು ರದ್ದುಮಾಡಿದ್ದರೂ ಕೂಡ ಮತ್ತೆ ಮತ್ತೆ ಅದು ಹೇಗೋ ಸುಳ್ಳು ಜಾತಿ ಪತ್ರವನ್ನು ಪಡೆಯುತ್ತಿದ್ದಾರೆ ಎಂದು ದೂರಿದರು.ಈಗಾಗಲೇ ಪಿ. ಅಣ್ಣಾಮಲೈ ಎಂಬುವವರ ಜಾತಿ ದೃಡೀಕರಣ ಪತ್ರ ರದ್ದಾಗಿದೆ. ಆದ್ದರಿಂದ ಅವರ ಮಕ್ಕಳಾದ ಎ. ಅರ್ಜುನ, ಎ. ರಾಧಾಕೃಷ್ಣ, ಎ. ಗುಣಶೇಖರ, ಎ. ಅನ್ನಪೂರ್ಣ ಇವರುಗಳ ಜಾತಿ ಪ್ರಮಾಣಪತ್ರವನ್ನು ರದ್ದುಮಾಡಬೇಕು. ಗುಣಶೇಖರ ಮತ್ತು ಅನ್ನಪೂರ್ಣ ಅವರ ಪಂಚಾಯ್ತಿ ಸದಸ್ಯತ್ವವನ್ನು ವಜಾಗೊಳಿಸಬೇಕು. ಜಾತಿ ಪ್ರಮಾಣಪತ್ರ ನೀಡಿದ ಅಂದಿನ ಭದ್ರಾವತಿ
ತಾಲ್ಲೂಕು ತಹಶೀಲ್ದಾರ್ ಮತ್ತು ಇತರ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.ಸರ್ಕಾರದಿಂದ ಇದುವರೆಗು ನೀಡಿದ ಎಲ್ಲ ಸೌಲಭ್ಯಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗುರುರಾಜ್, ರಾಜಕುಮಾರ್, ಈಶ್ವರಪ್ಪ, ರಂಗಪ್ಪ,
ಪ್ರಕಾಶ್ ಲಿಗಾಡಿ, ಏಳುಮಲೈ, ವಿನೋದ್ ಮುಂತಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…