ಪುನೀತ್ ರಾಜಕುಮಾರ್ ರಸ್ತೆ…
ಶಿವಮೊಗ್ಗ : ನಗರದ ಮಧ್ಯಭಾಗದಲ್ಲಿರುವ ಸಾವಿರಾರು ಜನವಾಸಿಗಳಿರುವ 1ಕಿ,ಮೀ ಉದ್ದದ ಲಕ್ಷ್ಮೀ ಟಾಕೀಸ್ ಹತ್ತಿರದ ಚಾನೆಲ್ ರಸ್ತೆಗೆ “ಪುನೀತ್ ರಾಜಕುಮಾರ್ ರಸ್ತೆ” ಎಂದು ನಾಮಕರಣಗೊಳಿಸಿದ ಸಾರ್ವಜನಿಕರು ತಮ್ಮಗಳ ಅಭಿಮಾನವನ್ನು ಎತ್ತಿ ಹಿಡಿದು ಸ್ಥಳೀಯ ಮಹನಾಗರ ಪಾಲಿಕೆಗೆ ಅಧಿಕೃತಗೊಳಿಸಲು ಒತ್ತಾಯಿಸಿದ್ದಾರೆ.
ಆಕಸ್ಮಿಕವಾಗಿ ಮರಣವನ್ನಪ್ಪಿ ಜಗತ್ತಿಗೆ ವಿಧಾಯ ಹೇಳಿದ ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿ ಪುನೀತ್ ರಾಜಕುಮಾರ್ ನಾಡಿಗೆ ಕಲಾ ಬಳುವಳಿಯನ್ನು ಭಾಲ್ಯದಿಂದಲೇ ನೀಡಿದವರು ಅಲ್ಲದೆ, ಅವರು ತಮ್ಮ ಸಜ್ಜನಿಕೆಯ,, ಸಹೃದಯಿತನದಿಂದ ಜನಮಾನಸದಲ್ಲಿ ನೆಲೆಯೂರಿ ಮಾದರಿಯಾಗಿದ್ದರು, ಅವರ ಅಗಲಿಕೆ ಅತೀವ ನೋವುಂಟು ಮಾಡಿದ್ದು ಅವರ ಕಲಾ ಹಾಗೂ ಸಾಮಾಜಿಕ ಜೀವನ ನಿರ್ವಹಣೆ ಕೋಟಿ, ಕೋಟಿ ಕನ್ನಡಿಗರಿಗೆ ಮಾದರಿಯಾಗಿ, ಸ್ಪೂರ್ತಿಯ ಸೆಲೆಯಾಗಿ ಬಾಹ್ಯಮುಖಿಯಲ್ಲಿ ಕಣ್ಮರೆಯಾದ ಎದೆನಾಯಕನಿಗೆ ಎಲ್ಲೆಡೆ ಬಿಸಿಗಂಬನಿಗಳು ಹರಿದು ಬಂದಿವೆ.
ಶಿವಮೊಗ್ಗ ನಗರದಲ್ಲಿಯೂ ಇಂತಹದೊಂದು ಭಾವುಕತೆಯ ಬಿತ್ತಿ ಇದುವರೆಗೂ ಅನಾಮಧೆಯವಾಗಿ ಹಲವು ಹೆಸರುಗಳಿಂದ ಕರೆಯಲಾಗುತ್ತಿದ್ದ ಸುಮಾರು ಒಂದು ಕಿ.ಮೀ ಉದ್ದದ ರಸ್ತೆಗೆ ಸಾರ್ವಜನಿಕರೇ ಖುದ್ದು ಸೇರಿ ಯಾವುದೇ ರಾಜಕೀಯ ಬೆರೆಸದೆ ದೊಡ್ಡದೊಂದು ಶಾಶ್ವತವಾದ “ಪುನೀತ್ ರಾಜಕುಮಾರ್ ರಸ್ತೆ” ಎಂದು ನಾಮ ಫಲಕವನ್ನು ಸ್ಥಾಪಿಸಿ ಉದ್ಘಾಟಿಸಿರುವುದು ಶ್ಲಾಘನೀಯವಾಗಿದೆ.
ಶಿವಮೊಗ್ಗದ ಅನೇಕ ಕನ್ನಡಪರ ಸಂಘಟನೆಗಳ ಕಟ್ಟಾಳುಗಳು ಇಲ್ಲಿಗೆ ಬೇಟಿ ನೀಡಿ ಶಾಶ್ವತವಾಗಿ ಇದನ್ನು ನಾಮಾಂಕಿತಗೊಳಿಸಿ ಆದೇಶಿಸಲು ಮಹಾನಗರ ಪಾಲಿಕೆಗೆ ಒತ್ತಾಯಿಸುತ್ತಿರುವುದು ಕಂಡು ಬಂದಿದೆ.
ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ರವರುಗಳು ಸಾರ್ವಜನಿಕರು ಉದ್ಗಾಟಿಸಿರುವ ಈ ನಾಮಫಲಕವನ್ನು ಗೌರವಿಸಿ ಯಾವುದೇ ತಗಾದೆಗಳಿಲ್ಲದೆ, ಈ ರಸ್ತೆಗೆ ಸಾರ್ವಜನಿಕರ ಆಶಯ ಹಾಗೂ ಅಭಿಮಾನಕ್ಕೆ ಮನ್ನಣೆ ನೀಡಿ ” ಪುನೀತ್ ರಾಜಕುಮಾರ್ ರಸ್ತೆ ಎಂದು ಅಧಿಕೃತಗೊಳಿಸಿ ಆದೇಶಿಸಬೇಕೆಂದು ಸೂರ್ಯಗಗನ ಪತ್ರಿಕೆಯ ಒತ್ತಾಯವು ಆಗಿದೆ.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಜ್ಯೋತಿ ಅರಳಪ್ಪ, ಪ್ರಜಾಕೀಯ ವೆಂಕಟೇಶ್, ನರಸಿಂಹ ಗಂಧದಮನೆ, ಹರೀಶ್, ಸಿದ್ದರಾಜ್, ಮತ್ತು ಸಾರ್ವಜನಿಕರು ಮುಖಂಡರು ಉಪಸ್ಥಿತರಿದ್ದರು.