ಶಿವಮೊಗ್ಗ ನ್ಯೂಸ್…
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರ ನಿರ್ಲಕ್ಷ್ಯದಿಂದಲೇ ಮೆಗ್ಗಾನ್ ಆಸ್ಪತ್ರೆ ದುಸ್ಥಿತಿಗೆ ಬರಲು ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಇಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಯಂತ್ರಗಳ ಸೌಲಭ್ಯ ನೀಡಲು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮೆಗ್ಗಾನ್ ಆಸ್ಪತ್ರೆ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದರು.ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಾಗಿ ಬೇಕಾಗಿರುವ ಯಂತ್ರಗಳು ಹಾಳಾಗಿ ಸ್ಥಗಿತಗೊಂಡಿವೆ. ಇದರಿಂದ ರೋಗಿಗಳು ಕಂಗಾಲಾಗಿದ್ದಾರೆ. ಎಂ.ಆರ್.ಐ., ಡಯಾಲಿಸಿಸ್, ಸಿ.ಟಿ. ಎಕ್ಸ್ ರೇ, ಸ್ಕ್ಯಾನ್ ಈ ಎಲ್ಲಾ ಯಂತ್ರಗಳು ಸಂಪೂರ್ಣವಾಗಿ ದುರಸ್ತಿಗೆ ಬಂದಿವೆ. ಯಂತ್ರಗಳು ಹಾಳಾಗಿ ತಿಂಗಳುಗಳೇ ಕಳೆದಿದ್ದು, ರಿಪೇರಿಗೂ ಹಣ ಇಲ್ಲದೇ ಮೆಗ್ಗಾನ್ ಆಸ್ಪತ್ರೆ ದಟ್ಟ ದರಿದ್ರ ಸ್ಥಿತಿಗೆ ಬಂದು ನಿಂತಿದೆ.
ಇದು ಬಿಜೆಪಿ ಸರ್ಕಾರದ ನಿರ್ಲಕ್ಷ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರ ಉದಾಸೀನತೆಯೂ ಇದಕ್ಕೆ ಕಾರಣ ಎಂದು ದೂರಿದರು.ರೋಗದಿಂದ ಬಳಲುತ್ತಿರುವ ವ್ಯಕ್ತಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾದರೆ ಅವನ ಕತೆ ಮುಗಿಯಿತು ಎಂದೇ ಅರ್ಥ. ಅಲ್ಲಿನ ವೈದ್ಯರು ಬಿಪಿ, ಶುಗರ್, ರಕ್ತ, ಮೂತ್ರದಂತಹ ಚಿಕ್ಕ ಪುಟ್ಟ ಪರೀಕ್ಷೆಗೂ ಹೊರಗಡೆ ಕಳಿಸುತ್ತಾರೆ. ಹೆರಿಗೆ ವಿಭಾಗವಂತೂ ಅವ್ಯವಸ್ಥೆಯ ಆಗರವಾಗಿದೆ. ತಾಯಿ ಮಗು ಸುರಕ್ಷಿತವಾಗಿ ಹೆರಿಗೆಯಾಗಿ ಬರುವುದೇ ಕಷ್ಟವಾಗಿದೆ. ಸರ್ಕಾರದ ಯೋಜನೆಯಾದ ನಗು –ಮಗು ಸ್ಕೀಂ ಸದ್ದಿಲ್ಲದೇ ನಿಂತು ಹೋಗಿದೆ ಎಂದು ದೂರಿದರು.
ಈಗಲಾದರೂ ಸಚಿವ ಕೆ.ಎಸ್. ಈಶ್ವರಪ್ಪ ಸಾರ್ವಜನಿಕರ ಆರೋಗ್ಯದ ಬ್ಗಗೆ ಗಮನ ಹರಿಸಿ ಉದಾಸೀನ ಬಿಟ್ಟು ಸರ್ಕಾರದ ಗಮನಕ್ಕೆ ತಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಕೆಟ್ಟು ಹೋಗಿರುವ ಯಂತ್ರಗಳನ್ನು ದುರಸ್ತಿಗೊಳಿಸಿ ಜನರ ಪ್ರಾಣ ಕಾಪಾಡಬೇಕು. ಇಲ್ಲದೇ ಹೋದರೆ ಜಿಲ್ಲಾ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಪಿ. ಶೇಷಾದ್ರಿ, ಇಸ್ಮಾಯಿಲ್ ಖಾನ್, ದೇವೇಂದ್ರಪ್ಪ, ವೈ.ಹೆಚ್. ನಾಗರಾಜ್, ಯಮುನಾ ರಂಗೇಗೌಡ, ರಾಮೇಗೌಡ, ಚಂದ್ರಭೂಪಾಲ್, ಆರೀಫ್, ಮಧುಸೂದನ್, ಇಕ್ಕೇರಿ ರಮೇಶ್, ಚೇತನ್, ರಾಜು, ಜಗದೀಶ್, ಎನ್.ಡಿ. ಪ್ರವೀಣ್, ರೇಷ್ಮಾ, ತಬಸ್ಸುಮ್, ಕೌಸರ್, ಅರ್ಚನಾ, ಸೌಗಂಧಿಕಾ, ಧರ್ಮರಾಜ್, ಎಸ್.ಟಿ. ಶ್ರೀನಿವಾಸ್, ಯು.ಕೆ. ಪ್ರಕಾಶ್, ಚಂದನ್, ಜಿ.ಡಿ. ಮಂಜುನಾಥ್, ಸ್ಟೆಲ್ಲಾ ಮಾರ್ಟಿನ್, ಚಂದ್ರಕಲಾ, ಸಂಧ್ಯಾರಾಣಿ, ಪುಷ್ಪಾ, ಸುವರ್ಣಾ ಮೊದಲಾದವರಿದ್ದರು.